ಸಂಸ್ಕಾರ ಎತ್ತಿದ ಪ್ರಶ್ನೆ ಎಂದಿಗೂ ಪ್ರಸ್ತುತ: ಹುಲಿ ಚಂದ್ರಶೇಖರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಾನವ ಸಹಜ ದೌರ್ಬಲ್ಯಗಳಿಂದ ಯಾರೂ ಹೊರತಾಗಿರುವುದು ಅಸಾಧ್ಯ. ಆದರೆ ಅಂತಹ ದೌರ್ಬಲ್ಯವನ್ನು ಮುಚ್ಚುಮರೆ ಮಾಡದೆ ಬಹಿರಂಗವಾಗಿ ಪ್ರದರ್ಶಿಸುವವರನ್ನು ಸಾಮಾಜಿಕ ಕಟ್ಟುಪಾಡುಗಳ ಹೆಸರಿನಲ್ಲಿ ಮಾನವೀಯ ಪರಿಗಣನೆಯಿಂದ ಹೊರಗಿಡಬಹುದೇ ಎಂದು ’ಸಂಸ್ಕಾರ’ ಎತ್ತುವ ಪ್ರಶ್ನೆ ಎಂದಿಗೂ ಪ್ರಸ್ತುತ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಹುಲಿ ಚಂದ್ರಶೇಖರ ಹೇಳಿದರು.

ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್, ಸಮುದಾಯ ಸಾಂಸ್ಕೃತಿಕ ಸಂಘಟನೆ, ಕುಂದಾಪುರ ಜೇಸಿಐ ಮತ್ತು ಗುಲ್ವಾಡಿ ಟಾಕೀಸ್ ಸಂಯುಕ್ತ ಆಶ್ರಯದಲ್ಲಿ ಶನಿವಾರ ಇಲ್ಲಿನ ಜೇಸಿಐ ಭವನದಲ್ಲಿ ನಡೆದ ಸಂಸ್ಕಾರ ಒಂದು ಮರುನೋಟ, ಸಂಸ್ಕಾರ ಚಲನಚಿತ್ರ ಐವತ್ತು ವರ್ಷ ಮತ್ತು ನಿರ್ದೇಶಕ ಪಟ್ಟಾಬಿರಾಮ ರೆಡ್ಡಿ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ನಡೆದ ಸಂವಾದದಲ್ಲಿ ಭಾಗಿಯಾಗಿ ಮಾತನಾಡಿದರು.

ಡಾ. ಯು. ಆರ್. ಅನಂತಮೂರ್ತಿ ಸಂಸ್ಕಾರ ಕಾದಂಬರಿ ಬರೆದಾಗ ಎದ್ದ ವಿವಾದಗಳು ಪಟ್ಟಾಬಿರಾಮ ರೆಡ್ಡಿ ಚಲನಚಿತ್ರ ಮಾಡಿದಾಗಲೂ ಮುಂದುವರಿದುವು. ಅದು ಹಲವು ಅತ್ಯಂತ ಸಂಕೀರ್ಣ ಸಾಮಾಜಿಕ ಪ್ರಶ್ನೆಗಳನ್ನು ಸೂಕ್ಷ್ಮ ದೃಷ್ಟಿಯಿಂದ ನೋಡಿದ ಕತೆ. ಅದರಿಂದ ಪ್ರಭಾವಿತರಾದವರಲ್ಲಿ ರಾಮಮನೋಹರ ಲೋಹಿಯಾ ಅವರೂ ಒಬ್ಬರು. ಅವರ ಸಲಹೆಯಂತೆ ರೆಡ್ಡಿ ಅದನ್ನು ಚಲನಚಿತ್ರ ಮಾಡಿದರು. ಅದರ ಎಲ್ಲ ವಿಭಾಗಗಳನ್ನು ಖ್ಯಾತನಾಮರು ನಿರ್ವಹಿಸಿದರು. ಸಂಪ್ರದಾಯವಾದಿಗಳ ವಿರೋಧ, ಸೆನ್ಸಾರ್ ಮಂಡಳಿಯ ಮೀನಮೇಷದ ಹೊರತಾಗಿಯು ಚಿತ್ರ ಯಶಸ್ವಿಯಾಯಿತು. ಅದು ಸತ್ಯಜಿತ್ ರೇ ಅವರ ’ಪ್ರತಿದ್ವಂದ್ವಿ’ಯೊಂದಿಗೆ ಸ್ಪರ್ಧಿಸಿ ಸ್ವರ್ಣಕಮಲ ರಾಷ್ಟ್ರ ಪ್ರಶಸ್ತಿ ಗಳಿಸಿತು. ಜತೆಗೆ ಅಂತರರಾಷ್ಟ್ರೀಯ ಪ್ರಶಸ್ತಿಗಳೂ ಬಂದುವು. ಅದರಲ್ಲಿ ಭಾಗಿಗಳಾದ ಹಲವರು ಚಲನಚಿತ್ರದ ಮುನ್ನೆಲೆಗೆ ಬಂದರು. ಅದನ್ನು ಅನುಸರಿಸಿ ಹೊಸಹಾದಿಯ ಚಿತ್ರಗಳು ಬಂದುವ. ಕನ್ನಡ ಚಲನಚಿತ್ರ ರಂಗಕ್ಕೆ ಸಂಸ್ಕಾರದ ಕೊಡುಗೆ ಅನನ್ಯವಾದುದು ಎಂದು ಅವರು ಹೇಳಿದರು.

