ಕುಂದಾಪ್ರ ಡಾಟ್ ಕಾಂ ಸುದ್ದಿ.
ಕಾಸರಗೋಡು: ಪತ್ರಕರ್ತರ ವೇದಿಕೆ ರಿ. ಬೆಂಗಳೂರು, ಉಡುಪಿ-ದ.ಕ ಜಿಲ್ಲಾ ಘಟಕ ಕಳೆದ 8 ವರ್ಷಗಳಿಂದ ಪತ್ರಿಕಾ ದಿನದ ಅಂಗವಾಗಿ ಯಾಶಸ್ವಿಯಾಗಿ ಆಯೋಜಿಸುತ್ತಿರುವ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಈ ವರ್ಷ ಡೆಕ್ಕನ್ ಹೆರಾಲ್ಡ್, ನವಭಾರತ ಪತ್ರಿಕೆಗಳಲ್ಲಿ ಸುದೀರ್ಘ ಕಾಲ ಅಪೂರ್ವ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಅವರಿಗೆ ಪತ್ರಿಕಾ ದಿನದ ಗೌರವ ಸಲ್ಲಿಸಲಾಯಿತು.
ಕಾಸರಗೋಡು ಶಿರಿಯಾದ ಮಲಾರ್ ಜಯರಾಮ ರೈಗಳ ನಿವಾಸದಲ್ಲಿ ನಡೆದ ವಿನೂತನ ಕಾರ್ಯಕ್ರಮದಲ್ಲಿ ಸಂಘಟಕ, ಕಸಪಾ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಟ ಪುನರೂರು ಅವರು ರೈಗಳಿಗೆ ಲೇಖನ ಪರಿಕರಗಳು ಹಾಗೂ ಪ್ರಶಸ್ತಿ ಫಲಕವನ್ನಿತ್ತು ಗೌರವಿಸಿದರು.
ಬಳಿಕ ಹರಿಕೃಷ್ಟ ಪುನರೂರು ಮಾತನಾಡಿ, ಮಲಾರು ಜಯರಾಮ ರೈ ಅವರಂತಹ ಹಿರಿಯ ಹಾಗೂ ಕರ್ತವ್ಯ ನಿಷ್ಠ ಪತ್ರಕರ್ತರನ್ನು ಗುರುತಿಸಿ ಗೌರವಿಸಿತ್ತಿರುವುದು ಶ್ಲಾಘನಾರ್ಹ. ಶೇಖರ ಅಜೆಕಾರು ಅವರು ಪತ್ರಕರ್ತರ ವೇದಿಕೆ ಮೂಲಕ ಹಲವಾರು ಹಿರಿಯ ಪತ್ರಕರ್ತರು ಹಾಗೂ ವೃತ್ತಿನಿರತ ಪತ್ರಕರ್ತರ ಮುಖಮುಖಿಯಾಗಿಸುವ ಕಾರ್ಯ ಮಾಡಿ ಕಾರ್ಯಕ್ರಮಕ್ಕೊಂದು ಮೆರಗು ನೀಡಿರುವುದಲ್ಲದೇ ಕಿರಿಯ ಪತ್ರಕರ್ತರಿಗೆ ಒಂದು ಸದಾವಕಾಶ ಒದಗಿಸಿಕೊಟ್ಟಿದ್ದಾರೆ ಎಂದರು.
ಗೌರವ ಸ್ವೀಕರಿಸಿದ ಮಲಾರ್ ಜಯರಾಂ ರೈ ಮಾತನಾಡಿ ನಮ್ಮ ಕಾಲದಲ್ಲಿ ಪತ್ರಿಕೋದ್ಯಮ ಒಂದು ವೃತ್ತಿಯಾಗಿರಲಿಲ್ಲ. ಅದೊಂದು ಸೇವೆ ಎಂದೇ ಭಾವಿಸಿದ್ದೇವು. ಕಡಿಮೆ ಸಂಬಳದಲ್ಲಿ ಕೆಲಸ ಮಾಡುತ್ತಿದ್ದರೂ ಆತ್ಮತೃಪ್ತಿಯ ಬದುಕು ನಮ್ಮದಾಗಿತ್ತು. ಎಂದು ಅಂದಿನ ದಿನಗಳನ್ನು ಮೆಲಕು ಹಾಕಿದರು.
ಆಕಾಶವಾಣಿ ನಿರ್ದೇಶಕ ಡಾ. ವಸಂತ ಕುಮಾರ್ ಪೆರ್ಲ ಮಾತನಾಡಿ ಪತ್ರಿಕೋದ್ಯಮ ಇಂದು ಹೊಸ ಹೊಸ ಆಯಾಮಗಳೊಂದು ಜನರನ್ನು ಎದಿರುಗೊಳ್ಳುತ್ತಿದೆ. ಮುದ್ರಣ ಮಾಧ್ಯಮದಿಂದ ಆರಂಭಗೊಂಡು ಶ್ರಾವ್ಯ, ದೃಶ್ಯ ಮಾಧ್ಯಳ ನಂತರ ವೆಬ್ ಮಾಧ್ಯಮಗಳು ನಮ್ಮ ಮುಂದೆ ಬಂದಿವೆ. ಆಧುನಿಕತೆಯ ನಡುವೆಯೂ ಪತ್ರಿಕೆ ಓದುವವರ ಸಂಖ್ಯೆ ವೃದ್ಧಿಯಾಗುತ್ತಲೇ ಇದೆ. ಜೊತೆಗೆ ಎಲ್ಲಾ ಬಗೆಯ ಮಾಧ್ಯಮಗಳೂ ತನ್ನ ಸ್ಥಾನವನ್ನು ಗಟ್ಟಿಗೊಳಿಸುತ್ತಲೇ ಬಂದಿವೆ. ಪತ್ರಿಕೋದ್ಯಮದಲ್ಲಿ ಸಾಧಿಸುವವರಿಗೆ ವಿಪುಲ ಅವಕಾಶಗಳಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳುವ ಜಾಣ್ಮೆ ನಮ್ಮದಾಗಬೇಕಿದೆ ಎಂದರು.
ಸಂಘಟಕ ಡಾ. ರಾಜೇಶ್ ಆಳ್ವ, ಹಿರಿಯ ಪತ್ರಕರ್ತರಾದ ರಾಧಾಕೃಷ್ಣ ಉಳಿಯತಡ್ಕ, ಎಸ್. ಜಯರಾಂ, ಗಂಗಾಧರ ಪಿಲಿಯೂರು ಕಾಸರಗೋಡಿನ ಶಿರಿಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದರು. ಬೆಂಗಳೂರು ಪತ್ರಕರ್ತರ ವೇದಿಕೆಯ ಉಡುಪಿ-ದ.ಕ ಘಟಕದ ಅಧ್ಯಕ್ಷ ಶೇಖರ ಅಜೆಕಾರು ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಹಾಗೂ ಕಾಸರಗೋಡಿಯ ಹಿರಿ ಕಿರಿಯ ಪತ್ರಕರ್ತ ಮಿತ್ರರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಕುಂದಾಪ್ರ ಡಾಟ್ ಕಾಂ ಸಂಪಾದಕ ಸುನಿಲ್ ಹೆಚ್. ಜಿ. ಬೈಂದೂರು ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲೆ ಚಂದ್ರಪ್ರಭಾ ಹೆಗ್ಡೆ ಧನ್ಯವಾದಗೈದರು. ಶಿಕ್ಷಕಿ ಸಾಯಿಶ್ವರಿ ಕಾರ್ಯಕ್ರಮ ನಿರೂಪಿಸಿದರು.