ವಿವಿಧ ಸಂಸ್ಥೆಗಳ ನೇತೃತ್ವದಲ್ಲಿ ತ್ರಾಸಿ ಬೀಚ್ ಸ್ವಚ್ಛತಾ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತ್ರಾಸಿ ರಾಜ್ಯದ ಅತ್ಯಂತ ಸುಂದರ ಬೀಚ್ಗಳಲ್ಲಿ ಒಂದು. ದಿನವೂ ಸಾವಿರಾರು ಪ್ರವಾಸಿಗಳು ಭೇಟಿ ನೀಡುವ ಇಲ್ಲಿನ ಸ್ವಚ್ಛತೆ ಕಾಪಾಡುವುದು ಸಂಬಂಧಿಸಿದ ಎಲ್ಲರ ಹೊಣೆ’ ಎಂದು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಹೇಳಿದರು.

ಕುಂದಾಪುರ ಮಿಡ್ ಟೌನ್ ರೋಟರಿ ಕ್ಲಬ್, ಕೋಸ್ಟ್ ಗಾರ್ಡ್ ಮತ್ತು ಪರಿಸರ ಇಲಾಖೆ ಸಹಯೋಗದಲ್ಲಿ ತ್ರಾಸಿ ಬೀಚ್‌ನಲ್ಲಿ ನಡೆದ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ನ 79ನೇ ಸ್ವಚ್ಛತಾ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು. ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಹಮ್ಮಿಕೊಂಡಿರುವ ಅಭಿಯಾನ ಶ್ಲಾಘನೀಯ. ಇತರರಿಗೆ ಪ್ರೇರಣೆ ನೀಡುವಂತಹದು. ಸ್ಥಳೀಯರು ಇದನ್ನು ಮುಂದಕ್ಕೆ ಒಯ್ಯಬೇಕು ಎಂದು ಅವರು ಆಶಿಸಿದರು.

ಬೀಚಿನ ಪ್ರಾಕೃತಿಕ ಸೌಂದರ್ಯ ಕಸದಿಂದ ಮಲಿನಗೊಂಡಿದೆ. ಬೀಚ್ ಪರಿಸರದಲ್ಲಿ ಕಸ ಎಸೆಯದಂತೆ ಸೂಚಿಸುವ ಫಲಕ ಅಳವಡಿಸಬೇಕು ಅಲ್ಲಲ್ಲಿ ಕಸದ ಡಬ್ಬಿ ಇರಿಸಿ, ಅವು ಭರ್ತಿಯಾದಾಗ ವಿಲೇವಾರಿ ಮಾಡುವ ಕೆಲಸವನ್ನು ಸ್ಥಳೀಯ ಸಂಸ್ಥೆಗಳು ಮಾಡಬೇಕು ಎಂದು ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಸದಸ್ಯೆ ಸರಸ್ವತಿ ಪುತ್ರನ್ ಹೇಳಿದರು.

ನವವಿವಾಹಿತ ಪತ್ನಿ ವಿನುಷಾ ಜತೆಯಲ್ಲಿ ಸೋಮೇಶ್ವರ ಬೀಚ್ ಸ್ವಚ್ಛಗೊಳಿಸಿ ಪ್ರಧಾನಿ ಮೋದಿ ಪ್ರಶಂಸೆಗೆ ಪಾತ್ರರಾದ ಬೈಂದೂರಿನ ಅನುದೀಪ್ ಹೆಗ್ಡೆ ಮಾತನಾಡಿ, ಜನರು ಬಳಸಿದ ಬಳಿಕ ಮದ್ಯದ ಬಾಟಲಿ, ನೀರಿನ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುದನ್ನು ನೋಡಿದರೆ ಬೇಸರವಾಗುತ್ತದೆ. ಪ್ರವಾಸಿಗರು ಭೇಟಿ ನೀಡಿದ ಸ್ಥಳಗಳ ಸ್ವಚ್ಛತೆಯಯತ್ತ ಗಮನ ಇರಿಸಿಕೊಳ್ಳಬೇಕು. ಇಂತಹ ಕೆಲಸ ಮಾಡದಿರುವ ಪ್ರಜ್ಞಾವಂತಿಕೆ ಬೆಳೆಸಿಕೊಳ್ಳಬೇಕು ಎಂದರು. 50 ಚೀಲಗಳಷ್ಟು ಕಸವನ್ನು ಹೆಕ್ಕಿ, ಬೇರ್ಪಡಿಸಿ ವಿಲೇವಾರಿ ಮಾಡಲಾಯಿತು.

ಡಿಎಫ್ಒ ಆಶೀಶ್ ರೆಡ್ಡಿ, ಎ. ಡಿ. ಬನವಾಸಿ, ಸೋಮಶೇಖರ್, ಬೈಂದೂರು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಅಬ್ದುಲ್ ರವೂಫ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕರುಣಾಕರ ಶೆಟ್ಟಿ, ರಾಮಕೃಷ್ಣ ದೇವಾಡಿಗ, ಮಂಜುನಾಥ ಶೇರಿಗಾರ್, ಚಂದ್ರ ದೇವಾಡಿಗ, ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ವಂಡ್ಸೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಾಗರಾಜ ಶೆಟ್ಟಿ ನಾರ್ಕಳಿ, ಪ್ರಿಯದರ್ಶಿನಿ ಬೆಸ್ಕೂರ್, ಗಣೇಶ್ ಪುತ್ರನ್, ತ್ರಾಸಿ ಗ್ರಾಮ ಪಂಚಾಯಿತಿ ಸದಸ್ಯ ಮಿಥುನ್ ಎಂ.ಡಿ ಬಿಜೂರು, ಗೋಪಾಲ ನಾಡ, ಗೋಪಾಲ ಬಾಳಿಗ ಸುರತ್ಕಲ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

two × 4 =