ಕುಂದಾಪ್ರ ಡಾಟ್ ಕಾಂ’ ಸುದ್ದಿ
ಬೈಂದೂರು: ರೈತರು ಬೆಳೆದ ಬೆಳೆಗೆ ಹಾಪ್‌ಕಾಮ್ಸ್ ಮಾರಾಟ ಮಳಿಗೆಯಲ್ಲಿ ಲಾಭದಾಯಕ ಧಾರಣೆ ದೊರೆಯಬೇಕು. ಜಿಲ್ಲೆಯ ಹೊರಗಿನ ಉತ್ಪನ್ನ ಮತ್ತು ಇಲ್ಲಿನ ಬೆಳೆಗಳ ದರಗಳಲ್ಲಿ ವ್ಯತಾಸವಿದ್ದು, ಸ್ಥಳೀಯ ರೈತರಿಗೆ ಯಾವುದೇ ಕಾರಣಕ್ಕೆ ನಷ್ಟವಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು.
ಮಂಗಳೂರಿನ ಜಿಲ್ಲಾ ಹಾಪ್‌ಕಾಮ್ಸ್ ಮಾರುಕಟ್ಟೆ, ರಾಜ್ಯ ತೋಟಗಾರಿಕಾ ಮಾರಾಟ ಮಹಾಮಂಡಲ ವತಿಯಿಂದ 2014–15ನೇ ಸಾಲಿನ ರಾಜ್ಯವಲಯ ಯೋಜನೆಯಡಿ ಉಳಿಕೆಯಾಗಿರುವ ಅನುದಾನದಿಂದ ಉಪ್ಪುಂದ ಪೇಟೆಯಲ್ಲಿ ನಿರ್ಮಿಸಿರುವ ನೂತನ ಹಾಪ್‌ಕಾಮ್ಸ್ ಮಾರಾಟ ಮಳಿಗೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಇಂದು ಸಾವಯವ ಮತ್ತು ರಸಗೊಬ್ಬರ ನಡುವೆ ಸಮತೋಲನ ಕಾಪಾಡುವ ಅಗತ್ಯವಿದೆ. ಸಾಧ್ಯವಾದಷ್ಟೂ ಸಾವಯವ ಕೃಷಿಗೆ ಮರಳುವುದು ಅನಿವಾರ್ಯವೆನಿಸಿದೆ. ರೈತರಿಗೆ ತರಬೇತಿ ನೀಡಬೇಕು. ಕೃಷಿಯೊಂದಿಗೆ ತೋಟಗಾರಿಕೆ, ಹೈನುಗಾರಿಕೆ, ಕೋಳಿಸಾಕಣೆ ನಡೆಸುವುದಲ್ಲದೇ, ಕಡಿಮೆ ವೆಚ್ಚದಲ್ಲಿ ಆರೋಗ್ಯ ನೀಡುವ ಪಪ್ಪಾಯಿ, ನುಗ್ಗೆ, ಬಸಳೆ, ತೊಂಡೆ, ಸೌತೆ, ಬಾಳೆ ಬೆಳೆಸಿ ಮನೆಯ ಖರ್ಚಿಗೆ ಬಳಸಿಕೊಂಡು ಸ್ವಾವಲಂಬನೆ ಸಾಧಿಸಬೇಕು’ ಎಂದರು.
ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪ, ಮಳಿಗೆಯ ಕಾರ್ಯನಿಧಾನವನ್ನು ವಿವರಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಶ ಬಟವಾಡಿ, ಉಡುಪಿ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ಹಾಪ್‌ಕಾಮ್ಸ್ ಉಪಾಧ್ಯಕ್ಷ ಹರೀಶ, ಸದಸ್ಯರಾದ ಅಮರನಾಥ ಛಾತ್ರ, ಸೀತಾರಾಮ ಗಾಣಿಗ ಹಾಲಾಡಿ, ಜಯಕುಮಾರ್ ಪರ್ಕಳ, ವೆಂಕಟೇಶ ರಾವ್ ಹೊಸ್ಕೋಟೆ ಇದ್ದರು. ರವಿಚಂದ್ರ ಶೆಟ್ಟಿ ಪ್ರಾರ್ಥಿಸಿದರು. ಸೀತಾರಾಮ ಗಾಣಿಗ ವಂದಿಸಿದರು. ಈ ಸಂದರ್ಭ ಉಪ್ಪುಂದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದುರ್ಗಮ್ಮ ಖಾರ್ವಿ ಅವರನ್ನು ಸನ್ಮಾನಿಸಲಾಯಿತು.