ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸೇ ಸೇನಾಪುರ ಗ್ರಾಮ ಪಂಚಾಯಿತಿಯನ್ನು ನಾಡ ಗ್ರಾಮ ಪಂಚಾಯಿತಿಯಿಂದ ಪ್ರತ್ಯೇಕಿಸಿ ಹತ್ತಿರದ ಬೇರೆ ಗ್ರಾಮ ಪಂಚಾಯಿತಿಗೆ ಸೇರಿಸುವ ಪ್ರಸ್ತಾಪವನ್ನು ವಿರೋಧಿಸಿ ಸೇನಾಪುರ ಗ್ರಾಮಸ್ಥರು ಮಂಗಳವಾರ ನಾಡ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆ ಕುರಿತು ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬೆಳ್ಳಾಡಿ ಶಂಕರ ಶೆಟ್ಟಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು. ನಾಡ ಗ್ರಾಮ ಪಂಚಾಯಿತಿ ಬೈಂದೂರು ತಾಲ್ಲೂಕಿಗೂ, ಅದರ ಭಾಗವಾದ ಸೇನಾಪುರ ಗ್ರಾಮ ಕುಂದಾಪುರ ತಾಲ್ಲೂಕಿಗೂ ಸೇರಿರುವ ಕಾರಣ ಅದನ್ನು ನಾಡದಿಂದ ಬೇರ್ಪಡಿಸುವ ಅನಿವಾರ್ಯತೆ ಎದುರಾಗಿದೆ. ಈ ಸಂದರ್ಭವನ್ನು ಬಳಸಿಕೊಂಡು ಸೇನಾಪುರವನ್ನು ಹೊಸಾಡು ಅಥವಾ ಹಕ್ಲಾಡಿ ಗ್ರಾಮ ಪಂಚಾಯಿತಿಗೆ ಸೇರಿಸುವ ಹುನ್ನಾರ ನಡೆಯುತ್ತಿದೆ. ಪಂಚಾಯತ್ ರಾಜ್ ಕಾಯಿದೆಯ ಅವಕಾಶಗಳಂತೆ ಸೇನಾಪುರ ಗ್ರಾಮವು ಸ್ವತಂತ್ರ ಗ್ರಾಮ ಪಂಚಾಯಿತಿ ಆಗುವ ಎಲ್ಲ ಅರ್ಹತೆ ಹೊಂದಿದೆ. ಆದುದರಿಂದ ಅದನ್ನು ಶೀಘ್ರ ಗ್ರಾಮ ಪಂಚಾಯಿತಿ ಎಂದು ಘೋಷಿಸಬೇಕು. ಆ ಬಗ್ಗೆ ಸಂಬಂಧಿಸಿದ ಸಚಿವರಿಗೆ, ಶಾಸಕರಿಗೆ, ವಿವಿಧ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ. ಈ ಬೇಡಿಕೆ ಈಡೇರಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಭು ಕೆನ್ನೆಡಿ ಪಿರೇರಾ ಕೂಡ ಪ್ರಸ್ತಾವವನ್ನು ವಿರೋಧಿಸಿ ಹಕ್ಲಾಡಿ ಅಥವಾ ಹೊಸಾಡು ಕೇಂದ್ರ ಸ್ಥಾನ ಸೇನಾಪುರದಿಂದ 8-10 ಕಿಲೋಮೀಟರು ದೂರ ಇರುವುದರಿಂದ ಸೇನಾಪುರವನ್ನು ಯಾವುದೇ ಕಾರಣಕ್ಕೂ ಅದರ ಜತೆಗೆ ಸೇರಿಸ ಬಾರದು ಎಂದರು.
ಮನವಿ ಸ್ವೀಕರಿಸಿದ ನಾಡ ಅಭಿವೃದ್ಧಿ ಅಧಿಕಾರಿ ಹರೀಶ ಮೊಗವೀರ ಅದನ್ನು ಸಂಬಂಧಿಸಿದವರಿಗೆ ಕಳುಹಿಸಲಾಗುವುದು ಎಂದರು. ಸಂದೀಪ್ ಪೂಜಾರಿ ಸೇನಾಪುರ, ಶೇಖರ್ ಶೆಟ್ಟಿ ಬೆಳ್ಳಾಡಿ, ಮಂಜುನಾಥ ಪೂಜಾರಿ ಬೆಳ್ಳಾಡಿ, ಇತರರು ಇದ್ದರು.