ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪರಂಪಾನುಗತವಾಗಿ ಜಾನಪದ ಸಂಗೀತ ಕಲಿತುಕೊಂಡು ಅದರಿಂದಲೇ ಬದುಕು ಕಟ್ಟಿಕೊಳ್ಳುವ ಕಲಾವಿದರು ವೃದ್ಧರಾದಾಗ ಅವರಿಗೆ ಸರ್ಕಾರ ಮಾಸಾಶನ ನೀಡಬೇಕು. ಅವರು ಹೊಂದಿರುವ ಕಲಾಸಂಪತ್ತನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಗಂಗೊಳ್ಳಿ ಹೇಳಿದರು.
ರಾಜ್ಯ ಮತ್ತು ಜಿಲ್ಲಾ ಕನ್ನಡ ಜಾನಪದ ಪರಿಷತ್ತು, ಯುವ ಬ್ರಿಗೇಡ್ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಕೋಶದ ಆಶ್ರಯದಲ್ಲಿ ಭಾನುವಾರ ಆಚರಿಸಿದ ವಿಶ್ವ ಬುಡಕಟ್ಟು ದಿನಾಚರಣೆ ಅಂಗವಾಗಿ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ ನೆಲೆಸಿರುವ ಹಿರಿಯ ಜಾನಪದ ಕಲಾವಿದ ಶಿವಲಿಂಗಪ್ಪ ಈಶ್ವರಪ್ಪ ವೇಶಗಾರ್-ಶಂಕರಮ್ಮ ದಂಪತಿಯನ್ನು ಅವರು ಸನ್ಮಾನಿಸಿ ಮಾತನಾಡಿದರು.
ಕೋವಿಡ್-೧೯ರ ಕಾರಣದಿಂದ ಪರಿಷತ್ತಿಗೆ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿಲ್ಲ. ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಬಾಲಾಜಿ ಅವರ ಮಾರ್ಗದರ್ಶನದಲ್ಲಿ ಅಂತರ್ಜಾಲ ಬಳಸಿಕೊಂಡು ಎಲ್ಲೆಡೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಅವುಗಳಿಗೆ ಕಲಾವಿದರಿಂದ ಮತ್ತು ಕಲಾಸಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಉತ್ತರ ಕರ್ನಾಟಕದಿಂದ ಬಂದು ಮುಳ್ಳಿಕಟ್ಟೆಯಲ್ಲಿ ನೆಲೆಸಿರುವ ಕಲಾವಿದರು ವಾದನಗಳೊಂದಿಗೆ ಮನೆಮನೆಗೆ ಸಂಚರಿಸಿ ತಮ್ಮ ಕಲಾಪ್ರತಿಭೆ ಪ್ರದರ್ಶಿಸಿ ಬದುಕು ನಡೆಸುತ್ತಿದ್ದಾರೆ. ಸಾರ್ವಜನಿಕರು ಅವರನ್ನು ಪ್ರೋತ್ಸಾಹಿಸುವ ಮೂಲಕ ಕಲೆಯ ಉಳಿವಿಗೆ ನೆರವಾಗಬೇಕು ಎಂದು ಅವರು ಹೇಳಿದರು.
ಕಲಾವಿದರಾದ ಚೆನ್ನಪ್ಪ, ಜಂಬಣ್ಣ, ಶಂಕರಕುಮಾರ, ಹುಸೇನಪ್ಪ, ಅಯ್ಯಪ್ಪ, ಛಾಯಾಗ್ರಾಹಕ ಸುರೇಶ ಕುಂದಾಪುರ ಇದ್ದರು.