ಶಾಲೆಗಳು ಸಮಾಜದ ಕೇಂದ್ರಗಳಾಗಬೇಕು: ಉದ್ಯಾವರ ಮಾಧವ ಆಚಾರ್ಯ

Call us

ಮರವಂತೆ: ಶಾಲೆಗಳು ಕೇವಲ ಕಲ್ಲು ಮಣ್ಣಿನಿಂದ ಕಟ್ಟಿದ ಕಟ್ಟೋಣವಲ್ಲ. ಇದೊಂದು ಯಜ್ಞಭೂಮಿಯಾಗಿದ್ದು, ಸಮಾಜಕ್ಕೆ ಶಕ್ತಿ ಕೊಡುವ ಕೇಂದ್ರವಾಗಿದೆ. ಇಲ್ಲಿ ಧನಾತ್ಮಕ ಚಿಂತನೆಗಳು ದೊಡ್ಡ ಶಕ್ತಿಯಾಗಬೇಕು. ಇಂತಹ ಸಂಸ್ಥೆಗಳಲ್ಲಿ ಮಕ್ಕಳಿಗೆ ಭಾವನಾತ್ಮಕ ವ್ಯಕ್ತಿತ್ವ ವಿಕಸನದ ಶಿಕ್ಷಣ ಸಿಗುವಂತಾಗಬೇಕು ಎಂದು ಉದ್ಯಾವರ ಮಾಧವ ಆಚಾರ್ಯ ಹೇಳಿದರು.

ನಾಗೂರು ಸಂದೀಪನ್ ಆಂಗ್ಲಮಾಧ್ಯಮ ಶಾಲೆಯ 28ನೇ ವಾರ್ಷಿಕೋತ್ಸವದ ಅಧ್ಯಕ್ಷತೆವಹಿಸಿ ಮಾತನಾಡಿದರು. ಹಿಂದಿನವರಿಂದ ಬಂದ, ಎಲ್ಲರೂ ಒಂದಾಗಿ ಬಾಳೋಣ ಎಂಬ ಕಲ್ಪನೆಗಳು ಶಾಲೆಯಲ್ಲಿ ಮಾತ್ರ ಸಾಧ್ಯ. ಕಿವಿಯಿಂದ ಕೇಳಿದ ಪಾಠ ಮನಸ್ಸಿನೊಳಗೆ ಹೋಗದಿದ್ದರೆ ಏನೂ ಪ್ರಯೋಜನವಾಗದು. ಭಗವಂತ ಕೊಟ್ಟ ಸೂಕ್ಷ್ಮ ಅಂಗಾಗಗಳಲ್ಲಿ ಸಮರ್ಪಕ ವ್ಯವಸ್ಥೆಯಿದೆ. ಪ್ರತಿಯೊಂದನ್ನು ಸ್ವೀಕರಿಸಿ ಪುನಃ ಜಗತ್ತಿಗೆ ನೀಡುವಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದರು.

Call us

ವಿಶೇಷ ಅತಿಥಿಯಾಗಿ ಆಗಮಿಸಿದ ಗುಜರಾತ್ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಾಧನಾ ರಾವ್ ಮಾತನಾಡಿ, ಮಗು ದೇವರು ಕೊಟ್ಟ ದೇಣಿಗೆ. ಮಕ್ಕಳಿಗೆ ಶಿಕ್ಷಣ ಶಿಕ್ಷೆಯಾಗಬಾರದು. ನಿಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಆ ಮಾರ್ಗದಲ್ಲಿಯೇ ಅವರನ್ನು ಮುನ್ನೆಡೆಸಿ. ಇದರಿಂದ ಮಕ್ಕಳ ಭವಿಷ್ಯ ಉತ್ತಮಗೊಳಿಸಲು ಸಾಧ್ಯವಾಗುತ್ತದೆ ಎಂದು ಹೆತ್ತವರಿಗೆ ಸಲಹೆ ನೀಡಿದರು.

ಕುಂದಾಪುರ ಶ್ರೀ ವೆಂಕಟರಮಣ ಆಂಗ್ಲಮಾಧ್ಯಮ ಶಾಲಾ ಸಂಚಾಲಕ ಹಾಗೂ ಕಾರ್ಯದರ್ಶಿ ಕೆ. ರಾಧಾಕೃಷ್ಣ ಶೆಣೈ, ಹವ್ಯಾಸಿ ಯಕ್ಷಗಾನ ಭಾಗವತ ಅಣ್ಣಪ್ಪ ದೇವಾಡಿಗ ಬಿಜೂರು, ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ಶ್ರೇಯಸ್ ಎಂ. ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ-2015ರ ಪ್ರತಿಭಾವಂತ ವಿದ್ಯಾರ್ಥಿಗಳು, ಪ್ರತಿಭಾ ಕಾರಂಜಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಸಿಂಡಿಕೇಟ್ ಬ್ಯಾಂಕಿನ ಫೀಲ್ಡ್ ಜನರಲ್ ಮೆನೇಜರ್ ಕೆ. ತಿಮ್ಮಪ್ಪ ರೈ, ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಕೆ. ಸಂಜೀತ್ ರಾವ್ ಉಪಸ್ಥಿತರಿದ್ದರು. ಆರ್.ಕೆ ಸಂಜೀವ್ ರಾವ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಕೆ. ಎಸ್. ಪ್ರಕಾಶ್ ರಾವ್ ಪ್ರಾಸ್ತಾವಿಸಿ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಬಿ. ವಿಶ್ವೇಶ್ವರ ಅಡಿಗ ವರದಿ ವಾಚಿಸಿದರು. ವಿದ್ಯಾರ್ಥಿನಿಯರಾದ ಸಹನಾ ಪ್ರಭು, ಧರ್ಮಶ್ರೀ ನಿರೂಪಿಸಿ, ರಾಜೇಶ್ ನಾಯ್ಕ್ ವಂದಿಸಿದರು. ಬಳಿಕ ಮಕ್ಕಳಿಂದ ನೃತ್ಯ, ನಾಟಕ ಮತ್ತು ಯಕ್ಷಗಾನ ಪ್ರದರ್ಶನ ನಡೆಯಿತು.

Leave a Reply

Your email address will not be published. Required fields are marked *

eleven − 6 =