ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಂತ್ರಜ್ಞಾನದ ಬೆಳವಣಿಗೆಯ ಕಾರಣದಿಂದ ಸಂಗೀತ ಕ್ಷೇತ್ರದಲ್ಲಿಯೂ ಗಣನೀಯ ಬದಲಾವಣೆಗಳಾಗಿವೆ. ಶಾಸ್ತ್ರೀಯ ಸಂಗೀತಗಾರರ ಮತ್ತು ಸಂಗೀತ ಪ್ರಿಯರ ಸಂಖ್ಯೆ ಹೆಚ್ಚಿದೆ ಎಂದು ನಿವೃತ್ತ ಪ್ರಾಧ್ಯಾಪಕಿ, ಲೇಖಕಿ ಡಾ. ಪಾರ್ವತಿ ಜಿ. ಐತಾಳ್ ಹೇಳಿದರು.
ನೂತನವಾಗಿ ಅಸ್ತಿತ್ವಕ್ಕೆ ಬಂದ ಗುರುಪರಂಪರಾ ಸಂಗೀತ ಸಭಾವನ್ನು ಕುಂದಾಪುರದ ಶ್ರೀ ಸತ್ಯಸಾಯಿ ಮಂದಿರದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಉದ್ಘಾಟಿಸಿ ಮಾತನಾಡಿದರು.
ಕುಂದಾಪುರದಲ್ಲಿ ಶಾಸ್ತ್ರೀಯ ಸಂಗೀತದ ಪ್ರಜ್ಞೆ ತಡವಾಗಿ ಆರಂಭವಾಯಿತು. ’ಸಂಗೀತ ಭಾರತಿ’ ಸಂಸ್ಥೆಯ ಆರಂಭ ಮತ್ತು ಅದರ ಚಟುವಟಿಕೆಗಳು ಸೀಮಿತ ವರ್ಗವನ್ನು ಸೆಳೆದಿದೆ. ಸುದೀರ್ಘ ಹಿನ್ನೆಲೆಯ ಸನಾತನ ಕಲೆಯನ್ನು ನಮ್ಮ ಕಾಲದಲ್ಲಿ ಮುನ್ನಡೆಸಲು ಮತ್ತು ಮುಂದಿನ ತಲೆಮಾರಿಗೆ ದಾಟಿಸಲು ಅಷ್ಟು ಸಾಲದು. ಸಂಗೀತದ ಶಿಕ್ಷಣ, ಮತ್ತು ಕಾರ್ಯಕ್ರಮಗಳ ಆವರಣ ಇನ್ನಷ್ಟು ವಿಸ್ತಾರವಾಗಬೇಕು. ನಿರುಪಯುಕ್ತ ಮತ್ತು ಹಾನಿಕಾರಕ ಉಪಕರಣಗಳೊಂದಿಗೆ ಕಾಲಹರಣ ಮಾಡುವ ಯುವ ಪೀಳಿಗೆಯನ್ನು ಅದರಲ್ಲಿ ತೊಡಗಿಸಬೇಕು. ಕಲಿತು ವಿದ್ವಾಂಸರಾಗದಿದ್ದರೂ ಉತ್ತಮ ಶ್ರೋತೃಗಳಾಗಲು ಅಗತ್ಯವಿರುವ ಹಿನ್ನೆಲೆಯನ್ನು ಅವರು ಗಳಿಸುವಂತಾಗಬೇಕು. ಆ ನಿಟ್ಟಿನಲ್ಲಿ ಇಂದು ಆರಂಭವಾಗುತ್ತಿರುವ ಗುರುಪರಂಪರಾ ಸಂಗೀತ ಸಭಾ ಒಂದು ಮಹತ್ವದ ಸಕಾಲಿಕ ಹೆಜ್ಜೆ. ಅದರ ವಿದ್ಯಾರ್ಥಿಗಳ ನಿಯತಕಾಲಿಕ ಬೈಠಕ್ ಒಂದು ಸಕಾರಾತ್ಮಕ ಪರಿಕಲ್ಪನೆ ಎಂದು ಅವರು ಅಭಿಪ್ರಾಯಪಟ್ಟರು.
ಸಂಗೀತ ಸಭಾದ ವಿಶ್ವಸ್ಥೆ, ಸಂಗೀತ ವಿದುಷಿ ಪ್ರತಿಮಾ ಭಟ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿದ್ದ ನೃತ್ಯಪಟು ಅನುಲೇಖಾ ಬಾಯಿರಿ ಮತ್ತು ಸತ್ಯಸಾಯಿ ಸಮಿತಿ ಸಂಚಾಲಕ ರಾಮಚಂದ್ರ ಶುಭ ಹಾರೈಸಿದರು. ಚಿಂತನಾ ಧನ್ಯ ಮತ್ತು ಚಿನ್ಮಯಿ ಧನ್ಯ ಪ್ರಾರ್ಥನೆ ಹಾಡಿದರು. ಸ್ವಾಗತಿಸಿದ ಡಾ. ರೂಪಶ್ರೀ ಸಭಾದ ಉದ್ದೇಶಗಳನ್ನು ವಿವರಿಸಿ, ಈಗ ನಡೆಯುತ್ತಿರುವ ಗುರು ದಂಪತಿ ಸತೀಶ ಭಟ್ ಮಾಳಕೊಪ್ಪ ಮತ್ತು ಪ್ರತಿಮಾ ಭಟ್ ದಂಪತಿಯ ಶಿಷ್ಯರ ಗೃಹಬೈಠಕ್ ಕಾರ್ಯಕ್ರಮವನ್ನು ಅನ್ಯ ಆಸಕ್ತರ ಮನೆ, ಸಂಸ್ಥೆ, ಶಾಲೆಗಳಿಗೆ ವಿಸ್ತರಿಸುವ ಯೋಜನೆ ಇದೆ ಎಂದರು. ಅತಿಥಿಗಳನ್ನು ಗೌರವಿಸಿದ ಚಂದ್ರಿಕಾ ಧನ್ಯ ವಂದಿಸಿದರು. ವಿದ್ಯಾರ್ಥಿನಿ ನೇಹಾ ಹೊಳ್ಳ ನಿರ್ವಹಿಸಿದರು. ಗುರು ಸತೀಶ್ ಭಟ್ ಇದ್ದರು.
ಉದ್ಘಾಟನೆಯ ಬಳಿಕ ಗುರುದಂಪತಿಯ ಶಿಷ್ಯರಿಂದ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಪ್ರಸ್ತುತಿ ನಡೆಯಿತು. ವೀಣಾ ನಾಯಕ್ ಕಾಮೋದ್ ರಾಗವನ್ನು, ಕೇದಾರ್ ಮರವಂತೆ ಜಾವ್ನ್ಪುರಿ
ರಾಗವನ್ನು, ಚಿಂತನಾ ಧನ್ಯ ರಾಗೇಶ್ರಿಯನ್ನು, ನಾಗರಾಜ ಭಟ್ ಮತ್ತು ನೇಹಾ ಹೊಳ್ಳ ಭಾಗೇಶ್ರೀಯನ್ನು ಹಾಗೂ ಅವ್ಯಕ್ತ ಹೆಬ್ಬಾರ್ ಭೂಪಾಲಿ ರಾಗವನ್ನು ಹಾಡಿದರು. ಶಶಿಕಿರಣ್ ತಬಲಾ ನುಡಿಸಿದರು.