ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ, ಫೆ 24: ಪದವಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪದ ಮೇಲೆ, ಇಲ್ಲಿನ ಖಾಸಗಿ ಕಾಲೇಜೊಂದರ ಸಾರ್ವಜನಿಕ ಸಂಪರ್ಕಾಧಿಕಾರಿಯನ್ನು(ಪಿಆರ್‌ಓ) ವಜಾಗೊಳಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಇಲ್ಲಿನ ಸಂಗಮ್‌ನ ಕಾಲೇಜು ವಠಾರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ.
ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿ, ವಿದ್ಯಾರ್ಥಿನಿಯರಿಗೆ ರಾತ್ರಿ ಅಶ್ಲೀಲ ಸಂದೇಶ ಕಳಿಸುತ್ತಿರುವ ಆರೋಪಿಸಲಾಗಿತ್ತು. ಈ ಬಗ್ಗೆ ಪ್ರಾಂಶುಪಾಲರಿಗೆ ದೂರು ನೀಡಿದರೂ, ಆಡಳಿತ ಮಂಡಳಿ ಶಿಸ್ತು ಕ್ರಮ ಜರುಗಿಸದೇ ಸುಮ್ಮನುಳಿದ ಕಾರಣ ಕಾಲೇಜು ಮುಂಭಾಗದಲ್ಲಿಯೇ ವಿದ್ಯಾರ್ಥಿಗಳು ಧರಣಿ ನಡೆಸಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿ ಕಾಲೇಜು ಪ್ರಾಂಶುಪಾಲರು ಶಿಸ್ತುಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ. ಆದರೆ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರನ್ನು ಸ್ಥಳಕ್ಕೆ ಕರೆಸಬೇಕೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ಪೋಲಿಸರಿಂದ ಪ್ರತಿಭಟನೆ ತಣಿಸುವ ಪ್ರಯತ್ನ ನಡೆಸಿದರೂ ಫಲಪ್ರದವಾಗಲಿಲ್ಲ.
ಅಂತಿಮವಾಗಿ ಕಾಲೇಜು ಆಡಳಿತ ಮಂಡಳಿ ಆದೇಶದಂತೆ ದಿ.24-02-2022ರಂದು ಸಾರ್ವಜನಿಕ ಸಂಪರ್ಕಾಧಿಕಾರಿಯನ್ನು ಹುದ್ದೆಯಿಂದ ಅಮಾನತುಗೊಳಿಸಿರುವ ಬಗ್ಗೆ ವಿದ್ಯಾರ್ಥಿಗಳಿಗೆ ಕಾಲೇಜು ಸಂದೇಶ ರವಾನಿಸಿದೆ.