ವಾರದೊಳಗೆ ಹೆದ್ದಾರಿ ಅಡಚಣೆ ನಿವಾರಣೆ: ಜಿಲ್ಲಾಧಿಕಾರಿ ಸೂಚನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕಂಡುಬರಬಹುದಾದ ಎಲ್ಲಾ ಸಮಸ್ಯೆಗಳ ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಇರುವ ಅಡಚಣೆ ನಿವಾರಣೆಗೆ ಒಂದು ವಾರದೊಳಗೆ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ನಿರ್ದೇಶಿಸಿದ್ದಾರೆ.

Call us

Call us

Visit Now

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮುಂಬರುವ ಮಳೆಗಾಲದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಸಿದ್ಧತೆ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Click here

Call us

Call us

ಜಿಲ್ಲೆಯ ಹಲವೆಡೆ ಹೆದ್ದಾರಿ ಹಾಗೂ ಚರಂಡಿ ಕಾಮಗಾರಿ ಸಮರ್ಪಕ ರೀತಿಯಲ್ಲಿ ಪೂರ್ಣಗೊಳ್ಳದೇ ಮಳೆಗಾಲದಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇದೆ. ಸರಿಯಾದ ರಿಫ್ಲೆಕ್ಟರ್ ಹಾಗೂ ಫಲಕಗಳನ್ನು ಅಳವಡಿಸದೆ ಜೀವಕ್ಕೆ ಅಪಾಯ ಒದಗಬಹುದು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಗಳು ಕೂಡಲೇ ಕಾರ್ಯಪ್ರವೃತ್ತವಾಗಿ ಜಿಲ್ಲೆಯಲ್ಲಿರುವ ಎಲ್ಲಾ ಹೆದ್ದಾರಿಗಳಲ್ಲಿ ಮಳೆಗಾಲದಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲು ಅವರು ನಿರ್ದೇಶಿಸಿದರು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಸಿದರು.

ಜಿಲ್ಲೆಯ ಎಲ್ಲ ತಹಶೀಲ್ದಾರ್‌ಗಳು ತಮ್ಮ ವ್ಯಾಪ್ತಿಯ ಹೆದ್ದಾರಿಗಳಲ್ಲಿ ಮಳೆಗಾಲದಲ್ಲಿ ಸುಗಮ ವ್ಯವಸ್ಥೆಗೆ ಸಂಬಂಧಿಸಿದಂತೆ ಹೆದ್ದಾರಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಬೇಕು. ಕುಂದಾಪುರ ಉಪವಿಭಾಗಾಧಿಕಾರಿಗಳು ಈ ವಿಷಯದಲ್ಲಿ ನಿರಂತರ ಗಮನಹರಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಚರಂಡಿ ಸ್ವಚ್ಛಗೊಳಿಸಿ: ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಚರಂಡಿಗಳು ಮತ್ತು ರಾಜಕಾಲುವೆಗಳ ಹೂಳನ್ನೆತ್ತಿ, ಮಳೆ ನೀರು ಸರಾಗವಾಗಿ ಹರಿಯುವಂತೆ ಕ್ರಮಕೈಗೊಳ್ಳಬೇಕು. ಈ ಸಂಬಂಧ ನಗರ ಸಂಸ್ಥೆಗಳ ಮುಖ್ಯಾಧಿಕಾರಿಗಳು ಮತ್ತು ಗ್ರಾಮ ಪಂಚಾಯತ್‌ಗಳ ಪಿಡಿಓಗಳು ತಮ್ಮ ವ್ಯಾಪ್ತಿಯಲ್ಲಿ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಅವರು ತಿಳಿಸಿದರು. ಮಳೆಗಾಲದಲ್ಲಿ ಸ್ವಚ್ಚತೆಯನ್ನು ಕಾಪಾಡಿ ರೋಗರುಜಿನಗಳು ಹರಡದಂತೆ ಎಚ್ಚರಿಕೆ ವಹಿಸಬೇಕು, ಸ್ಥಳೀಯ ಸಂಸ್ಥೆಗಳಲ್ಲಿ ಮತ್ತು ತಾಲೂಕು ಕಚೇರಿಗಳಲ್ಲಿ ಕಂಟ್ರೋಲ್ ರೂಂಗಳನ್ನು ದಿನದ ೨೪ ಗಂಟೆ ತೆರೆದಿಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಅರಣ್ಯ ಇಲಾಖೆಯು ಹೆದ್ದಾರಿ, ರಸ್ತೆ, ಕಟ್ಟಡಗಳ ಮೇಲೆ ಮಳೆ ಬಂದಾಗ, ಗಾಳಿ ಮಳೆಯಿಂದ, ವಿದ್ಯುತ್ ವಿಫಲದಿಂದ ದೊಡ್ಡ ದೊಡ್ಡ ಮರಗಳು ಉರುಳಿ ಬಿದ್ದು ಹೋದಾಗ ತಕ್ಷಣಕ್ಕೆ ಸ್ಪಂದಿಸಿ ಮರಗಳನ್ನು ತೆರೆವುಗೊಳಿಸಿ ವಾಹನ ಸಂಚಾರಕ್ಕೆ ರಸ್ತೆಗಳನ್ನು ಅನುವು ಮಾಡಿಕೊಡಬೇಕು ಎಂದರು.

