ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ನೂತನ ಬೈಂದೂರು ತಾಲೂಕು ರಚನೆಯಾದ ಬಳಿಕ ನಾಡ ಗ್ರಾಮ ಪಂಚಾಯತಿಯಿಂದ ವಿಭಜನೆಗೊಂಡು ಕುಂದಾಪುರ ತಾಲೂಕಿನಲ್ಲಿ ಅತಂತ್ರ ಗ್ರಾಮವಾಗಿ ಉಳಿದು ಬಳಿಕ ಹೊಸಾಡು ಗ್ರಾಮ ಪಂಚಾಯತಿಗೆ ಸೇರ್ಪಡೆಗೊಂಡ ಸೇನಾಪುರ ಗ್ರಾಮವನ್ನು ಪ್ರತ್ಯೇಕ ಗ್ರಾಮ ಪಂಚಾಯತಿಯನ್ನಾಗಿ ಘೋಷಿಸಬೇಕು ಎಂಬ ಗ್ರಾಮಸ್ಥರ ಬೇಡಿಕೆ ಇನ್ನೊಮ್ಮೆ ಮುನ್ನೆಲೆಗೆ ಬಂದಿದೆ.
ನಾಡ ಗ್ರಾಮದಿಂದ ಬೇರ್ಪಟ್ಟ ಸಂದರ್ಭದಲ್ಲಿಯೇ ಸೇನಾಪುರವನ್ನು ಪ್ರತ್ಯೇಕ ಗ್ರಾಮ ಪಂಚಾಯತಿಯನ್ನಾಗಿ ಮಾಡಬೇಕು ಎಂಬ ಗ್ರಾಮಸ್ಥರ ಬೇಡಿಕೆಗೆ ಆರಂಭದಲ್ಲಿ ಸ್ಪಂದನೆ ದೊರೆಯಿತಾದರೂ ಹಣಕಾಸು ಸಚಿವಾಲಯದ ಮಂಜೂರಾತಿ ದೊರೆಯತ ಕಾರಣ ಸೇನಾಪುರ ಗ್ರಾಮವನ್ನು ಹೊಸಾಡು ಗ್ರಾಮ ಪಂಚಾಯತಿಗೆ ಸೇರಿಸಿ ಸರಕಾರ ಆದೇಶಿಸಿತ್ತು.
ಇದೀಗ ಆಕ್ಷೇಪಣೆಗೆ ಅವಕಾಶ ನೀಡಿರುವುದರಿಂದ ಬೆಳ್ಳಾಡಿ ಶಂಕರ ಶೆಟ್ಟಿ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಒಟ್ಟಾಗಿ ಆಪ್ಷೇಪಣೆ ಸಲ್ಲಿಸಿದ್ದಾರೆ. ಪ್ರತ್ಯೇಕ ಗ್ರಾಮಕ್ಕಾಗಿ ಶಾಸಕರು, ಸಚಿವರುಗಳಿಗೂ ಮನವಿ ಸಲ್ಲಿಸಿದ್ದು ಸರಕಾರದಿಂದ ಉತ್ತಮ ಸ್ಪಂದನೆ ದೊರೆಯುವ ನಿರೀಕ್ಷೆಯಲ್ಲಿದ್ದಾರೆ.
ಸೇನಾಪುರ ಪ್ರತ್ಯೇಕ ಗ್ರಾಮದ ಬೇಡಿಕೆ ಏಕೆ?
ಸುಮಾರು 4,000ಕ್ಕೂ ಮಿಕ್ಕಿ ಜನಸಂಖ್ಯೆಯಿರುವ ಸೇನಾಪುರಕ್ಕೆ, ಪ್ರತ್ಯೇಕ ಪಂಚಾಯತಿಯಾಗುವ ಎಲ್ಲ ಅರ್ಹತೆ ಇದೆ ಎಂಬುದು ಸ್ಥಳೀಯರ ವಾದ. ಪಂಚಾಯತ್ ಕಟ್ಟಡಕ್ಕೆ ಬೇಕಾದ ಜಾಗ ಹಾಗೂ ಸಂಪನ್ಮೂಲ ಕ್ರೋಢೀಕರಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳೂ ಗ್ರಾಮದಲ್ಲಿದೆ. ಈ ಬಗ್ಗೆ ಉಡುಪಿ
ಜಿಲ್ಲಾಧಿಕಾರಿಗಳು ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ವರದಿ ನೀಡಿದ್ದಾರೆ. ಹೊಸಾಡು ಪಂಚಾಯತಿಗೆ ಸೇರ್ಪಡೆಯಿಂದ ಗ್ರಾಮಸ್ಥರು ಗ್ರಾಮ ಪಂಚಾಯತಿಗೆ ತೆರಳಲು 12 ಕಿಲೋಮೀಟರ್ ಸಂಚಾರ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಸುಮಾರು 1651.44 ಎಕರೆ ವಿಸ್ತಿರ್ಣವಿರುವ ಗ್ರಾಮದಲ್ಲಿ ಪ್ರಸಿದ್ಧ ದೇವಾಲಯ, ರೈಲ್ವೆ ನಿಲ್ದಾಣ ಸೇರಿದಂತೆ ಮೂಲಭೂತ ಸೌಕರ್ಯಗಳಿವೆ. 2011 ಜನಗಣತಿ ಪ್ರಕಾರ 2572 ಮತದಾರಿದ್ದು, 7 ಮಂದಿ ಗ್ರಾಮ ಪಂಚಾಯತ್ ಸದಸ್ಯ ಬಲ ಹೊಂದಿದೆ. ಸೇನಾಪುರವನ್ನು ಸ್ವತಂತ್ರ ಗ್ರಾಮವನ್ನಾಗಿಸುವುದ ಸೂಕ್ತವಾಗಿದ್ದು ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸರಕಾರ ಸ್ಪಂದಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.