ಹತ್ತು ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ

Call us

Call us

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ನಡೆಸಿಕೊಂಡು ಬರುತ್ತಿರುವ ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ನವಂಬರ್ ತಿಂಗಳ 26, 27, 28 ಮತ್ತು 29 ರಂದು ಮೂಡುಬಿದಿರೆಯ ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಕನ್ನಡ ನಾಡು ನುಡಿ ಸಂಸ್ಕೃತಿಗಾಗಿ ಸೇವೆ ಸಲ್ಲಿಸಿದ, ವಿಶೇಷ ಸಾಧನೆ ಮಾಡಿದ ಗಣ್ಯರನ್ನು ಆಳ್ವಾಸ್ ನುಡಿಸಿರಿ ಪ್ರಶಸ್ತಿ ನೀಡಿ ಈ ಸಂದರ್ಭದಲ್ಲಿ ಗೌರವಿಸಲಾಗುತ್ತದೆ. ಈ ವರ್ಷವೂ ಕನ್ನಡ ನಾಡು ನುಡಿ ಸಂಸ್ಕೃತಿಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ, ವಿಶೇಷ ಸಾಧನೆಗಳನ್ನು ಮಾಡಿದ ಹತ್ತು ಮಂದಿ ಗಣ್ಯರನ್ನು ಆಳ್ವಾಸ್ ನುಡಿಸಿರಿ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.

Call us

Call us

ಪದ್ಮಶ್ರೀ ಡಾ. ಬನ್ನಂಜೆ ಗೋವಿಂದಾಚಾರ್ಯ
ವೇದ ಸಾಹಿತ್ಯ, ಉಪನಿಷತ್ತು, ಮಹಾಭಾರತ, ಪುರಾಣ, ಭಾರತೀಯ ತತ್ತ್ವ ಶಾಸ್ತ್ರಗಳಲ್ಲಿ ಅಗಾಧ ಪಾಂಡಿತ್ಯವನ್ನು ಹೊಂದಿದ್ದು, ತಾರ್ಕಿಕವಾಗಿ ಹಾಗೂ ಜನಸಾಮಾನ್ಯರು ಸುಲಭವಾಗಿ ಅರ್ಥೈಸುವಂತೆ ತಿಳಿಯ ಹೇಳುವ ಪ್ರವಚನಕಾರರಿವರು. ಸ್ವತ: ಸಾಹಿತಿಯಾಗಿ ಅನೇಕ ಕೃತಿಗಳನ್ನು ರಚಿಸಿ, ಸಂಸ್ಕೃತದ ಪ್ರಮುಖ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ ಮೇರು ಸಾಹಿತಿ ಇವರು.

ಡಾ. ಸುಮತೀಂದ್ರ ನಾಡಿಗ
ಖ್ಯಾತ ಕವಿ, ಕಥೆಗಾರ, ವಿಮರ್ಶಕ, ಮಕ್ಕಳ ಸಾಹಿತಿ, ಅನುವಾದಕ – ಹೀಗೆ ಕನ್ನಡ ಸಾಹಿತ್ಯದ ಅಗ್ರ ಪಂಕ್ತಿಯ ಸಾಹಿತಿ ಇವರು. ಕವಿ ಗೋಪಾಲಕೃಷ್ಣ ಅಡಿಗರ ನಿಕಟವರ್ತಿಯಾಗಿದ್ದು, ಕನ್ನಡ ನವ್ಯ ಸಾಹಿತ್ಯ ಚಳುವಳಿಯ ಮುಂಚೂಣಿಯಲ್ಲಿದ್ದವರು. ಇವರ ’ಪಂಚಭೂತ’ ಕವನ ಸಂಕಲನವು ಆಧುನಿಕ ಕನ್ನಡ ಸಾಹಿತ್ಯಕ್ಕೆ ಪ್ರಮುಖ ಮತ್ತು ನಿಜವಾದ ಕೊಡುಗೆಯೆಂದು ಪರಿಗಣಿತವಾಗಿದೆ. ’ದಾಂಪತ್ಯಗೀತೆಗಳು’ ಎನ್ನುವ ಇವರ ಕವನ ಸಂಕಲನವು ಅತೀ ಹೆಚ್ಚು ದೇಶೀಯ ಮತ್ತು ವಿದೇಶೀಯ ಭಾಷೆಗಳಿಗೆ ಅನುವಾದಗೊಂಡು ಹೆಸರುವಾಸಿಯಾದ ಕೃತಿಯಾಗಿದೆ.

