ಬೈಂದೂರು: ಈ ನೆಲದ ಸನಾತನ ಧರ್ಮದ ಅಂದಿನ ಕಂದಾಚಾರಗಳ ಬದಲಿಗೆ ಸದಾಚಾರ ಮತ್ತು ಸಾತ್ವಿಕತೆಗೆ ಒತ್ತುಕೊಟ್ಟು ಜನಸಾಮಾನ್ಯರಿಗೆ ಭಕ್ತಿ ಪ್ರಧಾನವಾದ ಆರಾಧನೆಯ ಮಾರ್ಗವನ್ನು ತೋರಿಸಿದವರು ಆದಿಶಂಕರಾಚಾರ್ಯರು. ಸಂಸ್ಕೃತದಲ್ಲಿ ಸುಲಲಿತ ಕಾವ್ಯ ಮನೋ ಭೂಮಿಕೆಯಿಂದ ಅವರು ರಚಿಸಿದ ಸ್ತೋತ್ರಗಳು ಭಾವಪೂರ್ಣವಾಗಿವೆ ಎಂದು ವೇ|ಮೂ|ಸುಬ್ರಹ್ಮಣ್ಯ ಭಟ್ ಬಾಡ ಅವರು ಹೇಳಿದರು.
ಅವರು ಶಂಕರ ತತ್ವ ಪ್ರಸಾರ ಸಮಿತಿ ಇವರ ಆಶ್ರಯದಲ್ಲಿ ಬೈಂದೂರು ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ನಡೆದ ಶಂಕರ ಜಯಂತಿಯ ಸರಣಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಉಪನ್ಯಾಸ ನೀಡುತ್ತಾ ಮಾತನಾಡಿದರು.
ಶ್ರೀ ಭಗವದ್ಗೀತಾ ಜಯಂತಿ ಆಚರಣೆಯ ಸಮಿತಿ ಅಧ್ಯಕ್ಷ ರಾಮಕೃಷ್ಣ ಬಿಜೂರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬೈಂದೂರು ಪರಿಸರದಲ್ಲಿ ಸ್ವರ್ಣವಲ್ಲಿ ಮಠದ ಗೀತಾ ಜಯಂತಿ ಮತ್ತು ಶ್ರೀ ಶೃಂಗೇರಿ ಮಠದ ಶಂಕರ ತತ್ವ ಪ್ರಸರಣ ಕಾರ್ಯಕ್ರಮವು ಆಸ್ತಿಕರಲ್ಲಿ ಧಾರ್ಮಿಕ ಪ್ರಜ್ಞೆ ಮತ್ತು ಜೀವನ ಮೌಲ್ಯಗಳನ್ನು ವೃದ್ಧಿಸುವಲ್ಲಿ ಸಹಕಾರಿಯಾಗಲಿದೆ ಎಂದರು.
ಶಂಕರ ತತ್ವ ಪ್ರಸರಣಾ ಸಮಿತಿಯ ಸಂಚಾಲಕ ಉಪ್ಪುಂದ ಚಂದ್ರಶೇಖರ ಹೊಳ್ಳರು ಶೃಂಗೇರಿ ಮಠದ ಧಾರ್ಮಿಕ ಕಾರ್ಯಕ್ರಮಗಳ ಕುರಿತು ಮಾತನಾಡಿ ಶಂಕರ ಜಯಂತಿ ಉತ್ಸವವನ್ನು ಸಾರ್ವಜನಿಕ ನೆಲೆಯಲ್ಲಿ ತತ್ವಜ್ಞಾನಿಗಳ ದಿನವನ್ನಾಗಿ ಆಚರಣೆ ಬಗ್ಗೆ ಮಾಹಿತಿ ನೀಡಿ ಎಲ್ಲರ ಸಹಕಾರ ಕೋರಿದರು.
ರಾಮ ಕ್ಷತ್ರಿಯ ಸಮಾಜ ಬೈಂದೂರು ಇವರು ಅಧ್ಯಕ್ಷ ಬಿ.ಗೋಪಾಲ ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಪ್ರರಂಜಿನಿ ಉಪ್ಪುಂದ, ಮಾತೃ ಮಂಡಳಿ ಬೈಂದೂರು ಇವರ ಸದಸ್ಯರಿಂದ ಶ್ರೀ ಶಂಕರ ಅಷ್ಟೋತ್ತರ ಶತನಾಮಾವಳಿ ಮತ್ತು ಹಲವು ಸ್ತೋತ್ರಗಳನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಲಾಯಿತು. ಅಲಂಕೃತ ಶ್ರೀ ಶಂಕರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ತಾಲೂಕು ಹವ್ಯಕ ಸಮಾಜದ ಅಧ್ಯಕ್ಷ ಉಪ್ರಳ್ಳಿ ಮಂಜುನಾಥ ಭಟ್, ಸಾಹಿತಿ ಯು.ವರಮಹಾಲಕ್ಷ್ಮಿ ಹೊಳ್ಳ, ಮಾತೃ ಮಂಡಳಿಯ ಅಧ್ಯಕ್ಷೆ ಸೀತಾ ಶ್ರೀನಿವಾಸ ವೇದಿಕೆಯಲ್ಲಿದ್ದರು. ಯು.ಸಂದೇಶ ಭಟ್ ಸ್ವಾಗತಿಸಿದರು. ಗಣೇಶ ಪ್ರಸನ್ನ ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಯು.ಎಚ್.ರಾಜಾರಾಮ್ ಭಟ್ ವಂದಿಸಿದರು.