ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಲಸಿಕೆ ನೀಡುವುದರಲ್ಲಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದ್ದು ಈ ವಿಚಾರದಲ್ಲಿ ಹಿರಿಯ ನಾಗರಿಕರು ಮತ್ತು 45 ವರ್ಷ ಮೇಲ್ಪಟ್ಟವರು ಆತಂಕಕ್ಕೀಡಾಗಿದ್ದು, ಈ ಕುರಿತು ಸರಕಾರ ಮತ್ತು ಆರೋಗ್ಯ ಇಲಾಖೆ ಜನರಲ್ಲಿ ಇರುವ ಗೊಂದಲ ಮತ್ತು ಆತಂಕ ನಿವಾರಿಸಬೇಕು ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಆಗ್ರಹಿಸಿದ್ಧಾರೆ.
ಬಹಳಷ್ಟು ಹಿರಿಯ ನಾಗರಿಕರು ಒಂದು ಡೋಸ್ ಲಸಿಕೆ ತೆಗೆದುಕೊಂಡು 60 ದಿನವಾದರೂ ಇನ್ನೊಂದು ಡೋಸ್ ಲಸಿಕೆ ಲಭ್ಯವಾಗಿಲ್ಲ.ಆರೋಗ್ಯ ಇಲಾಖೆಯ ಪ್ರಕಟಣೆ ಪ್ರಕಾರ ಒಂದು ಡೋಸ್ ಲಸಿಕೆ ಪಡೆದು 4 ವಾರದಲ್ಲಿ 2 ನೇ ಡೋಸ್ ಲಸಿಕೆ ಪಡೆಯಬೆೇಕು.ಈ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರು ಲಾಕ್‌ಡೌನ್ ನಡುವೆ ಲಸಿಕಾ ಕೇಂದ್ರಕ್ಕೆ ಅಲೆದಾಡುತಿದ್ದಾರೆ. ಮೊದಲ ಡೋಸ್ ಕೋ ವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಸದ್ಯಕ್ಕೆ ಲಭ್ಯವಿಲ್ಲ ಎಂದು ಲಸಿಕಾ ಕೇಂದ್ರದಲ್ಲಿ ತಿಳಿಸುತ್ತಿದ್ದಾರೆ. ಈ ಬಗ್ಗೆ ಹಿರಿಯ ನಾಗರಿಕರಲ್ಲಿ ಗೊಂದಲ ಸೃಷ್ಟಿಯಾಗಿದೆ. ನಿಗದಿತ ಸಮಯಕ್ಕೆ 2 ನೇ ಡೋಸ್ ಲಸಿಕೆ ತೆಗೆದುಕೊಳ್ಳದ ಕಾರಣ ತಾವು ತೆಗೆದು ಮೊದಲ ಡೋಸ್ ವ್ಯರ್ಥವಾಗಿದೆ ಎನ್ನುವ ಸಂಶಯ ಅವರಲ್ಲಿರುವ ಕಾರಣ ಅವರಿಗೆ ಕೂಡಲೇ ಲಸಿಕೆ ನೀಡಬೇಕು ಮತ್ತು ಅವರಲ್ಲಿರುವ ಸಂಶಯ ನಿವಾರಿಸಬೇಕು ಎಂದಿದ್ದಾರೆ.
45 ವರ್ಷ ಮೇಲ್ಪಟ್ಟವರರು ತಮಗೂ ಇದೇ ಸಮಸ್ಯೆ ಎದುರಾಗಬಹುದು ಎನ್ನುವ ಭೀತಿಯಲ್ಲಿದ್ದಾರೆ. ಈ ಎರಡು ಹಂತ ಯಶಸ್ವಿಯಾಗಿ ಮುಗಿಸಿ 18 ವರ್ಷ ಮೇಲಿನವರಿಗೆ ಲಸಿಕೆ ನೀಡಲು ಪ್ರಾರಂಭಿಸಬಹುದಿತ್ತು.ಯೋಜನೆ ಮತ್ತು ಯೋಚನೆ ಇಲ್ಲದ ಸರಕಾರದ ಘೋಷಣೆಯಿಂದ ಪ್ರಜೆಗಳು ಹೈರಾಣಾಗಿದ್ದಾರೆ. 2 ನೇ ಡೋಸ್ ಲಸಿಕೆಗೆ ಅಲೆದಾಡುವ ಪರಿಸ್ಥಿತಿ ನಿವಾರಿಸಬೇಕು. 2 ನೇ ಲಸಿಕೆ ವಿಳಂಬದ ದುಷ್ಪರಿಣಾಮದ ಕುರಿತು ಜನರಿಗೆ ತಿಳುವಳಿಕೆ ನೀಡಬೇಕು. ಕಳೆದ ಒಂದು ವಾರದಿಂದ ಶ್ರೀಸಾಮಾನ್ಯರ ಈ ಗೊಂದಲಕ್ಕೆ ತೆರೆ ಎಳೆಯಲು ಸಾಧ್ಯವಾಗದಿದ್ದರೆ, ಇಂತಹ ಸರಕಾರ ಅಧಿಕಾರದಲ್ಲಿರುವ ಔಚಿತ್ಯ ಮತ್ತು ಅನಿವಾರ್ಯತೆ ಏನು? .ಕೂಡಲೇ ಸರಕಾರ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ
► ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ – ಮುನ್ನೆಚ್ಚರಿಕೆ ವಹಿಸಲು ಸೂಚನೆ – https://kundapraa.com/?p=48143 .