ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು : ಸಮಾಜದಲ್ಲಿರುವ ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಅವರ ಕಾರ್ಯವನ್ನು ಸ್ಮರಿಸುವುದರ ಜೊತೆಗೆ ಇನ್ನಷ್ಟು ಪ್ರೇರೆಣೆ ನೀಡಿದಂತಾಗುತ್ತದೆ. ಸಾಧನೆಯೆಂಬುದು ಯಾರೊಬ್ಬರ ಸ್ವತ್ತಲ್ಲ, ಪ್ರತಿಯೊಬ್ಬರು ಶೃದ್ಧೆ, ನಿಷ್ಠೆ, ಪ್ರಾಮಾಣಿಕತೆಯಿಂದ ದುಡಿದರೆ ತಾವು ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯವಿದೆ. ನಾನು ಎಂಬುದು ಹೋಗಿ ನಾವು ಎಂಬ ಭಾವನೆ ಮೂಡಿದಾಗ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನುಡಿದರು.
ಕಂಬದಕೋಣೆಯ ಸಂವೇದನಾ ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಂವೇದನಾ ಟ್ರಸ್ಟ್ (ರಿ.) ನಾಯ್ಕನಕಟ್ಟೆಯವರ ಏಳನೇ ವಾರ್ಷಿಕೋತ್ಸವದಲ್ಲಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ತಾನು ಹುಟ್ಟಿ ಬೆಳೆದ ಊರಿನ ಬಗ್ಗೆ ಅಭಿಮಾನವಿರಬೇಕು. ಎಷ್ಟೇ ಎತ್ತರಕ್ಕೆ ಏರಿದರೂ ತಾಯ್ನೆಲದ ಋಣವನ್ನು ಮರೆಯಬಾರದು. ಸತ್‌ಚಿಂತನೆ ಹಾಗೂ ದೂರದೃಷ್ಟಿಯುಕ್ತ ಚಿಂತನೆಗಳಿಂದ ಕಂಡ ಕನಸನ್ನು ಸಾಕಾರಗೊಳಿಸಬಹುದು. ಅದಕ್ಕೆ ಹಿರಿಯರ ಸೂಕ್ತ ಮಾರ್ಗದರ್ಶನ ಹಾಗೂ ಸಹೃದಯರ ಸಂಪೂರ್ಣ ಸಹಕಾರ ಅಗತ್ಯ ಎಂದರು.
ಸಂವೇದನಾ ಟ್ರಸ್ಟ್ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಮಾಜಿಕ ಧುರೀಣ ಬಿ. ಅಪ್ಪಣ್ಣ ಹೆಗ್ಡೆ, ಜನಪರ ವೈದ್ಯ ಡಾ. ಕೆ.ಆರ್.ನಂಬಿಯಾರ್ ಬಿಜೂರು, ಹಿರಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ, ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಟಿ.ಫಾಲಾಕ್ಷ ಹಾಗೂ ಹಿಂದೂಸ್ತಾನಿ ಸಂಗೀತ ಶಿಕ್ಷಕ ವಿದ್ವಾನ್ ಅನಂತ ಹೆಬ್ಬಾರ್ ಅವರುಗಳನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಕುಂದಾಪುರ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಡಾ. ಕಿಶೋರಕುಮಾರ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಟ್ರಸ್ಟ್‌ನ ಕಾರ್ಯದರ್ಶಿ ರವೀಂದ್ರ ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂವೇದನಾ ಕಾಲೇಜಿನ ಪ್ರಾಂಶುಪಾಲೆ ಸಂಧ್ಯಾ ಭಟ್ ಸ್ವಾಗತಿಸಿದರು, ಜೊತೆ ಕಾರ್ಯದರ್ಶಿ ಮಂಜುನಾಥ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಅಶ್ವಿನಿ ಆರ್. ನಾಯಕ್ ಧನ್ಯವಾದ ಸಮರ್ಪಣೆ ಮಾಡಿದರು. ವಿದ್ವಾನ್ ಅನಂತ ಹೆಬ್ಬಾರ್ ತಂಡದವರಿಂದ ಭಾವಗೀತೆಗಳ ಗಾಯನ ಮತ್ತು ಸುಬ್ರಹ್ಮಣ್ಯ ಧಾರೇಶ್ವರ ಹಾಗೂ ವಿದ್ವಾನ್ ಗಣಪತಿ ಭಟ್ ಅವರ ಜುಗಲ್‌ಬಂಧಿಯಲ್ಲಿ ಯಕ್ಷಗಾಯನ ವೈಭವ ಕಾರ್ಯಕ್ರಮ ಜರುಗಿತು.