ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಾವುಂದದ ಅರೆಹೊಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭವಾದ ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕಲಿಕೆಯ ಜತೆಯಲ್ಲಿ ವ್ಯಕ್ತಿತ್ವ ವಿಕಾಸಕ್ಕೆ ಹೆಚ್ಚು ಒತ್ತು ನೀಡಬೇಕು. ಸೇವಾ ಮನೋಭಾವನೆ ರೂಢಿಸಿಕೊಳ್ಳಬೇಕು. ಅವು ಮುಂದೆ ಉದ್ಯೋಗ ನಡೆಸುವಾಗ ಯಶಸ್ಸು ಗಳಿಸಲು ನೆರವಾಗುತ್ತವೆ. ರಾಷ್ಟ್ರೀಯ ಸೇವಾ ಯೋಜನೆಯ ಸದಸ್ಯರಾಗಿ ಇವುಗಳನ್ನು ಪಡೆಯಬಹುದು ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಎನ್. ನರಸಿಂಹ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಟಿ. ಪಾಲಾಕ್ಷ ಸ್ವಾಗತಿಸಿದರು. ಸಮಾಜ ಶಾಸ್ತ್ರ ಉಪನ್ಯಾಸಕ ಹಾಗೂ ಯೋಜನಾಧಿಕಾರಿ ರಾಘವೇಂದ್ರ ಗುಡಿಗಾರ್ ಯೋಜನೆ ಮತ್ತು ಶಿಬಿರದ ಚಟುವಟಿಕೆಗಳನ್ನು ವಿವರಿಸಿದರು. ಅತಿಥಿಗಳಾಗಿದ್ದ ತಾಲೂಕು ಪಂಚಾಯತ್ ಸದಸ್ಯೆ ಶ್ಯಾಮಲಾ ಕುಂದರ್, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಂತಿ ಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ ಎನ್. ದಾಸ್, ಮುಖ್ಯೋಪಾಧ್ಯಾಯ ನಾರಾಯಣ ದೇವಾಡಿಗ ಶುಭ ಹಾರೈಸಿದರು.
ಜೀವಶಾಸ್ತ್ರ ಉಪನ್ಯಾಸಕ ಹಾಗೂ ಸಹಯೋಜನಾಧಿಕಾರಿ ಹರೀಶ ಕೋಟ್ಯಾನ್ ವಂದಿಸಿದರು. ಕನ್ನಡ ಉಪನ್ಯಾಸಕ ಸತೀಶ ಎಂ ನಿರೂಪಿಸಿದರು. ಜೀವ ಶಾಸ್ತ್ರ ಉಪನ್ಯಾಸಕಿ ಹಾಗೂ ಮಹಿಳಾ ಸಲಹೆಗಾರ್ತಿ ಸುಜಾತಾ ಕೆ, ಘಟಕದ ನಾಯಕ ಮಹೇಶ್, ನಾಯಕಿ ಲಕ್ಷ್ಮೀ ಇದ್ದರು.