ಕುಂದಾಪುರ: ತಾರಿಬೇರು ಗ್ರಾಮದ ಗಂಗನಕುಂಬ್ರಿಯ ಸೌಪರ್ಣಿಕಾ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಒಂದೇ ಕುಟುಂಬದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಆಲೂರು ಗಾಣದಡಿ ನಿವಾಸಿ ಶಂಕರ ದೇವಾಡಿಗ ಅವರ ಪುತ್ರ ಅಕ್ಷಯ ದೇವಾಡಿಗ (16) ಮತ್ತು ಚಿಂತಾಮಣಿಯಲ್ಲಿ ಹೊಟೇಲ್ ಉದ್ಯಮ ನಡೆಸಿಕೊಂಡಿದ್ದ ಆಲೂರು ಮೂಲದ ನರಸಿಂಹ ದೇವಾಡಿಗ ಅವರ ಪುತ್ರ ನವೀನ ದೇವಾಡಿಗ (16) ಮೃತಪಟ್ಟ ಬಾಲಕರು.
ಇಬ್ಬರೂ ಒಂದೇ ಕುಟುಂಬದವರಾಗಿದ್ದು, ನವೀನ್ ಸಂಬಂಧಿಕರ ಮದುವೆ ಆರತಕ್ಷತೆ ಹಿನ್ನೆಲೆಯಲ್ಲಿ ಆಲೂರಿನ ತನ್ನ ಅಜ್ಜ ಬಚ್ಚು ದೇವಾಡಿಗರ ಮನೆಗೆ ಬಂದಿದ್ದ. ರವಿವಾರ ಮಧ್ಯಾಹ್ನ ತ್ರಾಸಿಯಲ್ಲಿ ನಡೆಯಲಿದ್ದ ಈ ಕಾರ್ಯಕ್ರಮಕ್ಕೆ ಹೊರಧಿಡುವ ಸಿದ್ಧತೆಯಲ್ಲಿದ್ದ ಈ ಬಾಲಕರು ನೆರೆಯ ಗೆಳೆಯರೊಂದಿಗೆ ಬೆಳಗ್ಗೆ ಸ್ನಾನ ಮಾಡಲೆಂದು ಹೊಳೆಗೆ ಹೋಗಿದ್ದರು. ಈ ಸಂದರ್ಭ ದುರಂತ ಸಂಭವಿಧಿಸಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇಲೆತ್ತಿದರೂ ಜೀವ ಉಳಿಯಲಿಲ್ಲ
ಅಕ್ಷಯ ಮತ್ತು ನವೀನ್ ಸೇರಿದಂತೆ ಐದಾರು ಮಕ್ಕಳು ಒಟ್ಟಾಗಿ ಹೊಳೆಗೆ ಸ್ನಾನಕ್ಕೆ ಹೋಗಿದ್ದು, ಅವರಲ್ಲಿ ನಾಲ್ವರು ಬಾಲಕರು ಸ್ನಾನ ಮುಗಿಸಿ ಬೇಗನೆ ವಾಪಸಾಗಿದ್ದರು. ಓರ್ವ ಪುಟ್ಟ ಬಾಲಕ ದಡದಲ್ಲಿ ಕುಳಿತಿದ್ದು, ಅಕ್ಷಯ ಮತ್ತು ನವೀನ್ ಬಳಿಕ ನದಿಗೆ ಇಳಿದಿದ್ದರು. ನದಿಯಲ್ಲಿ ಸ್ವಲ್ಪ ಮುಂದೆ ಸಾಗಿದಾಗ ನೀರಿನ ಸೆಳವಿಗೆ ಸಿಲುಕಿದರು.
ಇಬ್ಬರಿಗೂ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ. ನೀರಿನಲ್ಲಿ ಮುಳುಗುತ್ತಿದ್ದ ಅವರನ್ನು ನೋಡಿ ದಡದಲ್ಲಿ ಕುಳಿತಿದ್ದ ಬಾಲಕ ಬೊಬ್ಬೆ ಹೊಡೆದುದನ್ನು ಕೇಳಿ ಓಡಿಬಂದ ಗ್ರಾಮಸ್ಥರೊಬ್ಬರು ಬಾಲಕರನ್ನು ಮೇಲಕ್ಕೆತ್ತಿದರು. ಆದರೆ ಅಕ್ಷಯ ಅಷ್ಟರಲ್ಲಿಯೇ ಕೊನೆಯುಸಿರೆಳೆದಿದ್ದ. ಇನ್ನೂ ಉಸಿರಾಡುತ್ತಿದ್ದ ನವೀನ್ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟಿದ್ದಾನೆ.
ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದರು
ಈ ಇಬ್ಬರೂ ಬಾಲಕರು ಎಸೆಸೆಲ್ಸಿ ತರಗತಿ ವಿದ್ಯಾರ್ಥಿಗಳಾಗಿದ್ದು, ಕಲಿಕೆಯಲ್ಲಿ ಪ್ರತಿಭಾವಂತರಾಗಿದ್ದರು. ಆಲೂರು ಸರಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಅಕ್ಷಯ 559 ಅಂಕಗಳನ್ನು (ಶೇ. 89) ಹಾಗೂ ಚಿಂತಾಮಣಿಯಲ್ಲಿ ಓದುತ್ತಿದ್ದ ನವೀನ್ 551 ಅಂಕಗಳನ್ನು (ಶೇ. 88) ಪಡೆದು ವಿಶಿಷ್ಟ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರು ಎಂದು ತಿಳಿದುಬಂದಿದೆ.