ಮಳೆಗಾಲದಲ್ಲಿ ಸಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಿ ತಡೆಗೆ ಕ್ರಮ ಕೈಗೊಂಡು, ಎಲ್ಲಾ ಕಾಯಿಲೆಗಳಿಗೆ ಬೇಕಾಗುವ ಔಷಧ ಚುಚ್ಚುಮದ್ದು ಇತ್ಯಾದಿ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಡಬೇಕು, ಆರೋಗ್ಯ ಇಲಾಖೆಯ ಕಂಟ್ರೋಲ್ ರೂಂಗಳನ್ನು ದಿನ ೨೪ ಗಂಟೆ ತೆರೆದು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸನ್ನದ್ದರಾಗಿರುವಂತೆ, ಸೂಕ್ತ ನಿರ್ದೇಶನ ನೀಡಬೇಕು. ಆಂಬ್ಯುಲೆನ್ಸ್‌ಗಳು ವೈದ್ಯಕೀಯ ಸೌಲಭ್ಯಗಳ ಸಹಿತ ಸನ್ನದ್ದರಾಗಿರಬೇಕು ಹಾಗೂ ಮಳೆಗಾಲದಲ್ಲಿ ಮಾನವ ಅಸಹಜ ಸಾವು ಸಂಭವಿಸಿದರೆ ಮರಣೋತ್ತರ ವರದಿಯನ್ನು ಕೂಡಲೇ ಒದಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಅಗತ್ಯ ಬಿದ್ದರೆ ಶಾಲಾ ಕಟ್ಟಡಗಳ ಬಳಕೆ: ಶಿಕ್ಷಣ ಇಲಾಖೆಯು ಮಳೆಗಾಲದ ತುರ್ತು ಸಂದರ್ಭಗಳಲ್ಲಿ ಅಗತ್ಯವಿದ್ದಾಗ ಗಂಜಿ ಕೇಂದ್ರಗಳ ಸ್ಥಾಪನೆ ವ್ಯವಸ್ಥೆಗೆ ಸೂಕ್ತ ಶಾಲಾ ಕಟ್ಟಡಗಳನ್ನು ಒದಗಿಸಬೇಕು, ಮಳೆಗಾಲದಲ್ಲಿ ಈಜಾಡಲು ಹೋಗಿ ಶಾಲಾ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಮೃತರಾಗುತ್ತಿರುವುದರಿಂದ ಈ ಸಾಲಿನ ಮಳೆಗಾಲದಲ್ಲಿ ರಜಾ ದಿನಗಳಂದು ಈಜಾಡಾಲು ಹೋಗದಂತೆ ಮಕ್ಕಳಿಗೆ ತಿಳಿಯಪಡಿಸಿ ಅವರ ಮೇಲೆ ನಿಗಾವಹಿಸುವಂತೆ ಜೂನ್ ತಿಂಗಳಲ್ಲಿ ಶಾಲಾ ಪ್ರಾರಂಭವಾಗುವ ಸಮಯದಲ್ಲಿ ಮಕ್ಕಳಿಗೆ ಹಾಗೂ ಮಕ್ಕಳ ಪೋಷಕರ ಸಭೆ ನಡೆಸಿ ಮಾಹಿತಿ ನೀಡಬೇಕು ಎಂದರು.

