ಸಬ್ಲಾಡಿ ಕೆ.ಶೀನಪ್ಪ ಶೆಟ್ಟಿ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್: ಕೃಷಿ ಪ್ರಶಸ್ತಿ ಪ್ರದಾನ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾಮಾಜಿಕ ನ್ಯಾಯ ಜನರಿಗೆ ನೀಡಿ ಊರಿನ ಶಾಂತಿ ಕಾಪಾಡುತ್ತಿದ್ದ ಸಬ್ಲಾಡಿ ಶೀನಪ್ಪ ಶೆಟ್ಟಿಯವರು ರಾಜಕಾರಣಿಗಳಿಗೆ ಮಾದರಿಯಾಗಿದ್ದವರು. ಅವರು ನೀಡುತ್ತಿದ್ದ ನ್ಯಾಯತೀರ್ಮಾನ ತೀರ್ಪುಗಳು, ಅಲ್ಲಿ ಅವರ ದೂರದೃಷ್ಟಿತ್ವವನ್ನು ಇವತ್ತು ಕೂಡಾ ಜನ ನೆನಪಿಸಿಕೊಳ್ಳುತ್ತಾರೆಂದರೆ ಅವರು ಎಷ್ಟೆಂದು ಜನಪ್ರಿಯರಾಗಿದ್ದರು ಎನ್ನುವುದನ್ನು ಊಹಿಸಬಹುದು. ಅವರ ಹೆಸರಿನಲ್ಲಿ ಟ್ರಸ್ಟ್ ಆರಂಭಿಸಿ, ಸಮಾಜಕ್ಕೆ ಸೇವೆ ಮುಂದುವರಿಸುತ್ತಿರುವುದು ಶ್ಲಾಘನಾರ್ಹವಾದುದು ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷರು, ರಾಜ್ಯ ಪ್ರಶಸ್ತಿ ಪುರಸ್ಕೃತ ಶಾಂತಾರಾಮ ಶೆಟ್ಟಿ ಬಾರ್ಕೂರು ಹೇಳಿದರು.

ಕುಂದಾಪುರದ ಬಂಟರ ಯಾನೆ ನಾಡವರ ಸಂಕೀರ್ಣದ ಮಿನಿಹಾಲ್‌ನಲ್ಲಿ ಸಬ್ಲಾಡಿ ಕೆ.ಶೀನಪ್ಪ ಶೆಟ್ಟಿ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನಡೆದ ವಿದ್ಯಾರ್ಥಿವೇತನ, ಆರೋಗ್ಯ ಸಹಾಯಧನ, ಕೃಷಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ, ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಥಮ ದರ್ಜೆ ಕಾಲೇಜು ಮಣೂರು-ಕೋಟ ಇಲ್ಲಿನ ಪ್ರಾಂಶುಪಾಲರಾದ ಡಾ|ರಾಜೇಂದ್ರ ನಾಯ್ಕ್ ಉಪನ್ಯಾಸ ನೀಡಿ, ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳ ವಿದ್ಯಾರ್ಜನೆ ಸಹಕಾರ ಮತ್ತು ಸ್ಪೂರ್ತಿಯಾಗಬೇಕು. ಶಿಕ್ಷಣದಲ್ಲಿ ಸಾಧನೆ ಮಾಡಲು ಪೂರಕವಾಗುತ್ತದೆ. ಉತ್ತಮ ಶಿಕ್ಷಣ ಪಡೆದು ಮೌಲ್ಯಯುತ ಜೀವನ ನಡೆಸಿದಾಗ ಇಂಥಹ ಕಾರ್ಯಕ್ರಮಗಳ ಆಶಯ ಈಡೇರುತ್ತದೆ ಎಂದರು.

