ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ರೋಟರಿ ಸಂಸ್ಥೆಯು ಕರೋನಾ ಪ್ರತಿಕೂಲ ಸನ್ನಿವೇಶಗಳಲ್ಲಿಯೂ ಕ್ರಿಯಾಶೀಲವಾಗಿ ಸಮಾಜಕ್ಕೆ ಸ್ಪಂದಿಸಿದೆ. ರೋಟರಿ ಸಂಸ್ಥೆಯ ಧ್ಯೇಯೋದ್ದೇಶಗಳಿಗೆ ಪೂರಕವಾಗಿ ರೋಟರಿ ಸಂಸ್ಥೆಗಳು ಕೆಲಸ ಮಾಡಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ರೋಟರಿ ಸಂಸ್ಥೆಯ ಸೇವೆ ಲಭಿಸಿದೆ. ಗಂಗೊಳ್ಳಿ ರೋಟರಿ ಸಂಸ್ಥೆ ಇತರ ರೋಟರಿ ಸಂಸ್ಥೆಗಳಿಗೆ ಮಾದರಿಯಾಗಿದ್ದು, ರೋಟರಿಯ ವಿವಿಧ ಅನುದಾನಗಳನ್ನು ಸಮರ್ಪಕವಾಗಿ ಸದ್ಭಳಕೆ ಮಾಡಿಕೊಂಡು ಸಮಾಜದ ಅಭಿವೃದ್ಧಿಗೆ ಕೈಜೋಡಿಸಿರುವುದು ರೋಟರಿ ಜಿಲ್ಲೆಗೆ ಹೆಮ್ಮೆ ತರುವ ಸಂಗತಿಯಾಗಿದೆ ಎಂದು ರೋಟರಿ ಜಿಲ್ಲೆ 3182ರ ಗವರ್ನರ್ ರಾಜಾರಾಮ ಭಟ್ ಹೇಳಿದರು.
ಜಿಲ್ಲಾ ರೋಟರಿ ಗವರ್ನರ್ ವಾರ್ಷಿಕ ಅಧಿಕೃತ ಭೇಟಿ ಅಂಗವಾಗಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರೋಟರಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಬಿ.ಲಕ್ಷ್ಮೀಕಾಂತ ಮಡಿವಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಸಿಸ್ಟೆಂಟ್ ಗವರ್ನರ್ ಡಾ.ನಾಗಭೂಷಣ ಉಡುಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಂಗೊಳ್ಳಿಯ ಸೈಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಗೆ ವಾಟರ್ ಫಿಲ್ಟರ್ ಮತ್ತು ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಥರ್ಮಲ್ ಸ್ಕ್ರೀನರ್ ಮತ್ತು ಸ್ಯಾನಿಟೈಸರ್ ಕೊಡುಗೆಯಾಗಿ ನೀಡಲಾಯಿತು. ಜೋನಲ್ ಲೆಫ್ಟಿನೆಂಟ್ ಐ.ನಾರಾಯಣ ಅವರು ಗಂಗೊಳ್ಳಿ ರೋಟರಿಯ ವಾರ್ಷಿಕ ಸಂಚಿಕೆ ‘ಗಂಗಾ’ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಇದೇ ಸಂದರ್ಭ ಡಾ.ಗಿರೀಶ ಕುಲಕರ್ಣಿ ಮತ್ತು ರಾಮಪ್ರಸಾದ್ ಗಂಗೊಳ್ಳಿ ರೋಟರಿ ಕ್ಲಬ್‌ನ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು.
ಬಿ.ಲಕ್ಷ್ಮೀಕಾಂತ ಮಡಿವಾಳ ಸ್ವಾಗತಿಸಿದರು. ಕಾರ್ಯದರ್ಶಿ ಎಂ.ನಾಗೇಂದ್ರ ಪೈ ವರದಿ ವಾಚಿಸಿದರು. ಉಪನ್ಯಾಸಕಿ ಸುಗುಣ ಗವರ್ನರ್ ಅವರನ್ನು ಪರಿಚಯಿಸಿದರು. ಉಪನ್ಯಾಸಕ ನಾರಾಯಣ ಇ.ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು. ಮಾಜಿ ಅಧ್ಯಕ್ಷ ಕೆ.ರಾಮನಾಥ ನಾಯಕ್ ವಂದಿಸಿದರು.