ಕುಂದಾಪ್ರ ಡಾಟ್ ಕಾಂ ವರದಿ
ಬೈಂದೂರು: ಕೆಲವೊಂದು ಕಾರ್ಯಕ್ರಮಗಳು ತನ್ನದೇ ಆದ ಕಾರಣಗಳಿಂದಾಗಿ ವಿಶೇಷ ಸುದ್ದಿಯಾಗುತ್ತದೆ. ಕೆಲವು ವ್ಯಕ್ತಿಗಳು ಅವರದ್ದೇ ಆದ ಭಿನ್ನ ನಿಲುವಿನಂದಾಗಿ ಪ್ರಶಂಸೆಗೆ ಪಾತ್ರರಾಗುತ್ತಾರೆ. ಇತ್ತಿಚಿಗೆ ನಡೆದ ಕಾರ್ಯಕ್ರಮವೊಂದು ಅಂತಹದ್ದೇ ಸಂದರ್ಭಕ್ಕೆ ಸಾಕ್ಷಿಯಾಯಿತು. ನಿವೃತ್ತಿಯ ವೇಳೆಗೆ ಅಭಿನಂದನೆ ಸ್ವೀಕರಿಸಿ ತೆರಳುವ ಮುಖ್ಯೋಪಧ್ಯಾಯರು, ತನ್ನ ವೃತ್ತಿ ಬದುಕಿನಲ್ಲಿ ಸಹಕರಿಸಿದವರನ್ನೆಲ್ಲಾ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.
ಜುಲೈ ತಿಂಗಳಿನಲ್ಲಿ ಸೇವೆಯಿಂದ ನಿವೃತ್ತರಾಗಲಿರುವ ಬೈಂದೂರು ರತ್ತುಬಾಯಿ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿ. ಎಸ್. ಭಟ್ ಅವರನ್ನು ಗೌರವಿಸಲು ಪೋಷಕರು, ಶಿಕ್ಷಕರು ಇತ್ತೀಚೆಗೆ ಹಮ್ಮಿಕೊಂಡ ಸಮಾರಂಭದ ಪ್ರಥಮಾರ್ಧದಲ್ಲಿ ಭಟ್ ಅವರು ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ಸಹೋದ್ಯೋಗಿಗಳಿಗೆ, ನೆರವಾದ ದಾನಿಗಳಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಕಾರ್ಯಕ್ರಮ ವಿಶಿಷ್ಟವೆನಿಸುವಂತೆ ಮಾಡಿದರು.
ಮೊದಲು ತನ್ನೊಂದಿಗೆ ದುಡಿಯುತ್ತಿರುವ ಶಿಕ್ಷಕರು ಮತ್ತು ಸಿಬ್ಬಂದಿಗಳಾದ ಡಿ. ಸಿ. ಹಾಸ್ಯಗಾರ್, ಮಂಜು ಕಾಳಾವರ, ಚಂದ್ರ ಕೆ, ಆನಂದ ಮದ್ದೋಡಿ, ಪ್ರಕಾಶ ಮಾಕೋಡಿ, ಶ್ರೀಧರ ಗಾಣಿಗ, ನಿರ್ಮಲಾ, ಪಾರ್ವತಿ, ಗಿರಿಜಾ, ಸುಮನಾ, ಚೈತ್ರಾ, ಸ್ವಾತಿ, ಅಡುಗೆಯವರಾದ ಲಕ್ಷ್ಮಕ್ಕ, ಗಿರಿಜಾ, ಕೋಮಲಾ, ನಿವೃತ್ತ ಶಿಕ್ಷಕಿ ಸಾವಿತ್ರಿ, ಗೌರವ ಶಿಕ್ಷಕಿಯಾಗಿದ್ದ ಸ್ಮಿತಾ ಪ್ರಸಾದ್ ಅವರಿಗೆ ಜಿ. ಎಸ್. ಭಟ್ ಮತ್ತು ಶ್ವೇತಾ ಭಟ್ ದಂಪತಿ ನೆನಪಿನ ಕಾಣಿಕೆ ನೀಡಿ ಕೃತಜ್ಞತೆ ಸಲ್ಲಿಸಿದರು. ವಿವಿಧ ಸಂದರ್ಭಗಳಲ್ಲಿ ನೆರವು ನೀಡಿದ್ದ ಬಿ. ರಾಮಕೃಷ್ಣ ಶೇರುಗಾರ್, ರತ್ನಾಕರ ಶೆಟ್ಟಿ, ರಮೇಶ ಕಾರಂತ್, ಜೈಸನ್ ಎಂ. ಡಿ, ಮೈಕಲ್ ಲೋಬೊ, ಫಾತಿಮಾ ಲೋಬೊ, ರಘುರಾಮ ಪೂಜಾರಿ, ರಾಧಾ, ಬಿ. ಎಂ. ಉನ್ನ್ನಿ, ಅಶೋಕ ಪಡುವರಿ, ಅರವಿಂದ ಪೂಜಾರಿ, ಸಂತೋಷ ಪೂಜಾರಿ, ಕರ್ನಲ್ ನರಸಿಂಹ ನಾಯಕ್, ಮತ್ತಿತರರನ್ನು ಗೌರವಿಸಿದರು.
ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಾವುಂದದ ರಿಚರ್ಡ್ ಆಲ್ಮೇಡ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಸ್. ನಾರಾಯಣ ರಾವ್ ಪ್ರಧಾನ ಭಾಷಣ ಮಾಡಿ ಜಿ.ಎಸ್.ಭಟ್ ಅವರ ಕಾರ್ಯಕ್ಷಮತೆ, ಅನುಭವ ಅವರ ನಿವೃತ್ತಿಯ ಬಳಿಕವೂ ಶಿಕ್ಷಣ ಕ್ಷೇತ್ರಕ್ಕೆ ದೊರಕಬೇಕು ಎಂದರು. ರಾಜು ದೇವಾಡಿಗ, ಜ್ಯೋತಿ ಬಿ, ಬಿ. ವಿಶ್ವೇಶ್ವರ ಅಡಿಗ, ಬಿ. ರಾಮಕೃಷ್ಣ ಶೇರುಗಾರ್, ಸಿಲ್ವೆಸ್ಟರ್ ಆಲ್ಮೇಡ, ರಘುರಾಮ ಪೂಜಾರಿ, ಗಣೇಶ ಪೂಜಾರಿ, ಜೈಸನ್ ಎಂ.ಡಿ, ಸುಬ್ರಹ್ಮಣ್ಯ ಪುರಾಣಿಕ್ ಉಪಸ್ಥಿತರಿದ್ದರು.
ಮಧ್ಯಾಹ್ನದ ಬಳಿಕ ಜಿ. ಎಸ್. ಭಟ್ ಅವರ ಸನ್ಮಾನ ನಡೆಯಿತು. ಸಂಸ್ಥೆಯ ಆಡಳಿತ ಸಮಿತಿ ಅಧ್ಯಕ್ಷ, ಶಾಸಕ ಕೆ. ಗೋಪಾಲ ಪೂಜಾರಿ ಭಟ್ ದಂಪತಿಯನ್ನು ಸನ್ಮಾನಿಸಿದರು. ಗಣೇಶ ಪೂಜಾರಿ ಸ್ವಾಗತಿಸಿದರು. ಜೈಸನ್ ಎಂ. ಡಿ, ಪ್ರಕಾಶ ಮಾಕೋಡಿ, ರಘುರಾಮ ಪೂಜಾರಿ ಶಾಲೆಯ ಅಭ್ಯುದಯದಲ್ಲಿ ಭಟ್ ಅವರ ಪಾತ್ರವನ್ನು ಸ್ಮರಿಸಿದರು. ನಯನಾ ಸನ್ಮಾನಪತ್ರ ಓದಿದರು. ತಮ್ಮನ್ನು ಸನ್ಮಾನಿಸಿದ ಬಗ್ಗೆ ಭಟ್ ಕೃತಜ್ಞತೆ ಸಲ್ಲಿಸಿದರು. ಮಂಜು ಕಾಳಾವರ ನಿರೂಪಿಸಿದರು.