ಶ್ರೀ ಎಸ್.ವಿ.ರಾಜೇಂದ್ರ ಸಿಂಗ್ ಬಾಬು
ಬಾಲಪ್ರತಿಭೆಯಾಗಿ ಕನ್ನಡ ಚಲನಚಿತ್ರ ಲೋಕದಲ್ಲಿ ಕಾಣಿಸಿಕೊಂಡ ಇವರು ಚಲನಚಿತ್ರ ನಿರ್ದೇಶಕರಾಗಿ ಖ್ಯಾತರು. ಇವರ ನಿರ್ದೇಶನದ ನಾಗರ ಹೊಳೆ, ಬಂಧನ, ಸಿಂಹದಮರಿಸೈನ್ಯ, ಮುತ್ತಿನಹಾರ ಮೊದಲಾದ ಸಿನಿಮಾಗಳು ಕನ್ನಡ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಪ್ರಸ್ತುತ ಇವರು ಕನ್ನಡ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿರುತ್ತಾರೆ.

Click here

Click Here

Call us

Call us

Visit Now

ವಿದ್ವಾನ್ ಶ್ರೀ ಆರ್.ಕೆ.ಪದ್ಮನಾಭ
ರುದ್ರಪಟ್ಟಣ ಕೃಷ್ಣ ದೀಕ್ಷಿತ ಪದ್ಮನಾಭರು ವಿದ್ವಾನ್ ಆರ್.ಕೆ.ಪದ್ಮನಾಭರೆಂದೇ ಪ್ರಸಿದ್ದರು. ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಅಗ್ರಮಾನ್ಯ ಸಂಗೀತಕಾರರಲ್ಲಿ ಇವರೂ ಒಬ್ಬರು. ಪ್ರಬುದ್ಧ ಗಾಯಕ, ನಾಯಕ, ಸಂಘಟಕ, ಪ್ರಕಾಶಕ, ಚಿಂತಕ, ಸಮಾಜ ಸುಧಾರಕರಾಗಿಯೂ ಇವರು ಪ್ರಸಿದ್ಧರು.

Call us

ಡಾ. ಬಿ.ಎನ್.ಸುಮಿತ್ರಾ ಬಾಯಿ
ಮಹಿಳಾ ಅಧ್ಯಯನ ಮತ್ತು ಸ್ತ್ರೀವಾದಿ ಸಾಹಿತ್ಯ ವಿಮರ್ಶೆಯ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಚಿರಪರಿಚಿತರಾದವರು ಇವರು. ಶಾಸ್ತ್ರಾಧ್ಯಯನ ಮತ್ತು ಸಂಶೋಧನೆಯು ಇವರ ಇತರ ಆಸಕ್ತಿಯ ಕ್ಷೇತ್ರಗಳು. ಈ ವಿಚಾರಗಳಿಗೆ ಸಂಬಂಧಿಸಿದಂತೆ ೧೯ ಕೃತಿಗಳನ್ನು ಇವರು ಪ್ರಕಟಿಸಿದ್ದಾರೆ. ಸಂಸ್ಕೃತ ಪ್ರಾಧ್ಯಾಪಕರಾಗಿ ನಿವೃತ್ತರಾದ ಇವರು ಪ್ರಸ್ತುತ ಕನ್ನಡ ಸಾಹಿತ್ಯ ಸೇವೆಯಲ್ಲಿ ನಿರತರಾಗಿದ್ದಾರೆ.

