ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವರ್ಷಪೂರ್ತಿ ಕೃಷಿ-ಕೂಲಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಜನರಿಗೆ ಕಲಾಸಕ್ತಿ ವಿಶಿಷ್ಟವಾಗಿದ್ದು, ಸೂಕ್ತ ವೇದಿಕೆ ದೊರೆತರೆ ಅವರ ಪ್ರತಿಭೆ ಅನಾವರಣಗೊಳ್ಳುವುದಲ್ಲದೇ ಅಂತಹ ಅವಕಾಶಗಳನ್ನು ಒದಗಿಸಿಕೊಡುವ ಮೂಲಕ ಸಾಂಸ್ಕೃತಿಕ ಆಸಕ್ತಿಯನ್ನು ಪ್ರೋತ್ಸಾಹಿಸಿದಂತಾಗುವುದು ಎಂದು ಯಳಜಿತ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಮಂಗೇಶ್ ಶೆಣೈ ಹೇಳಿದರು.
ಪರಿಶಿಷ್ಟ ಪಂಗಡ, ಬುಡಕಟ್ಟು ಜನಾಂಗದ ರಂಗತಂಡ ‘ಸಮ್ಮಿಲನ(ರಿ) ಯಳಜಿತ’ ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಯಳಜಿತದ ನಾಟ್ಯ ಗಣೇಶ ರಂಗಮಂದಿರದಲ್ಲಿ ಆಯೋಜಿಸಲಾದ ವನಸಿರಿಯಲ್ಲೊಂದು ರಂಗತರಂಗ-2016 ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಶುಭಶಂಸನೆಗೈದರು.
ಗೊಳಿಹೊಳೆ ಗ್ರಾಪಂ ಅಧ್ಯಕ್ಷ ರಾಜು ಪೂಜಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು. ಯಳಜಿತ ಸ.ಹಿ.ಪ್ರಾ ಶಾಲೆ ಎಡಿಎಂಸಿ ಅಧ್ಯಕ್ಷ ಸುಬ್ಬಣ್ಣ ಕೊಠಾರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರುಗಳಾದ ಕುಪ್ಪಯ್ಯ ಪೂಜಾರಿ, ಶಿವರಾಜ ನಾಯ್ಕ್, ಯಳಜಿತ ಸಹಿಪ್ರಾ ಶಾಲೆಯ ಮುಖ್ಯೋಪಧ್ಯಾಯ ನಾರಾಯಣ ಹೋಬಳಿದಾರ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜನಪದ ಕಲಾವಿದ ರಾಮ ಮರಾಠಿ, ಅಧ್ಯಾಪಕ ಕೆ.ಎಂ. ಹೊಸೇರಿ ಹಾಗೂ ನಾಟಿ ವೈದ್ಯ ನಾರಾಯಣ ಮರಾಠಿ ಅವರನ್ನು ಸನ್ಮಾನಿಸಲಾಯಿತು. ಸಮ್ಮಿಲನ ರಿ. ಯಳಜಿತದ ಸಂಚಾಲಕ ಗಣಪತಿ ಹೋಬಳಿದಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಕ್ಷ ರಂಗು ಮರಾಠಿ ಸ್ವಾಗತಿಸಿದರು. ಕಾರ್ಯದರ್ಶಿ ವೆಂಕಟರಮಣ ವಂದಿಸಿದರು. ಶಿಕ್ಷಕ ಕೆ.ಎಂ. ಹೊಸೇರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಲಾವಣ್ಯ ಕಲಾವಿದರಿಂದ ಮುದ್ದಣ್ಣನ ಪ್ರಮೋಶನ್ ಪ್ರಸಂಗ ನಾಟಕ ಪ್ರದರ್ಶನಗೊಂಡಿತು.