ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಔಷಧಿ ಸಹಕಾರಿ: ಡಾ. ವೀಣಾ ಕಾರಂತ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಕರ್ನಾಟಕ ಸರಕಾರ, ಆಯುಷ್ ಇಲಾಖೆ ಬೆಂಗಳೂರು, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆಯುಷ್ ಇಲಾಖೆ ಉಡುಪಿ, ತಾಲೂಕು ಆಯುಷ್ ಘಟಕ ಕುಂದಾಪುರ, ಸರಕಾರಿ ಆಯುರ್ವೇದ ಚಿಕಿತ್ಸಾಲಯ ಕಾಲ್ತೋಡು ಮತ್ತು ಗೀತಾನಂದ ಫೌಂಡೇಶನ್ ಕೋಟ ಇವರ ಸಹಯೋಗದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳಿಗೆ ಆಯುಷ್ ಔಷಧಿ ವಿತರಣಾ ಕಾರ್ಯಕ್ರಮ ಗಂಗೊಳ್ಳಿಯ ಪೊಲೀಸ್ ಠಾಣೆಯಲ್ಲಿ ಗುರುವಾರ ಜರಗಿತು.

ಕಾಲ್ತೋಡು ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ವೀಣಾ ಕಾರಂತ್ ಅವರು ಮನುಷ್ಯನ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಔಷಧಿಗಳು ಸಹಕಾರಿಯಾಗುತ್ತದೆ. ಹಿಂದಿನಿಂದ ಪೂರ್ವಜರು ಬಳಸುತ್ತಿದ್ದ ಗಿಡಮೂಲಿಕೆ ಔಷಧಿಗಳು, ಆಯುರ್ವೇದ ಔಷಧಿಗಳನ್ನು ಸೇವಿಸುವುದರಿಂದ ಮನುಷ್ಯನಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗಿ, ಕೋವಿಡ್-೧೯ ವೈರಸ್‌ನಿಂದ ರಕ್ಷಣೆ ಪಡೆಯಲು ಸಹಾಯವಾಗುತ್ತದೆ. ಕರೋನಾ ತಡೆಗಟ್ಟುವ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೇಂದ್ರ ಆಯುಷ್ ಸಚಿವಾಲಯ ಅನುಮೋದಿತ ಆಯುಷ್ ಔಷಧಿಗಳನ್ನು ಕರೋನಾ ವೈರಸ್ ನಿರ್ಮೂಲನೆಯಲ್ಲಿ ಮುಂಚೂಣಿಯಲ್ಲಿರುವ ಪೊಲೀಸ್ ಸಿಬ್ಬಂದಿಗಳಿಗೆ ವಿತರಿಸಲಾಗುತ್ತಿದ್ದು, ಇದರ ಸದುಪಯೋಗವನ್ನು ಪೊಲೀಸ್ ಸಿಬ್ಬಂದಿಗಳು ಪಡೆದುಕೊಳ್ಳಬೇಕು ಎಂದು ಹೇಳಿದರು.

ತಾಲೂಕು ಆಯುಷ್ ಘಟಕದ ವೈದ್ಯಾಧಿಕಾರಿ ಡಾ. ಅಶೋಕ ಅವರು ಗಂಗೊಳ್ಳಿ ಪೊಲೀಸ್ ಠಾಣೆ ಎಸ್ಪೈ ಭೀಮಾಶಂಕರ್ ಅವರಿಗೆ ಆಯುಷ್ ಔಷಧಿ ಕಿಟ್ ವಿತರಿಸಿದರು. ಎಎಸ್‌ಐ ಜಯರಾಮ್, ಪತ್ರಕರ್ತ ಬಿ.ರಾಘವೇಂದ್ರ ಪೈ, ಗೋಪಾಲ ಚಂದನ್, ವೈಷ್ಣವಿ ಗೋಪಾಲ್, ಪೊಲೀಸ್ ಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಹೆಡ್ ಕಾನ್‌ಸ್ಟೇಬಲ್ ಗಿರೀಶ್ ಸ್ವಾಗತಿಸಿದರು. ಹೆಡ್ ಕಾನ್‌ಸ್ಟೇಬಲ್ ರವಿಚಂದ್ರ ವಂದಿಸಿದರು.

 

Leave a Reply

Your email address will not be published. Required fields are marked *

15 − 7 =