ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಮನಸ್ಸನ್ನು ಮುದಗೊಳಿಸುತ್ತ ಅಲೌಕಿಕ ಆನಂದವನ್ನು ಅನುಭವಿಸುವಲ್ಲಿ ಸಂಗೀತ ಕಲೆಯ ಅನುಸಂಧಾನ ಅಪೇಕ್ಷಣೀಯ. ಪರಂಪರೆಯಿಂದ ಈ ನಾದಾನುಸಂಧಾನ ವೇದ ಕಾಲದಿಂದಲೂ ನಡೆದು ಬಂದಿದೆ. ಅನೇಕ ಮಹಾಮಹಿಮರು ಜೀವ ಮಾನ ಸಾಧನೆಯಿಂದ ಅನೇಕ ಕೃತಿಗಳನ್ನು ರಚಿಸಿ ಮಾರ್ಗದರ್ಶಕರಾಗಿದ್ದಾರೆ. ಶಾಸ್ತ್ರೀಯ ನೆಲೆಗಟ್ಟಿನ ಈ ವಿದ್ಯೆಯನ್ನು ಸರಳವಾಗಿ – ಸುಲಭವಾಗಿ ಅಭ್ಯಸಿಸಿಕೊಳ್ಳಲು ಅನುವಾಗುವಂತೆ ಸಂಗೀತ ವಿದ್ವಾನ್ ಮದೂರು ಬಾಲಸುಬ್ರಹ್ಮಣ್ಯಂ ರವರು ರಚಿಸಿದ ಪುಸ್ತಕ ’ಸಂಗೀತ ಪ್ರಬೋಧೀನಿ’ ಉತ್ತಮ ಕೊಡುಗೆಯಾಗಿದೆ. ಎಂದು ಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರು ಉಡುಪಿ ಪೇಜಾವರ ಮಠದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಆಶೀರ್ವದಿಸುತ್ತ ನುಡಿದರು.
ಪುಸ್ತಕವನ್ನು ಪ್ರಕಟಿಸಿದ ಕುಂದ ಅಧ್ಯಯನ ಕೇಂದ್ರದ ಯು.ವರಮಹಾಲಕ್ಷೀ ಹೊಳ್ಳರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ|| ಪಾದೇಕಲ್ಲು ವಿಷ್ಣು ಭಟ್ಟರು ಶುಭಾಶಂಸನೆ ಗೈದರು. ಗಣಪತಿ ಜ್ಯೋಸ, ವಿದುಷಿ ಹೆಚ್.ಉಷಾ ಜೊಯಿಸ, ಉಮಾ ಮಹೇಶ್ವರಿ, ರಮಾದೇವಿ ಆಚಾರ್ಯ, ಸುಮಾ ಬಾಲಸುಬ್ರಹ್ಮಣ್ಯ ಉಪಸ್ಥಿತರಿದ್ದರು.
ಮದೂರು ಬಾಲಸುಬ್ರಹ್ಮಣ್ಯಂ ಸ್ವಾಗತಿಸಿದ್ದರು. ಯು. ಗಣೇಶ್ ಪ್ರಸನ್ನ ಮಯ್ಯ ವಂದಿಸಿದರು.