ಸೇವೆಗೆ ಇನ್ನೊಂದು ಹೆಸರು ಸಹಕಾರಿ ಸಂಸ್ಥೆಗಳು: ಎಸ್. ಪ್ರಕಾಶ್ಚಂದ್ರ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ‘ಸೇವೆಗೆ ಇನ್ನೊಂದು ಹೆಸರು ಸಹಕಾರಿಯಾಗಿದ್ದು, ಗ್ರಾಹಕರ ಅಭಿವೃದ್ಧಿಯೇ ನಮ್ಮ ಧ್ಯೇಯ. ಸೇವೆಯೇ ನಮ್ಮ ಮುಖ್ಯ ಧರ್ಮ. ನಾವು ನಿಮಗೆ- ನೀವು ನಮಗೆ ಇದು ಸಹಕಾರಿಯ ಘೋಷವಾಕ್ಯ. ಸಹಕಾರಿ ರಂಗದಲ್ಲಿ ಸಂಘದ ಸದಸ್ಯರೇ ಮಾಲಕರಾಗಿದ್ದು, ಹಲವಾರು ವರ್ಷಗಳಿಂದ ತನ್ನ ಸದಸ್ಯರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸಮಾಡುತ್ತಿದೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

ಉಪ್ಪುಂದ ಶಂಕರ ಕಲಾಮಂದಿರದ ಸಮೃದ್ಧ ಸಭಭವನದಲ್ಲಿ ನವೋದಯ ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು, ಹಾಗೂ ಉಪ್ಪುಂದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ವತಿಯಿಂದ ಸಮಾರು ಮೂರು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರಧಾನ ಕಚೇರಿಯ ನೂತನ ಕಟ್ಟಡದ ಉದ್ಘಾಟನಾ (ಡಿ.೧೪) ಸಮಾರಂಭದ ಅಂಗವಾಗಿ ನವೋದಯ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಪ್ರವರ್ಧಮಾನದಲ್ಲಿದ್ದು, ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪ್ರಬಲ ಪೈಪೋಟಿಯೊಡ್ಡುವ ಹಾಗೆ ಬೆಳೆದಿದೆ. ಯಾವುದೇ ಜಾತೀಯತೆ, ಧರ್ಮ, ರಾಜಕೀಯ ಇಲ್ಲದೆ ಮಹಿಳಾ ಸಂಘಟನೆಯ ಅಭಿವೃದ್ಧಿ ಹಾಗೂ ಸ್ವಾವಲಂಬನೆಗಾಗಿ ಹಾಗೂ ಸಂಘದ ಮೂಲಕ ಸಹಾಯ, ಸಹಕಾರ ನೀಡುವುದರೊಂದಿಗೆ ಮತ್ತು ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರು ಎಂಬ ಭಾವನೆ ಮೂಡಿಸುವ ನೆಲೆಯಲ್ಲಿ ಸಂಘದ ಎಲ್ಲಾ ಮಹಿಳಾ ಸದಸ್ಯರಿಗೆ ಸಮವಸ್ತ್ರ ನೀಡುವ ಉದ್ದೇಶವಾಗಿದೆ ಎಂದರು.

ಸಂಘದ ನಿರ್ದೇಶಕ ಮೋಹನ ಪೂಜಾರಿ, ನವೋದಯ ಚಾರಿಟೇಬಲ್ ಟ್ರಸ್ಟ್ ಮೇಲ್ವಿಚಾರಕ ಶಿವರಾಮ ಪೂಜಾರಿ ಯಡ್ತರೆ ಉಪಸ್ಥಿತರಿದ್ದರು. ಈ ಸಂದರ್ಭ ೪೭೦ ಗುಂಪಿನ ಸುಮಾರು ೫೧೦೦ ಮಹಿಳಾ ಸದಸ್ಯರಿಗೆ ಸಮವಸ್ತ್ರ ವಿತರಿಸಲಾಯಿತು. ಸಂಂಘದ ಲೆಕ್ಕಪತ್ರ ವಿಭಾಗದ ಮುಖ್ಯಸ್ಥೆ ನಾಗರತ್ನ ಪ್ರಾರ್ಥಿಸಿದರು, ಕಾರ್ಯನಿರ್ವಹಣಾಧಿಕಾರಿ ಸತೀಶ್ ಪೈ ಸ್ವಾಗತಿಸಿದರು. ವ್ಯವಸ್ಥಾಪಕ ಹಾವಳಿ ಬಿಲ್ಲವ ನಿರೂಪಿಸಿ, ನಿರ್ದೇಶಕ ಗುರುರಾಜ್ ಹೆಬ್ಬಾರ್ ವಂದಿಸಿದರು.

Leave a Reply

Your email address will not be published. Required fields are marked *

four + 10 =