ಕುಂದಾಪುರ: ಎಲ್ಲಾ ರೋಗಗಳಿಗೆ ಮೂಲ ಕಾರಣವಾಗಿರುವ ವಾತ, ಪಿತ್ತ,ಕಫ ನಿಯಂತ್ರಿಸಿಕೊಳ್ಳಬೇಕು. ಶರೀರ ಮತ್ತು ಆರೋಗ್ಯ ಸಮತೋಲನೆಗೆ ಪ್ರಕೃತಿದತ್ತ ಆಹಾರ ಸೇವಿಸುತ್ತಾ ಒಳ್ಳೆಯ ವಿಚಾರ ಮತ್ತು ಭಾವನೆಗಳನ್ನು ಮೈಗೂಡಿಸಿಕೊಂಡಾಗ ಆರೋಗ್ಯವೇ ಭಾಗ್ಯ ಎನಿಸಿಕೊಳ್ಳಲು ಸಾದ್ಯ. ಪ್ರಕೃತಿಯ ಆಸೆ ಆಮಿಷಗಳಿಗೆ ಬಲಿಯಾಗದೆ ಆಂತರಿಕ ಸೌಂದರ್ಯ ವೃದ್ಧಿಸುವ ಬುಧ್ಧಿ ಮತ್ತು ಮನಸ್ಸನ್ನು ಚೇತನಗೊಳಿಸಿದಾಗ ಉತ್ತಮ ಆರೋಗ್ಯದ ಜತೆಗೆ ನೆಮ್ಮದಿಯುಕ್ತ ಜೀವನ ನಮ್ಮದಾಗುತ್ತದೆ ಎಂದು ಆರೋಗ್ಯ ಸಲಹೆಗಾರ ಮೆಲ್ವೀನ್ ಕ್ರಾಸ್ತಾ ಹೇಳಿದರು. ಅವರು ಹೆಮ್ಮಾಡಿ ಜನತಾ ಪ.ಪೂ ಕಾಲೇಜಿನ ವಿದ್ಯಾರ್ಥಿ ವೇದಿಕೆ ಆಶ್ರಯದಲ್ಲಿ ನಡೆದ ಯೋಗ ಕ್ಷೇಮ ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಬ್ರಾಹ್ಮೀ ಮಹೂರ್ತದಲ್ಲಿ ಎದ್ದು ಯೋಗ ,ಪ್ರಾಣಾಯಾಮ, ದ್ಯಾನ ಮತ್ತು ದೈನಂದಿನ ಕಾರ್ಯದಲ್ಲಿ ಸಕ್ರೀಯರಾದಾಗ ದಿನವಿಡೀ ಉಲ್ಲಾಸ ನಮ್ಮದಾಗಿ ಸಕರಾತ್ಮಕ ಚಿಂತನೆಯೊಂದಿಗೆ ದೇಹ ಮತ್ತು ಮನಸ್ಸಿನ ಕೊಳೆಯನ್ನು ಹೋಗಲಾಡಿಸಿ ಜ್ಞಾನ ಬುದ್ಧಿ ಪ್ರಚೋದನೆಯಾಗುತ್ತದೆ ಎಂದರು. ಉಪನ್ಯಾಸಕ ಮಂಜುನಾಥ.ಕೆ.ಎಸ್ ಸ್ವಾಗತಿಸಿದರು. ಮಂಜುನಾಥ ಚಂದನ್ ಕಾರ್ಯಕ್ರಮ ನಿರೂಪಿಸಿದರು. ಗಿರಿಜಾ.ಕೆ ವಂದಿಸಿದರು.