ಶ್ರೀ ಈಶ್ವರ ದೈತೋಟ
ಮುದ್ರಣ ಮಾಧ್ಯಮ, ರೇಡಿಯೋ, ಟೆಲಿವಿಜನ್‌ಗಳಲ್ಲಿ ನಾಲ್ಕು ದಶಕಗಳ ಅನುಭವ ಹೊಂದಿ ಮತ್ತು ಪತ್ರಿಕೋದ್ಯಮ ಶಿಕ್ಷಣ, ಅಭ್ಯುದಯ ಪ್ರತಿಕೋಧ್ಯಮ ಹಾಗೂ ಮೀಡಿಯ ಮ್ಯಾನೇಜ್‌ಮೆಂಟ್‌ಗಳಲ್ಲಿ ಅಪಾರ ಸಾಧನೆಗಳನ್ನು ದಾಖಲಿಸಿರುವ ಪತ್ರಕರ್ತರು ಇವರು. ಕರ್ನಾಟಕದ ಅತೀ ಹೆಚ್ಚು ಪ್ರಮುಖ ದಿನಪತ್ರಿಕೆಗಳನ್ನು ಮುನ್ನಡೆಸಿದ ಹಿರಿಮೆ ಇವರದು.

ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ
ಹೆಣ್ಣು ಮಕ್ಕಳಿಗೆ ಯಕ್ಷಗಾನ ನೋಡುವುದಕ್ಕೂ ಅವಕಾಶವಿಲ್ಲದ ಕಾಲದಲ್ಲಿ ಯಕ್ಷಗಾನ ಭಾಗವತಿಕೆ ಕಲಿತು, ಏಕೈಕ ವೃತ್ತಿಪರ ಮಹಿಳಾ ಬಾಗವತರು ಎಂಬ ಗೌರವಕ್ಕೆ ಪಾತ್ರರಾದವರು ಇವರು. ನಾಲ್ಕು ದಶಕಗಳ ಕಾಲ ತಮ್ಮ ಕಂಠಸಿರಿಯಿಂದ ಯಕ್ಷಗಾನಾಸಕ್ತರ ಮನೆ-ಮನಗಳಲ್ಲಿ ನೆಲಸಿದ, ಯಕ್ಷಗಾನ ಕಲೆಯತ್ತ ಮಹಿಳೆಯರನ್ನು ಆಕರ್ಷಿಸುವಂತೆ ಮೇಲ್ಪಂಕ್ತಿ ಹಾಕಿಕೊಟ್ಟವರು ಇವರು.

ಶ್ರೀ ವರ್ತೂರು ನಾರಾಯಣ ರೆಡ್ಡಿ
ಸಾವಯವ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಕನ್ನಡ ನಾಡಿನ ಅಗ್ರಮಾನ್ಯ ಸಾವಯವ ಕೃಷಿಕರಲ್ಲಿ ಒಬ್ಬರೆನಿಸಿದವರು ಇವರು. ತನ್ನ ಮೂವರು ಮಕ್ಕಳು ಸೇರಿದಂತೆ ಕುಟುಂಬದ ಹದಿನಾರು ಜನರನ್ನು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಈ ಮಣ್ಣನ್ನು, ಹಚ್ಚ ಹಸುರಿನ ವ್ಯವಸಾಯವನ್ನು ಇನ್ನಿಲ್ಲದಂತೆ ಪ್ರೀತಿಸಿದವರು. ಸುಮಾರು ಮೂವತ್ತು ವರ್ಷಗಳಿಂದ ಸಾವಯವ ಕೃಷಿ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಯಾಗಿ ದೇಶ-ವಿದೇಶಗಳಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡವರು.