ಬಿ. ದಾಮೋದರ ಆಚಾರ್ಯ ಸ್ವಾಗತಿಸಿದರು. ಸದಾನಂದ ಬೈಂದೂರು ವಂದಿಸಿದರು. ವಾಸುದೇವ ಗಂಗೇರ ನಿರೂಪಿಸಿದರು. ಸ್ನೇಹಲತಾ ರೆಡ್ಡಿ ಅವರ ಪುತ್ರಿ, ಸಿಡಬ್ಯ್ಲೂಸಿಯ ನಂದನಾ ರೆಡ್ಡಿ ಇದ್ದರು. ಹುಲಿ ಚಂದ್ರಶೇಖರ ಮತ್ತು ಅಶೋಕ ಸುವರ್ಣ ಅವರನ್ನು ಸನ್ಮಾನಿಸಲಾಯಿತು. ಸಂಸ್ಕಾರ ಚಲನಚಿತ್ರ ಮತ್ತು ಅದರ ಚಿತ್ರೀಕರಣದ ಹಿನ್ನೆಲೆ, ಮುನ್ನೆಲೆಗಳ ಕುರಿತಾದ ಸಾಕ್ಷ್ಯಚಿತ್ರ ಪ್ರದರ್ಶನಗೊಂಡುವು.

ಸಂಸ್ಕಾರ ಇಂದು ಬಂದಿದ್ದರೆ ಸಿಗುತ್ತಿದ್ದ ಪ್ರತಿಕ್ರಿಯೆ, ಕಾದಂಬರಿಯ ಬಗೆಗಿನ ವಾದವಿವಾದ, ಸಂಸ್ಕಾರ ನೀಡುವ ಸಂದೇಶ, ಚಲನಚಿತ್ರ ಮಾಧ್ಯಮಕ್ಕೆ ತರುವಾಗ ಮೂಲಕ್ಕೆ ಮಾಡಿಕೊಂಡ ಬದಲಾವಣೆಗಳು, ಧರ್ಮನಿಷ್ಠೆಯ ಪ್ರತೀಕವಾಗಿದ್ದ ಪ್ರಾಣೇಶಾಚಾರ್ಯರೂ ದೌರ್ಬಲ್ಯಕ್ಕೆ ಒಳಗಾಗುವುದು, ಹಾವನ್ನು ಕೊಂದು ಅದರ ಸಂಸ್ಕಾರ ಮಾಡುವ ದೃಶ್ಯದ ಪ್ರಸ್ತುತತೆ ಮತ್ತು ಸಂಕೇತ, ನಾರಣಪ್ಪನ ಶವವು ಸಂಸ್ಕಾರಕ್ಕೆ ಕಾದಿರುವಾಗ ಹದ್ದು, ಕಾಗೆಗಳ ಹಾರಾಟ, ಇಲಿಗಳ ಸಾವು ಸೃಷ್ಟಿಸುವ ಪರಿಣಾಮ ಕುರಿತು ಸುಬ್ರಹ್ಮಣ್ಯ ಪಡುಕೋಣೆ, ರವೀಂದ್ರ ದೊಡ್ಮನೆ, ರಾಮಾಂಜಿ, ಸಂತೋಷಕುಮಾರ ಶೆಟ್ಟಿ, ಎಸ್. ಜನಾರ್ದನ ಎತ್ತಿದ ಪ್ರಶ್ನೆಗಳಿಗೆ ಹುಲಿ ಚಂದ್ರಶೇಖರ, ಸಮುದಾಯದ ಜಿ. ವಿ. ಕಾರಂತ, ಸಿಡಬ್ಲ್ಯೂಸಿಯ ಬಿ. ದಾಮೋದರ ಆಚಾರ್ಯ ಸ್ಪಂದಿಸಿದರು.

 

Leave a Reply

Your email address will not be published. Required fields are marked *

20 − two =