ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೇಂದ್ರ ಜಂಟಿ ಕಾರ್ಮಿಕ ಸಂಘಟನೆಗಳ ದೇಶವ್ಯಾಪಿ ಪ್ರತಿಭಟನೆಯ ಕರೆಯ ಮೇರೆಗೆ ಬೈಂದೂರು ತಾಲ್ಲೂಕು ಸಿಐಟಿಯು ಕಾರ್ಮಿಕ ಸಂಘದ ನೇತೃತ್ವದಲ್ಲಿ ಶುಕ್ರವಾರ ಇಲ್ಲಿನ ಸಿಐಟಿಯು ಕಚೇರಿಯಲ್ಲಿ ಕಾರ್ಮಿಕರ ಪ್ರತಿಭಟನಾ ಸಭೆ ನಡೆಯಿತು.
ಬೈಂದೂರು ತಾಲ್ಲೂಕು ಸಿಐಟಿಯು ಮುಖಂಡರಾದ ಗಣೇಶ್ ತೊಂಡೆಮಕ್ಕಿ, ವೆಂಕಟೇಶ್ ಕೋಣಿ ಸಭೆಯನ್ನುದ್ದೇಶಿಸಿ ಮಾತನಾಡಿ, ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲ ಕುಟುಂಬಗಳಿಗೆ ಆರು ತಿಂಗಳ ವರೆಗೆ ಮಾಸಿಕ ರೂ.೭೫೦೦ ಕೊರೊನಾ ಪರಿಹಾರ ನೀಡಬೇಕು, ಎಲ್ಲ ಕಾರ್ಮಿಕರಿಗೆ ಕನಿಷ್ಠ ೬ ತಿಂಗಳು ಉಚಿತ ಪಡಿತರ ವಿತರಿಸಬೇಕು, ಕೇಂದ್ರ ನೌಕರರಿಗೆ ಮತ್ತು ಪಿಂಚಣಿದಾರಿಗೆ ತುಟ್ಟಿಭತ್ಯೆ ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದರು. ಕಾರ್ಮಿಕ ಕಾನೂನು ಬದಲಾವಣೆ, ವಿದ್ಯುತ್ ತಿದ್ದುಪಡಿ ಮಸೂದೆ-೨೦೨೦, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ, ಕಾರ್ಪರೇಟ್ ಭೂಮಾಲೀಕರಿಗೆ ಅನುಕೂಲವಾಗುವ ರೈತ ವಿರೋಧಿ ನೀತಿ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಗಳಿಗೆ ವಿರೋಧ ವ್ಯಕ್ತಪಡಿಸಿದರು. ಕೋವಿಡ್-೧೯ ವೈದ್ಯಕೀಯ ತುರ್ತು ಪರಿಸ್ಥಿತಿ ಎಂದು ಪರಿಗಣಿಸಬೇಕು, ಮುಂಚೂಣಿ ಕೊರೊನಾ ವಾರಿಯರ‍್ಸ್ ಸೇವೆ ಖಾಯಂಗೊಳಿಸಿ ಅವರಿಗೆ ಪೂರ್ಣ ವೇತನ ನೀಡಬೇಕು, ಉದ್ಯೋಗ ಖಾತರಿ ಯೋಜನೆಯನ್ನು ೨೦೦ ದಿನಕ್ಕೆ ಏರಿಸಬೇಕು ಮತ್ತು ಅದನ್ನು ನಗರ ವ್ಯಾಪ್ತಿಗೆ ವಿಸ್ತರಿಸಬೇಕು, ಘೋಷಣೆ ಮಾಡಿದ ರೂ ೫೦೦೦ ತುರ್ತು ನೆರವನ್ನು ಸಮರ್ಪಕವಾಗಿ ಪಾವತಿಸಬೇಕು, ಯೋಜನಾ ಕಾರ್ಮಿಕರಿಗೆ ಕೊರೊನಾ ಕೆಲಸದ ಪ್ರೋತ್ಸಾಹಧನ ನೀಡುವುದಲ್ಲದೆ ಪೂರ್ಣ ವೇತನದೊಂದಿಗೆ ಉದ್ಯೋಗ ನೀಡಬೇಕು ಹಾಗೂ ಲಾಕ್‌ಡೌನ್ ಅವಧಿಗೆ ಸಂಬಳ ಪಾವತಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಸಭೆಯ ಬಳಿಕ ಕಾರ್ಮಿಕರು ಬೈಂದೂರು ಹೆದ್ದಾರಿ ಬಳಿ ಬೇಡಿಕೆಗಳ ಘೋಷಣೆ ಕೂಗಿದರು. ಬೈಂದೂರು ಪೇಟೆಯಲ್ಲಿ ಮೆರವಣಿಗೆ ನಡೆಸಿ ಸಾರ್ವಜನಿಕರಿಗೆ ಕರಪತ್ರ ಹಂಚಿದರು. ಮುಖಂಡರಾದ ರಾಜೀವ್ ಪಡುಕೋಣೆ, ರೊನಾಲ್ಡ್ ರಾಜೇಶ್, ಉದಯ ಗಾಣಿಗ, ಶ್ರೀಧರ್ ಉಪ್ಪುಂದ, ನಾಗರತ್ನ ನಾಡ, ವಿಜಯ ಬಿ, ರಾಮ ಖಂಬದಕೋಣೆ, ಅಮ್ಮಯ್ಯ ಬಿಜೂರ್, ಮಂಜು ಬಡಾಕೆರೆ, ರಾಜೀವ್ ಅರೆಹೊಳೆ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.