ಬೈಂದೂರು: ಮಾನವ ಸಂಘಜೀವಿಯಾಗಿದ್ದು, ಸಂಘಟನೆಗಳು ಪ್ರಾಮಾಣಿಕ, ಸತ್ಯ, ನಿಷ್ಠೆ ಮತ್ತು ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡಾಗ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಂಘಟಿತ ಸಮಾಜ ನಿರ್ಮಾಣವಾಗಬೇಕಾದರೆ, ಸಂಘ ಸಂಸ್ಥೆಗಳ ಪಾತ್ರ ಮಹತ್ವದಾಗಿದೆ. ಜನಪರ ಕಾಳಜಿಯ ಕಾರ್ಯಗಳು ಹಾಗೂ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನ ಲಯನ್ಸ್ ಸಂಸ್ಥೆಯದಾಗಿದೆ ಎಂದು ಮೂಡಬಿದಿರೆ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ರಮೇಶ್ ಶೆಟ್ಟಿ ಹೇಳಿದರು.
ಬೈಂದೂರು-ಉಪ್ಪುಂದ ಲಯನ್ಸ್ ಕ್ಲಬ್‌ಗೆ ಜಿಲ್ಲೆ 317ಸಿ ಪ್ರಾಂತಿಯ ಅಧ್ಯಕ್ಷ (ರಿಜನಲ್ ಚೇರ್‌ಮನ್) ಫಿಲಿಪ್ ಡಿ’ಕೊಷ್ಟಾ ಅಧಿಕೃತ ಭೇಟಿಯ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿದರು. ಲಯನ್ಸ್ ಕ್ಲಬ್ ಸಾಮಾಜಿಕ ಕಾರ್ಯಗಳಿಂದ ಜನ ಮನ್ನಣಿಗಳಿಸಿದೆ. ನೂರು ವರ್ಷದ ಸಂಭ್ರಮದಲ್ಲಿರುವ ಲಯನ್ಸ್ ಈ ವರ್ಷ ವಿವಿಧ ಭಾಗಗಳಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಸಂತಸ ತಂದಿದೆ. ಬೈಂದೂರು-ಉಪ್ಪುಂದ ಲಯನ್ಸ್ ಕ್ಲಬ್‌ನ ಒಡನಾಡಿಗಳು ಜೊತೆ ಸೇರಿ ಒಳ್ಳೆಯ ವಿಚಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ನಿಸ್ವಾರ್ಥ ಸೇವಾ ಮನೋಭಾವನೆಯಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ಪಂದಿಸುತ್ತಾ ಪ್ರಸಕ್ತ ವರ್ಷ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸುವುದರ ಮೂಲಕ ಸಾಮಾಜಿಕ ಕೈಂಕರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸಮಾಜದ ದುರ್ಬಲರ ಸೇವೆಯಲ್ಲಿ ಕೈಜೋಡಿಸಿರುವುದು ಅರ್ಥಪೂರ್ಣವಾಗಿದೆ ಎಂದು ಕ್ಲಬ್ಬಿನ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಕ್ಲಬ್‌ನ ಅಧ್ಯಕ್ಷ ಜಿ. ಗೋಕುಲ್ ಶೆಟ್ಟಿ ಅಧ್ಯಕ್ಷತೆವಹಿಸಿ ಸ್ವಾಗತಿಸಿದರು. ಪ್ರಾಂತಿಯ ಅಧ್ಯಕ್ಷ (ರಿಜನಲ್ ಚೇರ್‌ಮನ್) ಫಿಲಿಪ್ ಡಿ’ಕೊಷ್ಟಾ ಹಾಗೂ ಲಯನೆಸ್ ಸಂಯೋಜಕಿ ನಿರುಪಮಾ ಪ್ರಸಾದ ಶೆಟ್ಟಿ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯದರ್ಶಿ ಶೇಖ್ ಫಯಾಜ್ ಆಲಿ ವರದಿ ವಾಚಿಸಿದರು. ಕ್ಲಬ್ಬಿಗೆ ಹೊಸದಾಗಿ ಸೇರ್ಪಡೆಗೊಂಡ ಎನ್. ದಿವಾಕರ ಶೆಟ್ಟಿ ಮತ್ತು ಸಂತೋಷ್ ಶೆಟ್ಟಿ ಹಂದಕುಂದ ಇವರಿಗೆ ವಲಯಾಧ್ಯಕ್ಷ ರಮಾನಂದ ಪ್ರತಿಜ್ಞಾವಿಧಿ ಭೋಧಿಸಿದರು. ವಲಯಾಧ್ಯಕ್ಷ ನಿರಂಜನ್, ಲಯನೆಸ್ ಅಧ್ಯಕ್ಷೆ ಗೀತಾ ಗೊಕುಲ್ ಶೆಟ್ಟಿ ಉಪಸ್ಥಿತರಿದ್ದರು. ಕ್ಲಬ್ ಸದಸ್ಯರಾದ ಸತೀಶ್ ಶೆಟ್ಟಿ ನಿರೂಪಿಸಿ, ಬಿ.ಎಸ್.ಸುರೇಶ ಶೆಟ್ಟಿ ವಂದಿಸಿದರು.