ಸರಕಾರದ ಯೋಜನೆಗಳ ಸಮರ್ಪಕ ಅನುಷ್ಠಾನ ಜವಾಬ್ದಾರಿ ಅಧಿಕಾರಿಗಳದ್ದು: ಶಾಸಕ ಗೋಪಾಲ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ರಾಜ್ಯ ಸರ್ಕಾರ ಕೃಷಿಕರ, ಬಡವರ, ಅಲ್ಪಸಂಖ್ಯಾತರ, ಶೋಷಿತರ ಹಾಗೂ ಮಹಿಳೆಯರ ಅಭಿವೃದ್ಧಿಗಾಗಿ ಹತ್ತಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಕ್ಷೇತ್ರದಲ್ಲಿ ರಸ್ತೆ, ಸೇತುವೆ ಮೊದಲಾದ ಅಭಿವೃದ್ಧಿ ಕಾರ್ಯಗಳಿಗಾಗಿ ಸಾವಿರ ಕೋಟಿಗೂ ಮಿಕ್ಕಿ ಅನುದಾನ ಒದಗಿಸಿದೆ ಎಂದು ಕೆಎಸ್‌ಆರ್‌ಟಿಸಿ ಸಂಸ್ಥೆಯ ಅಧ್ಯಕ್ಷ, ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ಸಭಾಭವನದಲ್ಲಿ ನಡೆದ ಕೊಲ್ಲೂರು ಮತ್ತು ಜಡ್ಕಲ್ ಗ್ರಾಮ ಪಂಚಾಯತ್ ಮಟ್ಟದ ’ಜನರ ಮನೆಗೆ ಸರಕಾರ’ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸರ್ಕಾರಗಳು ಜನರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದರೂ ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಜನರಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ. ಇದರಲ್ಲಿ ಕೆಲವು ಬಾರಿ ಕಾನೂನು ತೊಡಕಾದರೂ ಅದನ್ನು ಸರ್ಕಾರದ ಗಮನಕ್ಕೆ ತಂದು ಸ್ವಲ್ಪಮಟ್ಟಿನ ಬದಲಾವಣೆ ಮಾಡಿಕೊಳ್ಳುವ ಅವಕಾಶವಿದೆ. ಇದರಿಂದ ಫಲಾನುಭವಿಗಳಿಗೆ ತೊಂದರೆಯಾಗಬಾರದು ಎಂದರು.

ಕಂದಾಯ ಮತ್ತು ಅರಣ್ಯ ಇಲಾಖೆಗಳ ಜಂಟಿ ಸರ್ವೆಕಾರ್ಯ ಹಾಗೂ ಬೆಲೆ ಸಡಿಲೀಕರಣದ ಬಗ್ಗೆ ನಡೆದ ಚರ್ಚೆಯಿಂದ ೯೪ಸಿ ಕಾನೂನಿನ ಅಡಿಯಲ್ಲಿ ಹಕ್ಕುಪತ್ರ ವಿತರಣೆಗೆ ಸ್ವಲ್ಪ ವಿಳಂಬವಾಗಿದೆ. ಕೊಲ್ಲೂರು ಹಾಗೂ ಜಡ್ಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಥಮ ಸುತ್ತಿನಲ್ಲಿ ೨೫೦ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಕೆಲಸಕ್ಕೆ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಹತ್ತಾರು ವರ್ಷಗಳಿಂದ ವಾಸಿಸುತ್ತಿರುವ ಎಲ್ಲಾ ಕುಟುಂಬಗಳಿಗೂ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಕ್ಷೇತ್ರ ವ್ಯಾಪ್ತಿಗೆ ಸರ್ಕಾರ ೧೨೦೦ ಮನೆಗಳು ಮಂಜೂರು ಮಾಡಿದ್ದಲ್ಲದೇ ಶಾಸಕರ ಶಿಫಾರಸ್ಸಿನ ಮೇರೆಗೆ ೬೬೪ ಮನೆಗಳು ದೊರೆತಿದೆ ಎಂದು ಸರ್ಕಾರದ ಸಾಧನೆಯನ್ನು ವಿವರಿಸಿದರು..

ಜಿಪಂ ಸದಸ್ಯ ಶಂಕರ ಪೂಜಾರಿ, ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ. ತಾಪಂ ಸದಸ್ಯರಾದ ಗ್ರೀಷ್ಮಾ ಭಿಡೆ, ಉದಯ ಪೂಜಾರಿ, ಕೊಲ್ಲೂರು ಗ್ರಾಪಂ ಅಧ್ಯಕ್ಷ ಮಾವಿನಕಾರು ಜಯಪ್ರಕಾಶ್ ಶೆಟ್ಟಿ, ಜಡ್ಕಲ್ ಗ್ರಾಪಂ ಅಧ್ಯಕ್ಷ ಅನಂತಮೂರ್ತಿ, ದೇವಳದ ಎಇಒ ಎಚ್. ಕೃಷ್ಣಮೂರ್ತಿ, ವೃತ್ತ ನಿರೀಕ್ಷಕ ರಾಘವ ಸೀತಾರಾಮ ಪಡೀಲ್ ಹಾಗೂ ಎರಡೂ ಗ್ರಾಪಂಗಳ ಉಪಾಧ್ಯಕ್ಷರು ಉಪಸ್ಥಿತರಿದ್ದರು.

ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಕೆಎಸ್‌ಆರ್‌ಟಿಸಿ, ಮೆಸ್ಕಾಂ, ಆರೋಗ್ಯ, ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ, ಪಶುಸಂಗೋಪನೆ, ಮೀನುಗಾರಿಕೆ, ಅರಣ್ಯ ಹಾಗೂ ಪೋಲಿಸ್ ಇಲಾಖೆಯ ಮುಖ್ಯಸ್ಥರು ತಮ್ಮ ಇಲಾಖೆಯ ಯೋಜನೆ ಕುರಿತು ಹಾಗೂ ಸರ್ಕಾರದಿಂದ ಸಿಗುವ ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಅರ್ಹ ಫಲಾನುಭವಿಗಳಿಗೆ ಕೃಷಿ ಇಲಾಖೆಯಿಂದ ಟಿಲ್ಲರ್, ಕೃಷಿಉಪಕರಣಗಳನ್ನು ವಿತರಿಸಲಾಯಿತು. ಬೈಂದೂರು ವಿಶೇಷ ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಒ. ಆರ್. ಪ್ರಕಾಶ್ ಪ್ರಾಸ್ತಾವಿಸಿದರು. ಸುಧಾಕರ್ ಪಿ. ನಿರೂಪಿಸಿದರು. ಸಭೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

19 + 18 =