ಶ್ರೀ ಶಿಲ್ಪಿ ಹೊನ್ನಪ್ಪಚಾರ್
ಐವತ್ನಾಲ್ಕು ವರ್ಷಗಳ ಕಾಲ ಲೋಹ ಶಿಲ್ಪಿಯಾಗಿ ಸಾಂಸ್ಕೃತಿಕ ಲೋಕಕ್ಕೆ ಶಿಲ್ಪಕಲಾ ಕೊಡುಗೆಯನ್ನು ನೀಡುವುದರ ಜೊತೆಗೆ ಕರ್ನಾಟಕದಲ್ಲಿ ಸುದೀರ್ಘ ಕಾಲ ಗುರುಕುಲ ಮಾದರಿಯ ಶಿಲ್ಪಕಲಾ ತರಬೇತಿ ಶಾಲೆಯನ್ನು ತೆರೆದವರು ಇವರು. ಗ್ರಾಮಾಂತರ ಪ್ರದೇಶದ ಶಿಲ್ಪಕಲೆ ಕಲಿಯುವ ಆಸಕ್ತಿ ಹೊಂದಿರುವ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಉಚಿತ ಊಟ, ವಸತಿ ಮತ್ತು ವಸ್ತ್ರ ವ್ಯವಸ್ಥೆ ಮಾಡಿ, ಉಚಿತ ಟೂಲ್ಸ್‌ಕಿಟ್ ನೀಡಿ ಲೋಹ ಶಿಲ್ಪಿಗಳನ್ನಾಗಿ ಇವರು ರೂಪಿಸಿದ್ದಾರೆ. ಕನ್ನಡನಾಡಿನ ಖ್ಯಾತ ಲೋಹಶಿಲ್ಪಿಗಳಲ್ಲಿ ಒಬ್ಬರಾಗಿರುವ ಇವರ ಅನೇಕ ಲೋಹಶಿಲ್ಪಗಳು ನಾಡಿನ ಆರಾಧನಾಲಯಗಳಿಗೆ ಮೆರುಗು ತಂದಿದೆ.

ಶ್ರೀ ಸೈಯದ್ ಸಲ್ಲಾವುದ್ದೀನ್ ಪಾಷ
ಬಾಲ್ಯದಿಂದ ಕನ್ನಡ, ಸಂಸ್ಕೃತ, ವೇದ, ಉಪನಿಷತ್ತು, ರಾಮಾಯಣ, ಮಹಾಭಾರತ, ಯೋಗಶಾಸ್ತ್ರಗಳ ಅಧ್ಯಯನದೊಂದಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಕಥಕ್ ನೃತ್ಯ ಹಾಗೂ ನೃತ್ಯ ಸಂಯೋಜನೆ ಪದವಿಗಳನ್ನು ಪಡೆದುಕೊಂಡವರು. ತಮ್ಮ ವಿಶಿಷ್ಟ ನೃತ್ಯ ಪ್ರತಿಭೆ ಹಾಗೂ ನೃತ್ಯ ಸಂಯೋಜನೆಗಳ ಮೂಲಕ ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದವರು ಇವರು. ವಿಕಲಚೇತನರಿಗಾಗಿ ಗಾಲಿ ಕುರ್ಚಿಯ ಮೇಲೆ ಆವಿಷ್ಕಾರ ಮಾಡಿ ಸಂಯೋಜಿಸಿರುವ ರಾಮಾಯಣ ಆನ್ ವೀಲ್ಸ್, ಭಗವದ್ಗೀತಾ ಆನ್ ವೀಲ್ಸ್, ಯೋಗಾ ಆನ್ ವೀಲ್ಸ್, ಭರತನಾಟ್ಯ ಆನ್ ವೀಲ್ಸ್, ಸೂಫಿ ಆನ್ ವೀಲ್ಸ್, ಫ್ರೀಡಂ ಆನ್ ವೀಲ್ಸ್, ಮಿರಾಕಲ್ ಆನ್ ವೀಲ್ಸ್ – ಹೀಗೆ ನೂರಕ್ಕೂ ಹೆಚ್ಚು ನೃತ್ಯ ರೂಪಕಗಳು, ಹತ್ತು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ದೇಶದಾದ್ಯಂತ ನೀಡಿ ಲಿಮ್ಕಾ ಬುಕ್ ಆಫ್ ರೆಕಾಡ್ಸ್ ಮತ್ತು ಗಿನ್ನಿಸ್ ವರ್ಲ್ಡ್‌ನಲ್ಲಿ ವಿಶ್ವ ದಾಖಲೆ ಮಾಡಿದವರು.

ನವೆಂಬರ್ 29 ಮಧ್ಯಾಹ್ನ ನಡೆಯುವ ಆಳ್ವಾಸ್ ನುಡಿಸಿರಿ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ’ಆಳ್ವಾಸ್ ನುಡಿಸಿರಿ ಪ್ರಶಸ್ತಿ’ ಹಾಗೂ 25.೦೦೦/- ರೂ. ನಗದಿನೊಂದಿಗೆ ಗೌರವಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

twenty − nine =