Call us

ಮುಖ್ಯ ಅತಿಥಿಯಾಗಿ ಭಾಗವಹಿಸಿದ ನ್ಯಾಯವಾದಿ ಟಿ.ಬಿ ಶೆಟ್ಟಿ ಅವರು ಮಾತನಾಡಿ, ಶೀನಪ್ಪ ಶೆಟ್ಟಿ ಅವರ ರಾಜಿ ಪಂಚಾಯತಿಗೆಗಳು, ಅವರು ತೀರ್ಮಾನಿಸುತ್ತಿದ್ದ ವ್ಯಾಜ್ಯಗಳು, ಅಲ್ಲಿ ಅವರು ತೋರುತ್ತಿದ್ದ ದೂರದೃಷ್ಟಿತ್ವ ಅಗಾಧವಾದುದು. ತಾನು ನೀಡುವ ಸೇವೆ ಫಲಾನುಭವಿಗೆ ತಲುಪಿ ಆತ ಸಂತಷ ಪಟ್ಟಾಗ ಆಗುವ ಸಂತೋಷ ಹೆಚ್ಚು ಎನ್ನುವುದನ್ನು ಶೀನಪ್ಪ ಶೆಟ್ಟರು ಅರಿತುಕೊಂಡವರು. ಶಿಕ್ಷಣ, ಕೃಷಿ, ರಾಜಕೀಯ ಅವರ ನೆಚ್ಚಿನ ಕ್ಷೇತ್ರಗಳಾಗಿದ್ದವು. ಅವರು ಗತಿಸಿ ೭ ವರ್ಷಗಳಾದರೂ ಅವರ ಇಚ್ಛೆಯಂತೆ ಟ್ರಸ್ಟ್ ಮೂಲಕ ಸಾಮಾಜಿಕ ಸೇವೆ ನೀಡುತ್ತಿರುವುದು ಸ್ತುತ್ಯರ್ಹ ಎಂದರು.

ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಬಿ.ಅಪ್ಪಣ್ಣ ಹೆಗ್ಡೆ, ಟ್ರಸ್ಟ್‌ನ ಅಧ್ಯಕ್ಷರಾದ ಎನ್.ಆನಂದ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನೂಜಾಡಿ ಬ್ರಹ್ಮೇರಿಯ ಪ್ರಗತಿಪರ ಕೃಷಿಕ ಮಂಜುನಾಥ ನಾಯ್ಕ ಅವರಿಗೆ ಸಬ್ಲಾಡಿ ಶೀನಪ್ಪ ಶೆಟ್ಟಿ ಕೃಷಿ ಪ್ರಶಸ್ತಿ-೨೦೧೬ನ್ನು ಪ್ರದಾನ ಮಾಡಲಾಯಿತು. ವಂಡ್ಸೆ ಹೋಬಳಿ ವ್ಯಾಪ್ತಿಯ ಇಂಜಿನಿಯರಿಂಗ್, ಎಂಎಸ್‌ಸಿ, ನರ್ಸಿಂಗ್, ಎಂಬಿಎ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಆರ್ಹ ಫಲಾನುಭವಿಗಳಿಗೆ ವೈದ್ಯಕೀಯ ಸಹಾಯಧನ ಹಸ್ತಾಂತರಿಸಲಾಯಿತು.ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಮಾದ್ಯಮದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಹೊಸೂರು ಮೂಕಾಂಬಿಕಾ ಪ್ರೌಢಶಾಲೆಯ ವಿದ್ಯಾರ್ಥಿ ಶಶಿಕಾಂತ ಅವರಿಗೆ ವಿಶೇಷ ಪುರಸ್ಕಾರ ನೀಡಲಾಯಿತು. ನಂದ್ರೋಳ್ಳಿ ಹಿ.ಪ್ರಾ.ಶಾಲೆಯ ಮೈದಾನ ದುರಸ್ತಿಗೆ ಟ್ರಸ್ಟ್ ವತಿಯಿಂದ ರೂ.೨೫ಸಾವಿರ ಮೊತ್ತವನ್ನು ನೀಡಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಾಂತಾರಾಮ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಟ್ರಸ್ಟ್‌ನ ಸಂಚಾಲಕರಾದ ಎನ್.ಮಂಜಯ್ಯ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಟ್ರಸ್ಟ್‌ನ ಸದಸ್ಯರಾದ ನಾರಾಯಣ ಶೆಟ್ಟಿ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಅಶೋಕ್ ಕುಮಾರ್ ಶೆಟ್ಟಿ ಪರಿಚಯ ಪತ್ರ ವಾಚಿಸಿ, ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

eighteen − 12 =