ಮಳೆಗಾಲದಲ್ಲಿ ಮರಗಳು ಬಿದ್ದು ವಿದ್ಯುತ್ ಸ್ಥಗಿತಗೊಂಡರೆ ತಕ್ಷಣವೇ ಪುನರ್ ಸಂಪರ್ಕ ಬಗ್ಗೆ ಕ್ರಮ ಕೈಗೊಳ್ಳುವಂತೆ, ಹಾಗೂ ತುರ್ತು ಕೆಲಸಗಳ ನಿರ್ವಹಣೆಗಾಗಿ ಕಂಟ್ರೋಲ್ ರೂಮ್ ತೆರೆದು ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕರಿಗೆ ತಿಳಿಸಲು ಹೆಪ್ಸಿಬಾ ರಾಣಿ ಅವರು ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.

ಅಗ್ನಿ ಶಾಮಕ ದಳವು ಮಳೆಗಾಲಕ್ಕೆ ರಕ್ಷಣಾ ಸಾಮಾಗ್ರಿಯೊಂದಿಗೆ ಸನ್ನದ್ದರಾಗಿರಬೇಕು, ನೆರೆ ಉಂಟಾದಲ್ಲಿ ಅವಶ್ಯ ಬೋಟುಗಳನ್ನು ಸಿದ್ಧವಾಗಿರಿಸಲು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.

ತಗ್ಗು ಪ್ರದೇಶಗಳಲ್ಲಿ, ಸೇತುವೆಗಳ ಬದಿಗಳಲ್ಲಿ, ನದಿ ದಂಡೆಗಳು ಶಿಥಿಲ ಅವಸ್ಥೆಯಲ್ಲಿರುವುದನ್ನು ಪತ್ತೆ ಹಚ್ಚಿ ಕಿಂಡಿ ಅಣೆಕಟ್ಟು ನದಿ ದಂಡೆ ಸಂರಕ್ಷಣೆ ಕಾಮಗಾರಿಗಳನ್ನು ಕೈಗೊಳ್ಳಲು ಹಾಗೂ ಮಳೆಗಾಲದಲ್ಲಿ ನದಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಕಿಂಡಿ ಅಣೆಕಟ್ಟುಗಳಿಗೆ ಹಾಕಿರುವ ಹಲಗೆ ಗೇಟುಗಳನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಮಲ್ಪೆ ಬಂದರು: ಮಳೆಗಾಲ ಪ್ರಾರಂಭವಾಗುವುದರಿಂದ ಯಾಂತ್ರೀಕೃತ ಮೀನುಗಾರಿಕೆ ದೋಣೆಗಳನ್ನು ಬಳಸಿ ಮೀನು ಹಿಡಿಯುವುದನ್ನು ಹಾಗೂ ಆಳ ಸಮುದ್ರ ಬಹುದಿನಗಳ ಮೀನುಗಾರಿಕೆ ದೋಣಿಗಳನ್ನು ಬಳಸಿ ಮೀನು ಹಿಡಿಯುವುದನ್ನು ನಿಷೇಧಿಸಬೇಕು, ಹವಾಮಾನ ಇಲಾಖೆಯಿಂದ ಬರುವ ಸಂದೇಶಗಳನ್ನು ಮೀನುಗಾರರಿಗೆ ಕೂಡಲೇ ತಲುಪಿಸಲು ಅವರು ಮೀನುಗಾರಿಕಾ ಅಧಿಕಾರಿಗಳಿಗೆ ತಿಳಿಸಿದರು.

