ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಗ್ರಾಮೀಣ ಭಾಗದಲ್ಲಿ ಕಲಾತಂಡವನ್ನು ಕಟ್ಟಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ರಂಗಭೂಮಿಯಲ್ಲಿ ತನ್ನದೇ ಆದ ಛಾಪನ್ನೂ ಮೂಡಿಸಿರುವ ಲಾವಣ್ಯ ಸಂಸ್ಥೆಯೂ ರಾಜ್ಯ ರಾಜಧಾನಿಯಲ್ಲಿಯೂ ಅಪಾರ ಪ್ರೇಕ್ಷಕವರ್ಗದವರನ್ನು ಹೊಂದಿದೆ. ಇದು ಸಂಸ್ಥೆಯ ಪ್ರಬುದ್ಧ ಕಲಾಭಿನಯವನ್ನು ಸೂಚಿಸುತ್ತದೆ ಎಂದು ಬೈಂದೂರು ಮಾಜಿ ಶಾಸಕರಾದ ಕೆ. ಲಕ್ಷ್ಮೀನಾರಾಯಣ ಹೇಳಿದರು.
ಅವರು ಲಾವಣ್ಯ ಬೈಂದೂರು ಇದರ ನೂತನ ಮೇಲಂತಸ್ತಿನ ಕಟ್ಟಡ ಉದ್ಘಾಟಿಸಿದ ಬಳಿಕ ರಂಗಪಂಚಮಿ2018 ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಾವಣ್ಯ ಅಧ್ಯಕ್ಷ ಗಿರೀಶ್ ಬೈಂದೂರು ಇವರು ವಹಿಸಿದ್ದರು. ಬೈಂದೂರು ಮಾಜಿ ಶಾಸಕರಾದ ಕೆ. ಲಕ್ಷ್ಮೀನಾರಾಯಣ ಇವರು ನೂತನ ಕಟ್ಟಡ ಉದ್ಘಾಟಿಸಿದರು. ಸಂದೀಪನ್ ಆಂಗ್ಲಮಾಧ್ಯಮ ಶಾಲೆ, ನಾಗೂರು ಇದರ ಮುಖ್ಯೋಪಾಧ್ಯಾಯರಾದ ಬಿ.ವಿಶ್ವೇಶ್ವರ ಅಡಿಗ ಬಿಜೂರು ರಂಗ ಪಂಚಮಿ ಉದ್ಘಾಟನೆ ಮಾಡಿದರು. ಭೂಮಿಕಾ ಹಾರಾಡಿ ಇದರ ಸಂಚಾಲಕರಾದ ಬಿ.ಎಸ್.ರಾಮ ಶೆಟ್ಟಿ ಶುಭಶಂಸನೆ ಹೇಳಿದರು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಮುಂಬೈ ಉದ್ಯಮಿ ಗೋವಿಂದ ಬಾಬು ಪೂಜಾರಿ, ಸಮಾಜ ಸೇವಕ ಸಾಯಿದತ್ ಭಟ್ ಬೆಂಗಳೂರು, ಲಾವಣ್ಯದ ೪೦ರ ಉತ್ಸವ ಸಮಿತಿ ಅಧ್ಯಕ್ಷ ಸದಾಶಿವ ಡಿ. ಪಡುವರಿ ಮೊದಲಾದವರು ಉಪಸ್ಥಿತರಿದ್ದರು. ಲಾವಣ್ಯದ ಕಲಾವಿದರಾದ ಉಮೇಶ ಕುಮಾರ್ ಹಾಗೂ ಮಂಜುನಾಥ ಎಸ್. ಶಿರೂರು ಇವರಿಗೆ ಸನ್ಮಾನಿಸಲಾಯಿತು.
ಲಾವಣ್ಯದ ಪ್ರಧಾನ ಕಾರ್ಯದರ್ಶಿ ಬಿ.ಲ ಮೋಹನ ಕಾರಂತ್ ಸ್ವಾಗತಿಸಿದರು, ಕೋಶಾಧ್ಯಕ್ಷ ನಾಗರಾಜ ಪಿ ಯಡ್ತರೆ ವಂದಿಸಿದರು. ಸದಸ್ಯರಾದ ಸುಬ್ರಹ್ಮಣ್ಯ ಜಿ. ಉಪ್ಪುಂದ ಹಾಗೂ ಮಂಜುನಾಥ್ ಶಿರೂರು ಕಾರ್ಯಕ್ರಮ ನಿರೂಪಿಸಿದರು.