ಹಿರಿಯರೆಡೆಗೆ ನಮ್ಮ ನಡಿಗೆ: ಸನದಿಯವರಿಗೆ ದಶಮನೋತ್ಸವ ಗೌರವ

ಪ್ರೀತಿ ಎಂಬದೇ ಚುಂಬಕ ಗಾಳಿ: ಬಿ.ಎ.ಸನದಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಪ್ರೀತಿಯೆಂಬುದೇ ಒಂದು ಪ್ರಶಸ್ತ ಚುಂಬಕ ಶಕ್ತಿ. ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಅವನ ಕೆಲಸ ಸಾಧನೆಗಳ ಮೇಲೆ ಇಂತಹ ಪ್ರೀತಿ ಗೌರವವೇ ನಮ್ಮನ್ನು ಪರಸ್ಪರ ಸೆಳೆಯುತ್ತದೆ ಎಂದು ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ, ಆಕಾಶವಾಣಿ ಮಾಧ್ಯಮದ ಹಿರಿಯ ಚೇತನ ಬಿ.ಎ ಸನದಿ ಹೇಳಿದರು.

ಅವರು ಪತ್ರಕರ್ತರ ವೇದಿಕೆ( ರಿ) ಬೆಂಗಳೂರು ಉಡುಪಿ ಜಿಲ್ಲಾ ಘಟಕದ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದ ದಶಮಾನೋತ್ಸವ ಪ್ರಯುಕ್ತ ನೀಡಲಾದ ಗೌರವವನ್ನು ಗುರುವಾರ ಸ್ವೀಕರಿಸಿ ಮಾತನಾಡುತ್ತಿದ್ದರು. ನನಗೆ ಭಾಷೆಯ ಮೇಲೆ ಪ್ರೀತಿಇದೆ. ಭಾಷಾ ವ್ಯಾಮೋಹವಿರಲಿಲ್ಲ ಆಯಾ ಭಾಷೆಯ ಜನರೊಡನೆ ಅವರ ಭಾಷೆಯಲ್ಲಿ ಪ್ರೀತಿ ವಿಶ್ವಾಸ ಹಂಚಿ ಕೊಳ್ಳುವುದು ಸಾಧ್ಯವಾಯಿತು. ಸಾಮರಸ್ಯದ ಬದುಕೇ ಶ್ರೇಷ್ಠ ಎಂದು ಅವರು ಹೇಳಿದರು.

ಗೌರವ ಪ್ರಧಾನಿಸಿದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಸಾಹಿತ್ಯದಲ್ಲಿ ಕೀರ್ತಿಗಳಿಸಿದ ಸನದಿ ಅವರು ಜನರ ಮನಸ್ಸಿನಲ್ಲಿ ಉಳಿಯುವ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇಂತಹ ವ್ಯಕ್ತಿಗಳನ್ನು ಗೌರವಿಸುವುದೇ ಒಂದು ಸಾರ್ಥಕದ ಕ್ಷಣ. ಅವರು ನೂರ್ಕಾಲ ಬಾಳಲಿ ಬದುಕಲಿ ಎಂದು ಹಾರೈಸಿದರು.

ಪ್ರಾದೇಶಿಕ ಭಾಷೆಗಳ ಬಗೆಗಿನ ಕೀಳರಿಮೆ ಸಲ್ಲದು. ನೆಲದ ಭಾಷೆ, ಜಲದ ಭಾಷೆ, ಮನಸ್ಸಿನ ಭಾಷೆಗೆ ಹೆಚ್ಚಿನ ಗೌರವ ಸಿಗ ಬೇಕು. ಸನದಿ ಈ ನಿಟ್ಟಿನಲ್ಲಿ ವಿಶಿಷ್ಟವಾಗಿ ಆಲೋಚಿಸಿದವರು ಎಂದು ಅತಿಥಿಗಳಾಗಿದ್ದ ಪಂಚನಬೆಟ್ಟು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎ.ನರಸಿಂಹ ಹೇಳಿದರು.

ಸನದಿ ಮಾನವ್ಯ ಕವಿ, ಅವರು ತಾವು ಹೇಳಿದ್ದನ್ನು ಮತ್ತು ವಿಶ್ವ ಮಾನದ ವಿಚಾರ- ತತ್ವಗಳನ್ನು ತಮ್ಮ ಬದುಕಲ್ಲಿ ಬದುಕಿ ತೋರಿದ್ದಾರೆ. ಆಕಾಶವಾಣಿ ಮತ್ತು ಪಂಚಾಯತ್ ರಾಜ್ ಪತ್ರಿಕೆ ಮೊದಲ ಎರಡು ವರ್ಷ ಮಾಧ್ಯಮದಲ್ಲಿ ಸಲ್ಲಿಸಿದ ಸೇವೆಗಾಗಿ ಈ ಗೌರವ ಎಂದು ಸಂಘಟಕ, ವೇದಿಕೆಯ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ಅಭಿಪ್ರಾಯಿಸಿದರು. ಪತ್ರಿಕೋದ್ಯಮ ಪ್ರಾಧ್ಯಾಪಕ ಮಂಜಪ್ಪ ದ್ಯಾ ಗೋಣಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸಾಹಿತ್ಯಕವಾಗಿ ಕಾರ್ಯಕ್ರಮ ನಿರೂಪಿಸಿದರು. ಕುಂದಾಪ್ರ ಡಾಟ್ ಕಾಮ್ ಸಂಪಾದಕ ಸುನೀಲ್ ಬೈಂದೂರು, ಶ್ರಿಮತಿ ನಜಿರಾ ಸನದಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

nineteen − thirteen =