ಕೂಡಲೇ ಪರಿಹಾರ ವಿತರಣೆ: ಪ್ರಾಕೃತಿಕ ವಿಕೋಪ ಪರಿಹಾರ ಪಾವತಿಗೆ ಸಂಬಂಧಿಸಿ ಆಯಾಯ ತಾಲೂಕು ತಹಶೀಲ್ದಾರರಿಗೆ ಬಿಡುಗಡೆ ಮಾಡಿರುವ ಅನುದಾನದಿಂದ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಪರಿಹಾರ ಪಾವತಿಯನ್ನು ಆಯಾ ತಹಶೀಲ್ದಾರುಗಳು ಕೂಡಲೇ ನೀಡಬೇಕು, ತಾಲೂಕು ಕಛೇರಿಗಳಲ್ಲಿ ತುರ್ತು ವಿಪತ್ತು ನಿರ್ವಹಣೆಗಾಗಿ ಕಂಟ್ರೋಲ್ ರೂಮ್ ತೆರೆದು ೨೪ ಗಂಟೆ ಈ ಕಂಟ್ರೋಲ್ ರೂಮ್‌ಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಗಳನ್ನು ನಿಯೋಜಿಸಬೇಕು. ತಾಲೂಕುಗಳಲ್ಲಿ ಲಭ್ಯವಿರುವ ಬೋಟುಗಳ ಮತ್ತು ಈಜುಗಾರರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿಟ್ಟು ಮುಂಜಾಗೃತ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳು ತಹಶೀಲ್ದಾರ್‌ಗಳಿಗೆ ಸೂಚಿಸಿದರು.

ಕೋರೆಯಲ್ಲಿ ಅವಘಡ- ಕ್ರಿಮಿನಲ್ ಕೇಸ್: ಉಡುಪಿ ಜಿಲ್ಲೆಯಲ್ಲಿ ಕಲ್ಲುಕೋರೆ ಮತ್ತು ಗಣಿಗಾರಿಕೆ ನಡೆದಂತಹ ಪ್ರದೇಶದಲ್ಲಿ ಆಗಿರುವ ಗುಂಡಿಗಳಲ್ಲಿ ನಿಂತ ನೀರಿನಲ್ಲಿ ಈಜಾಡಲು ಹೋಗುವುದರಿಂದ ಜೀವಹಾನಿಗಳಾಗುತ್ತಿರುವುದರಿಂದ ಗಣಿಗಾರಿಕೆ ನಡೆಸಿದ ಪ್ರದೇಶದಲ್ಲಿ ಆಗಿರುವ ಗುಂಡಿಗಳಲ್ಲಿ ಈಜಾಟವನ್ನು ನಿಷೇಧಿಸಿದೆ ಎಂಬ ಬಗ್ಗೆ ಎಚ್ಚರಿಕಾ ಫಲಕವನ್ನು ಅಳವಡಿಸಬೇಕು. ಗುಂಡಿಯಲ್ಲಿ ನಿಂತ ನೀರಲ್ಲಿ ಈಜಲು ಹೋಗಿ ಏನಾದರೂ ಅವಘಡ ಸಂಭವಿಸಿದಲ್ಲಿ ಸಂಬಂಧಪಟ್ಟ ಗಣಿ ಮಾಲಕರು/ಗುತ್ತಿಗೆದಾರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅವರು ನಿರ್ದೇಶಿಸಿದರು.

ಪೋಲಿಸ್ ಇಲಾಖೆ, ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ, ಅಗ್ನಿಶಾಮಕ ಇಲಾಖೆ, ನಗರಸಭೆ, ಪುರಸಭೆ ಪಟ್ಟಣ ಪಂಚಾಯತ್, ತಾಲೂಕು ಕಛೇರಿ ಮೆಸ್ಕಾಂ, ತಾಲೂಕು ಪಂಚಾಯತ್ ಕಛೇರಿಗಳಲ್ಲಿ ತುರ್ತು ವಿಪತ್ತು ನಿರ್ವಹಣೆಗಾಗಿ ಕಂಟ್ರೋಲ್ ರೂಮ್ ತೆರೆದು ೨೪ ಗಂಟೆ ಈ ಕಂಟ್ರೋಲ್ ರೂಮ್‌ಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಗಳನ್ನು ನಿಯೋಜಿಸಿ ಸ್ವೀಕೃತಿಯಾಗುವ ದೂರುಗಳಿಗೆ ಕ್ಷಿಪ್ರವಾಗಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ. ರೂಪೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

one × two =