ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಹೃದಯದಲ್ಲಿ ರಾಮಚಂದಿರ ಎಂಬ ಜಿಲ್ಲಾಮಟ್ಟದ ಕವಿಗೋಷ್ಠಿ ಮಂಗಳೂರು ನಗರದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕವಿ, ಸಾಹಿತಿ ಡಾ. ವಸಂತಕುಮಾರ ಪೆರ್ಲ, ಶ್ರೀರಾಮಚಂದ್ರ ಎಂಬ ಮಾದರಿ ವ್ಯಕ್ತಿತ್ವವು ನಮ್ಮ ಆದರ್ಶಗಳ ಒಂದು ಪ್ರತಿರೂಪ. ಜಾತಿ ಮತ ಪಂಥ ಪಂಗಡ ದೇಶ ಮೊದಲಾದ ಗಡಿರೇಖೆಗಳನ್ನು ಮೀರಿದ ಮಾನವತ್ವದ ಉತ್ತುಂಗತೆಯ ಸಂಕೇತವೇ ಶ್ರೀರಾಮಚಂದ್ರ. ಆತ ಮೌಲ್ಯಗಳ ಮೊತ್ತ. ಆತನ ಉದಾರ ವ್ಯಕ್ತಿತ್ವ ನಮ್ಮದಾಗಬೇಕೆಂಬ ಆದರ್ಶದಿಂದಾಗಿಯೇ ಶ್ರೀರಾಮಚಂದ್ರನು ಯಾವ ಕಾಲಕ್ಕೂ ಸಲ್ಲುವ ಓರ್ವ ನಾಯಕನಾಗಿ ಉಳಿದಿದ್ದಾನೆ. ಎಂದು ಹೇಳಿದರು.
ವಿವಾದಗಳಿಗೆ ಹೊರತಾಗಿ ನಿಲ್ಲುವ ವ್ಯಕ್ತಿತ್ವ ಪ್ರಭು ಶ್ರೀರಾಮಚಂದ್ರನದು. ಆತನ ಬಗ್ಗೆ ಹೆಚ್ಚು ಹೆಚ್ಚು ಸಾಹಿತ್ಯ ನಿರ್ಮಾಣವಾದಂತೆ ಜನಸಾಮಾನ್ಯರ ಹೃದಯ ಮಂದಿರದಲ್ಲಿ ಸ್ಥಾನ ಪಡೆಯುವ ಅವಕಾಶ ಹೆಚ್ಚುತ್ತ ಹೋಗುತ್ತದೆ. ಎಲ್ಲ ಕವಿಗಳೂ ವಿಭಿನ್ನವಾಗಿ ಶ್ರೀರಾಮಚಂದ್ರನ ಕುರಿತು ಬರೆದಿದ್ದಾರೆ. ಇದೊಂದು ಹೊಸ ಪರಿಕಲ್ಪನೆ ಎಂದು ಹೇಳಿದರು.
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ. ಬಿ. ಪುರಾಣಿಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕವಿಗಳು ಶ್ರೀರಾಮಚಂದ್ರನನ್ನು ಹೊಸ ಒಳನೋಟದಲ್ಲಿ ಸಾಹಿತ್ಯದಲ್ಲಿ ಕಡೆದು ನಿಲ್ಲಿಸುವ ಪ್ರಯತ್ನ ನಡೆಸಿದ್ದು ವಿನೂತನ ಪ್ರಯೋಗ. ಆ ಮೂಲಕ ಅಯೋಧ್ಯಾ ನಗರ ಮತ್ತು ಪ್ರಭು ಶ್ರೀರಾಮಚಂದ್ರ ನಮ್ಮೆಲ್ಲರ ಹೃದಯಗಳಲ್ಲಿ ನೆಲಸುವಂತಾಗಿದೆ ಎಂದು ಹೇಳಿದರು.
ಮೊದಲ ಮೂರು ಸ್ಥಾನಗಳನ್ನು ಪಡೆದ ಕವಿಗಳಾದ ಅಶೋಕ ಎನ್. ಕಡೇಶಿವಾಲಯ, ಅಶ್ವತ್ಥ್ ಬರಿಮಾರು ಮತ್ತು ಪಾರ್ವತಿ ಶಾಸ್ತ್ರಿ ಅವರೊಂದಿಗೆ ಸಮಾಧಾನಕರ ಸ್ಥಾನ ಪಡೆದ ವಿದ್ಯಾಶ್ರೀ ಅಡೂರು, ಭಾರತಿ ಭಟ್ ಪಾಣಾಜೆ, ಪರಿಮಳಾ ರಾವ್, ಲಕ್ಷ್ಮೀ ವಿ. ಭಟ್ ತಲಂಜೇರಿ, ಭಾರತಿ ಎನ್. ಫಡ್ಕೆ, ಭಾರತಿ ಭಟ್ ಪಾಣಾಜೆ, ಹರಿಪ್ರಸಾದ್ ಈಶ್ವರಮಂಗಲ, ಅಶ್ವಿನಿ ಕೋಡಿಬೈಲು, ಕೆ. ಶಶಿಕಲಾ ಭಾಸ್ಕರ್, ರಾಜೇಶ್ವರಿ ಬಜ್ಪೆ, ದೀಪಕ್ ಎಸ್. ಕೋಟ್ಯಾನ್, ಹೇಮಂತಕುಮಾರ್ ಡಿ. ಬಂಟ್ವಾಳ, ಭವಾನಿ ಎಂ ಕುದ್ಪಾಜೆ, ಗಣಪತಿ ಭಟ್ ಮಧುರಕಾನನ, ಡಾ. ಸುರೇಶ ನೆಗಳಗುಳಿ ಮೊದಲಾದ ಇಪ್ಪತ್ತಮೂರು ಮಂದಿ ಕವಿಗಳು ಶ್ರೀರಾಮನ ಕುರಿತಾದ ತಮ್ಮ ಸ್ವರಚಿತ ಕವನಗಳನ್ನು ಮಂಡಿಸಿದರು.
ಕವಿಗೋಷ್ಠಿಯ ತೀರ್ಪುಗಾರರಾಗಿದ್ದ ರತ್ನಾವತಿ ಜೆ. ಬೈಕಾಡಿ, ಶೈಲಜಾ ಪುದುಕೋಳಿ ಮತ್ತು ರೂಪಕಲಾ ಆಳ್ವ ಉಪಸ್ಥಿತರಿದ್ದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ದ. ಕ. ಘಟಕದ ಅಧ್ಯಕ್ಷ ಚ. ನ. ಶಂಕರ ರಾವ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತಾನಾಡಿದರು. ನಿರೀಕ್ಷಾ ಯು. ಕೆ. ಪ್ರಾರ್ಥನೆ ಹಾಡಿದರು. ಧನಲಕ್ಷ್ಮಿ ಮೂಲ್ಕಿ ನಿರೂಪಿಸಿದರು. ಕಾರ್ಯದರ್ಶಿ ಪ್ರಕಾಶ್ ನಾರಾಯಣ ವಂದಿಸಿದರು.