ಸಬ್ಲಾಡಿ ಶೀನಪ್ಪ ಶೆಟ್ಟಿ ಮೆಮೋರಿಲ್ ಚಾರಿಟೆಬಲ್ ಟ್ರಸ್ಟ್: ಅನಾರೋಗ್ಯ ಪೀಡಿತರಿಗೆ ಸಹಾಯಧನ ಕೃಷಿ ಪ್ರಶಸ್ತಿ ಪ್ರದಾನ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಬ್ಲಾಡಿ ಕೆ. ಶೀನಪ್ಪ ಶೆಟ್ಟರು ರಾಜಕೀಯವಾಗಿ, ಸಾಮಾಜಿಕವಾಗಿ ಅಂದಿನ ದಿನಗಳಲ್ಲಿಯೇ ಸಾಕಷ್ಟು ಕೆಲಸ ಮಾಡಿದವರು.೧೯೬೦ನೇ ಇಸವಿಯಿಂದ ನಾವು ಅನ್ಯೋನ್ಯವಾಗಿಯೇ ಇದ್ದವರು. ಬೇರೆ ಬೇರೆ ಪಕ್ಷಗಳಲ್ಲಿ ತೊಡಗಿಸಿಕೊಂಡರೂ ಸಾಮಾಜಿಕ ಹಿತಚಿಂತನೆಯನ್ನು ಅವರಲ್ಲಿ ಸ್ಪಷ್ಟವಾಗಿ ಗಮನಿಸಬಹುದಾಗಿತ್ತು. ಶೀನಪ್ಪ ಶೆಟ್ಟರ ಹೆಸರಲ್ಲಿ ಟ್ರಸ್ಟ್ ಮೂಲಕ ಇಂಥಹ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದ ಶ್ಲಾಘನಾರ್ಹ ಎಂದು ಮಾಜಿ ಶಾಸಕ ಎ.ಜಿ.ಕೊಡ್ಗಿ ಹೇಳಿದರು.

Call us

ಸಬ್ಲಾಡಿ ಕೆ.ಶೀನಪ್ಪ ಶೆಟ್ಟಿ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ಇದರ ವತಿಯಿಂದ ಕುಂದಾಪುರದ ಬಂಟರ ಯಾನೆ ನಾಡವರ ಸಂಕೀರ್ಣದ ಎಸ್.ಎಸ್.ಹೆಗ್ಡೆ ಹಾಲ್‌ನಲ್ಲಿ ನಡೆದ ವಿದ್ಯಾರ್ಥಿ ವೇತನ ವಿತರಣೆ, ಆರೋಗ್ಯ ಸಹಾಯಧನ ವಿತರಣೆ, ಹಾಗೂ ಕೃಷಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರಾತಿನಿಧ್ಯ ಅವಶ್ಯಕತೆ ಇದೆ. ಬಹಳಷ್ಟು ಬದಲಾವಣೆಗಳು ಶಿಕ್ಷಣ ಕ್ಷೇತ್ರದಲ್ಲಿ ಆಗಬೇಕಿದೆ. ಆ ನೆಲೆಯಲ್ಲಿ ಟ್ರಸ್ಟ್ ವಿದ್ಯಾರ್ಥಿ ವೇತನ ನೀಡುತ್ತಿರುವುದು, ಉತ್ತಮ ಕೃಷಿಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ವೈದ್ಯಕೀಯ ನೆರವು ನೀಡಿ ಸ್ಪಂದಿಸುತ್ತಿರುವುದು ಒಳ್ಳೆಯ ಕಾರ್ಯ ಎಂದರು.

Call us

ಭಂಡಾರ್‌ಕಾರ‍್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ|ಎನ್.ಪಿ.ನಾರಾಯಣ ಶೆಟ್ಟಿ ಮಾತನಾಡಿ, ಶಿಕ್ಷಣಕ್ಕೆ ಹಣ ನೀಡುವುದು ದೇವರು ಮೆಚ್ಚತಕ್ಕಂತಹ ಕಾರ್ಯ. ಸಮಾಜದಲ್ಲಿ ಪಡೆದುಕೊಂಡ ಗೌರವ, ಸಮಾಜದ ಋಣ ತೀರಿಸುವ ಇಂಥಹ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿ ವೇತನ ಪಡೆದುಕೊಂಡ ವಿದ್ಯಾರ್ಥಿಗಳು ಜೀವನದಲ್ಲಿ ಮಹತ್ವದ ಸಾಧನೆ ಮಾಡಿ ಮುಂದೆ ಹತ್ತು ವಿದ್ಯಾರ್ಥಿಗಳಿಗಾದರೂ ಸಹಾಯ ಮಾಡುವ ಹಂತಕ್ಕೆ ಬೆಳೆಯಬೇಕು ಎಂದರು.

ದ.ಕ ಜಿಲ್ಲಾ ಹಾಲು ಒಕ್ಕೂಟ ಮಂಗಳೂರು ಇದರ ಮಾಜಿ ಅಧ್ಯಕ್ಷ ವಿಠಲ ಶೆಟ್ಟಿ ಶೇಡಿಕೊಡ್ಲು , ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಶುಭಶಂಸನೆಗೈದರು. ಟ್ರಸ್ಟ್‌ನ ಅಧ್ಯಕ್ಷ ಎನ್.ಆನಂದ ಶೆಟ್ಟಿ ಸಬ್ಲಾಡಿ, ಸಬ್ಲಾಡಿ ಕುಟುಂಬಸ್ಥರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ಚಂದ್ರಶೇಖರ ಶೆಟ್ಟಿ ಬಿಜ್ರಿ ಅವರಿಗೆ ಸಬ್ಲಾಡಿ ಶೀನಪ್ಪ ಶೆಟ್ಟಿ ಕೃಷಿ ಪ್ರಶಸ್ತಿ-೨೦೧೭ ಪ್ರದಾನ ಮಾಡಲಾಯಿತು. ಉನ್ನತ ವ್ಯಾಸಂಗ ಮಾಡುವ ವಂಡ್ಸೆ ಹೋಬಳಿಯ ವಿದ್ಯಾರ್ಥಿಗಳಿಗೆ ಹಾಗೂ ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವು ವಿತರಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ೪ನೇ ಸ್ಥಾನ ಪಡೆದ ಚಿನ್ಮಯಿ ಅವರ ಪರವಾಗಿ ಅವರ ತಂದೆಯರನ್ನು ಅಭಿನಂದಿಸಲಾಯಿತು.

ಟ್ರಸ್ಟ್‌ನ ಸಂಚಾಲಕ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಟ್ರಸ್ಟ್ ಸದಸ್ಯ ಅಶೋಕ ಕುಮಾರ ಮಾಡ ಪ್ರಶಸ್ತಿ ಪುರಸ್ಕೃತರ ಪರಿಚಯಿಸಿದರು. ಟ್ರಸ್ಟ್‌ನ ಎನ್.ನಾರಾಯಣ ಶೆಟ್ಟಿ ಸಬ್ಲಾಡಿ ವಂದಿಸಿದರು. ಟ್ರಸ್ಟ್‌ನ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

 

Leave a Reply

Your email address will not be published. Required fields are marked *

12 + nineteen =