ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇವರನ್ನು ಯಾವುದೇ ರೂಪದಲ್ಲಿ ಆರಾಧಿಸಿದರೂ ಪರಮಾತ್ಮನೊಬ್ಬನೇ ಎಂಬ ಸತ್ಯ ಪ್ರತಿಯೊಬ್ಬರಿಗೂ ಅರಿವಿರಬೇಕು. ನಾವು ಬೇಡಿದ ರೂಪದಲ್ಲಿ ಕಾಣಿಸುವ ಭಗವಂತನಿಗೆ ತೋರಿಕೆ ಭಕ್ತಿಯ ಬದಲಿಗೆ ಶ್ರದ್ಧಾಭಕ್ತಿಯಿಂದ ಪೂಜಿಸುವುದು ಬಹುಮುಖ್ಯವಾಗುತ್ತದೆ. ನಮ್ಮ ಹೃದಯದಲ್ಲಿ ಜ್ಞಾನದೀಪ ಬೆಳಗದಿದ್ದರೆ ಭಕ್ತಿಯು ಕೂಡ ಮೂಢನಂಬಿಕೆಯ ಕಡೆಗೆ ತಿರುಗುತ್ತದೆ ಎಂದು ಎಳಜಿತ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರು ಹೇಳಿದರು.ಅವರು ಗುಜ್ಜಾಡಿ ಬೆಣ್ಗೇರಿ ಶ್ರೀ ನಾಗ ದೇವಸ್ಥಾನದಲ್ಲಿ ಜರುಗಿದ 46ನೇ ನಾಗಮಂಡಲೋತ್ಸವ ಹಾಗೂ ಪ್ರತಿಷ್ಠಾ ವರ್ಧಂತಿ ಕಾರ್ಯಕ್ರಮದ ಬಳಿಕ ಬುಧವಾರ ನಡೆದ ಶ್ರೀ ಸುಬ್ರಹ್ಮಣ್ಯ ಯುತ್ ಕ್ಲಬ್’ನ 46ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ ಭಾರತದ ಸುವರ್ಣಯುಗ ಎಂಬ ಕಾಲದಲ್ಲಿ ನಾಗರಾಧನೆಗೆ ವಿಶೇಷ ಪ್ರಾಮುಖ್ಯತೆ ಇತ್ತು. ಹಾಗಾಗಿ ವಿಕ್ರಮಾದಿತ್ಯ ಬಿರುದಾಂಕಿತ ರಾಜರು ಬಹುಕಾಲ ತಮ್ಮ ಸಾಮ್ರಾಜ್ಯವನ್ನು ಮುನ್ನಡೆಸಿದರು ಎಂದ ಅವರು ಮುಂದಿನ ಪೀಳಿಗೆಯಲ್ಲಿ ಭಕ್ತಿಯ ಜೊತೆಗೆ ಸಂಸ್ಕಾರವನ್ನು ಕಲಿಸುವ ಕಾರ್ಯವಾಗಬೇಕಿದೆ ಎಂದರು.
ಉಡುಪಿ ಜಿಲ್ಲಾ ಶ್ರೀ ಭಗವದ್ಗೀತಾ ಆಚರಣಾ ಸಮಿತಿ ಸಂಚಾಲಕರಾದ ಬಿ. ರಾಮಕೃಷ್ಣ ಶೇರುಗಾರ್ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ಚಾರೋಡಿ ಮೇಸ್ತ ಸಮಾಜದ ಅಧ್ಯಕ್ಷರಾದ ರಾಮಚಂದ್ರ ಬಿ. ಶಿರೂರ್ಕರ್, ನಾಗಶ್ರೀ ಮಹಿಳಾ ಸಂಘ ಅಧ್ಯಕ್ಷೆ ರಾಧಿಕ ರಾಮಕೃಷ್ಣ ಮೇಸ್ತ, ಶ್ರೀ ಸುಬ್ರಹ್ಮಣ್ಯ ಯುತ್ ಕ್ಲಬ್ ಆದ್ಯಕ್ಷ ಪ್ರವೀಣ್ ಜಿ. ಮೇಸ್ತ, ಕಾರ್ಯದರ್ಶಿ ಶ್ರೀನಾಥ ಮೇಸ್ತ ಉಪಸ್ಥಿತರಿದ್ದರು.
ಕುಂದಾಪುರ ತಾಲೂಕು ಭಜನಾ ಒಕ್ಕೂಟದ ಅಧ್ಯಕ್ಷರಾದ ಜಯಕರ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮೃತರಾದ ದೇವಸ್ಥಾನದ ಅರ್ಚಕರಾದ ಯಜ್ಞ ಐತಾಳ್ ಅವರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಶ್ರೀ ನಾಗ ದೇವಸ್ಥಾನದ ಅಧ್ಯಕ್ಷ ಉಮೇಶ್ ಎಲ್. ಮೇಸ್ತ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರತೀಕ್ಷಾ ಸತೀಶಗ ಮೇಸ್ತ ಪ್ರಾರ್ಥಿಸಿದರು. ಶ್ರೀನಿವಾಸ್ ವಂದಿಸಿದರು.