ಹರಿದ ಟಾರ್ಪಲಿನ ಮುರಿದ ಹಟ್ಟಿಯಲ್ಲಿ ದಯಾನೀಯ ಬದುಕು

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ.
ಅದು ಮನೆಯನ್ನು ಹೋಲುವ ಗೂಡು. ಬಿಸಿಲು ಮಳೆಯ ರಕ್ಷಣೆಗೆ ಹರಿದ ಪ್ಲಾಸ್ಟಿಕ್ ಟಾರ್ಪಲ್ಲಿನ ಆಸರೆ. ಬಡತನದ ದಾರಿದ್ರ್ಯಕ್ಕೆ ಬೇಸತ್ತು ಅದರಲ್ಲಿಯೇ ನಾಲ್ಕು ಜೀವಗಳು ಬದುಕುತ್ತಿವೆ. ಇದು ಕೋವಿನಗುಡ್ಡೆ ಎಂಬಲ್ಲಿ ಬದುಕುತ್ತಿರುವ ಸಾಂತುಬಾಯಿ ಎಂಬ ವೃದ್ಧೆಯ ಕುಟುಂಬದ ದಯಾನೀಯ ಸ್ಥಿತಿ.

ಶಂಕರನಾರಾಯಣದ ಕುಳ್ಳುಂಜೆ ಗ್ರಾಮದ ಕೋವಿನಗುಡ್ಡೆ ಎಂಬಲ್ಲಿ ವಾಸವಾಗಿರುವ ಕುಡುಬಿ ಸಮುದಾಯಕ್ಕೆ ಸೇರಿದ ಸಾಂತುಬಾಯಿ ಹಲವು ವರ್ಷಗಳಿಂದ ತಮ್ಮ ಇಬ್ಬರು ಮಕ್ಕಳು ಹಾಗೂ ಓರ್ವ ಮೊಮ್ಮೊಗಳೊಂದಿಗೆ ವಾಸವಾಗಿದ್ದಾರೆ. ವಿದ್ಯುತ್ ನೋಡಿರದ ಕುಟುಂಬ ಸಂಜೆಯಾಗುತ್ತಲೇ ಅನಿವಾರ್ಯವಾಗಿ ಮಲಗಿಬಿಡುತ್ತಾರೆ. ಮುರುಕಲು ಗುಡಿಸಲಿಗೆ ಅದೇ ಗುಡಿಸಲಿನಲ್ಲಿ ಅವರ ಪ್ರೀತಿಯ ದನಕರುಗಳನ್ನು ಸಾಕಿಕೊಂಡಿದ್ದಾರೆ. ಮಳೆಗಾಲದಲ್ಲಿ ಅವರ ಸ್ಥಿತಿ ದೇವರಿಗೆ ಪ್ರೀತಿ.

2015-16 ರಲ್ಲಿ ಸಾಂತುಬಾಯಿಗೆ ಅಂಬೇಡ್ಕರ್ ವಸತಿ ಯೋಜನೆಯಡಿ ಒಂದುವರೆ ಲಕ್ಷ ರೂಪಾಯಿ ಹಣ ಮನೆ ಕಟ್ಟಲು ಮಂಜೂರಾತಿ ಆಗಿತ್ತು. ಆದರೆ ದಿನದ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಕುಟುಂಬಕ್ಕೆ ಅದಕ್ಕೆ ಸರಿಯಾದ ದಾಖಲಾತಿ ಒದಗಿಸುವುದು ಸಾಧ್ಯವಾಗದೇ ಮನೆ ಕಟ್ಟುವ ಕನಸೂ ಅಲ್ಲಿಗೇ ನಿಂತುಹೋಗಿತ್ತು. ಮಗಳು ಸೀತುಬಾಯಿ ಅವರಿಂದಾಗಿ ಒಪ್ಪತ್ತಿನ ಊಟ ಮಾಡುತ್ತಿದ್ದಾರೆ. ಬಡತನದ ಬೇಗುದಿಯಲ್ಲಿಯೂ ಉತ್ತಮ ಬದುಕು ಕಟ್ಟಿಕೊಳ್ಳಬೇಕೆಂಬ ಅವರ ಆಸೆ ಮಾತ್ರ ಮುಂದುವರಿದಿದೆ.

ಸ್ಪಂದಿಸಿದ ತಾ.ಪಂ ಸದಸ್ಯ ಉಮೇಶ್ ಶೆಟ್ಟಿ
ಸಾಂತುಬಾಯಿ ಕುಟುಂಬದ ದಯಾನೀಯ ಸ್ಥಿತಿ ಅರಿವಿಗೆ ಬರುತ್ತಿದ್ದಂತೆ ಸ್ಥಳಕ್ಕೆ ತೆರಳಿ ಮಾಹಿತಿ ಪಡೆದುಕೊಂಡ ತಾಲೂಕು ಪಂಚಾಯತ್ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ ಅವರು ಆ ಕುಟುಂಬ ಪರಿಸ್ಥಿತಿಯನ್ನು ಅವಲೋಕಿಸಿ ಗ್ರಾಮ ಪಂಚಾಯತ್ ಹಾಗೂ ಶಾಸಕರ ಗಮನಕ್ಕೆ ತಂದಿದ್ದಾರೆ. ಮನೆ ಕಟ್ಟಲು ಇರುವ ತೊಡಕನ್ನು ನೀವಾರಿಸುವಂತೆ ಬೈಂದೂರು ಶಾಸಕರಿಗೂ ಮನವಿ ಮಾಡಿದ್ದಾರೆ. ಎಲ್ಲರೂ ಸಕಾರಾತ್ಮವಾಗಿ ಸ್ಪಂದಿಸಿದ್ದಾರೆನ್ನಲಾಗಿದೆ.

ಈ ನಡುವೆ ಕುಟುಂಬಕ್ಕ ನೆರವು ನೀಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಉಮೇಶ್ ಶೆಟ್ಟಿ ಅವರು ಪ್ರಸ್ತಾಪಿಸಿದ್ದಾರೆ. ನಿಧಾನವಾಗಿ ಆರ್ಥಿಕ ನೆರವು ಬರುತ್ತಿದೆ. ಜಿಲ್ಲಾ ಪಂಚಾಯತ್ ಸದಸ್ಯ ರೋಹಿತ್ ಶೆಟ್ಟಿ ಹಾಗೂ ಇತರೇ ಜನಪ್ರತಿನಿಧಿಗಳು ಭೇಟಿ ನೀಡಿ ತಮ್ಮಿಂದಾದ ನೆರವು ನೀಡುವ ಭರವಸೆ ನೀಡಿದ್ದಾರೆ. ಅನಿವಾಸಿ ಭಾರತೀಯ ಕುಂದಾಪುರದ ವಿವೇಕ್ ಶೆಟ್ಟಿ ಅವರೂ ಸ್ನೇಹಿತರ ಮೂಲಕ ನೆರವಾಗುವ ಭರವಸೆ ನೀಡಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.

ನೀವು ನೆರವಾಗಬಹುದು:
Syndicate bank, shankaranarayana branch
A/c No: 01322250002969
IFSC: SYNB0000132
Phone number: ಸೀತಾಬಾಯಿ – 9901401224

 

 

Leave a Reply

Your email address will not be published. Required fields are marked *

17 + eleven =