ಹೇರೂರು: ತ್ಯಾಜ್ಯ ತಿಂದ ದನಗಳ ಸಾವು, ಹಲವು ಅಸ್ವಸ್ಥ

ಬೈಂದೂರು: ಸಮೀಪದ ಹೇರೂರು ಗ್ರಾಮದ ಮಡ್ಲಗೇರಿ ಎಂಬಲ್ಲಿನ ತುಂಬಿಕೆರೆ ಬಳಿ ಎಸೆಯಲಾಗುತ್ತಿರುವ ಕೋಳಿ ಮತ್ತು ಪ್ರಾಣಿಗಳ ತ್ಯಾಜ್ಯ ತಿಂದ ಏಳು ದನಗಳು ಅಸುನೀಗಿದ್ದು, ಇನ್ನೂ ಆರು ಸಾವಿನ ಅಂಚಿನಲ್ಲಿವೆ. ಹಲವು ಅಸ್ವಸ್ಥವಾಗಿದ್ದು, ಅವುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸತ್ತ ಮತ್ತು ಅಸ್ವಸ್ಥ ದನಗಳು ಮಡ್ಲಗೇರಿಯ ಬಾಬು ಆಚಾರಿ, ಹಿತ್ಲುಮನೆ ಗಿರಿಜಾ ಪೂಜಾರಿ, ಸುಬ್ರಾಯ ಆಚಾರಿ ಮತ್ತು ಸಾಧು ಪೂಜಾರಿ ಎಂಬವರಿಗೆ ಸೇರಿವೆ.

ತುಂಬಿಕೆರೆ ಅರಣ್ಯ ಇಲಾಖೆಗೆ ಸೇರಿದ ಗೇರುತೋಟದ ನಡುವೆ ಇದೆ. ನಾವುಂದ ಹೇರೂರು ಮಾರ್ಗದಿಂದ ಇಲ್ಲಿಗೆ ಹೋಗಲು ಮಣ್ಣಿನ ರಸ್ತೆ ಇದೆ. ಯಾವುದೋ ಮಂಸಾಹಾರಿ ಹೋಟೆಲ್‌ಗಳ ಕೋಳಿ ಮತ್ತು ಪ್ರಾಣಿಗಳ ತ್ಯಾಜ್ಯವನ್ನು ಚೀಲಕ್ಕೆ ತುಂಬಿಸಿ, ವಾಹನದಲ್ಲಿ ತಂದು ಇಲ್ಲಿ ಎಸೆಯಲಾಗುತ್ತಿದೆ. ಪರಿಸರದ ದನಗಳು ಇಲ್ಲಿಗೆ ಮೇಯಲು ಬರುತ್ತಿದ್ದು, ಹಸಿ ಒಣಗಿ ಮೇವು ಇಲ್ಲವಾದುದರಿಂದ ಅವು ಈ ತ್ಯಾಜ್ಯ ತಿನ್ನುತ್ತಿವೆ. ಇದು ದನಗಳು ಸಾಯಲು ಮತ್ತು ಅಸ್ವಸ್ಥವಾಗಲು ಕಾರಣ ಎಂದು ಜನರು ಹೇಳುತ್ತಿದ್ದಾರೆ. ಪಶು ವೈದ್ಯರು ಇದನ್ನು ಅಲ್ಲಗಳೆಯುತ್ತಿಲ್ಲ.

ಹೇರೂರು ಗ್ರಾಮ ಪಂಚಾಯತ್ ನೀಡಿದ ಮಾಹಿತಿ ಅನುಸರಿಸಿ ಕಿರಿಮಂಜೇಶ್ವರದ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ನಾಗರಾಜ ಮರವಂತೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರಲ್ಲದೆ ಅಸ್ವಸ್ಥ ದನಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಮಂಗಳೂರಿನ ಪ್ರಾದೇಶಕ ಸಂಶೋಧನಾ ಕೇಂದ್ರದ ಡಾ. ವಸಂತ ಶೆಟ್ಟಿ ಆಗಮಿಸಿ ತ್ಯಾಜ್ಯದ ಮಾದರಿ ಮತ್ತು ಅಸ್ವಸ್ಥ ದನದ ರಕ್ತ ಸಂಗ್ರಹಿಸಿದ್ದಾರೆ. ಪರಿಶೀಲನೆಯ ಬಳಿಕ ದನಗಳ ಸಾವಿನ ನೈಜ ಕಾರಣ ತಿಳಿದು ಬರಲಿದೆ ಎಂದು ತಿಳಿಸಿದ್ದಾರೆ.

ಶಾಸಕ ಕೆ. ಗೋಪಾಲ ಪೂಜಾರಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜುಪೂಜಾರಿ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಬೈಂದೂರು ವಿಶೇಷ ತಹಸಿಲ್ದಾರ್ ಕಿರಣ್ ಗೌರಯ್ಯ, ಗ್ರಾಮ ಕರಣಿಕರಾದ ಮಂಜು, ಲಕ್ಷ್ಮೀ ತ್ಯಾಜ್ಯ ಎಸೆಯುತ್ತಿರುವ ಸ್ಥಳ ಮತ್ತು ಸಂತ್ರಸ್ತ ಕುಟುಂಬಗಳ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಗ್ರಾಮ ಪಂಚಾಯತ್ ಅಧ್ಯಕ್ಷೆ ಸಾಕು, ಸದಸ್ಯರಾದ ಸತೀಶಕುಮಾರ ಶೆಟ್ಟಿ, ಶ್ರೀನಿವಾಸ ಪೂಜಾರಿ, ವೆಂಕಟು, ಅಭಿವೃದ್ಧಿ ಅಧಿಕಾರಿ ಗಿರಿಜಾ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದಾರೆ. ಈ ದುರ‍್ಘಟನೆ ಕೆಲವು ವರ್ಷಗಳ ಹಿಂದೆ ಬೈಂದೂರು ಸಮೀಪದ ಹೇನಬೇರಿನಲ್ಲಿ ತ್ಯಾಜ್ಯ ಸೇವಿಸಿ ನಡೆದ ದನಗಳ ಮಾರಣ ಹೋಮವನ್ನು ನೆನಪಿಸುತ್ತಿದೆ. ಇಲ್ಲಿ ತ್ಯಾಜ್ಯ ಎಸೆಯುವ ಪ್ರವೃತ್ತಿಗೆ ಕಡಿವಾಣ ಬೀಳದಿದ್ದರೆ ಅಲ್ಲಿನ ಸರಣಿ ಜಾನುವಾರು ಸಾವು ಇಲ್ಲಿ ಮರುಕಳಿಸುವ ಸಾಧ್ಯತೆ ಇದೆ. ದನ ಕಳೆದುಕೊಂಡ ಜನರು ಸೂಕ್ತ ಪರಿಹಾರಕ್ಕೆ ಆಗ್ರಹಿಸುತ್ತಿದ್ದಾರೆ. ಜನರು ದನಗಳನ್ನು ಇಲ್ಲಿ ಮೇಯಲು ಬಿಡಬಾರದು ಮತ್ತು ದನಗಳು ಅಸ್ವಸ್ಥವಾದ ತಕ್ಷಣ ತಮ್ಮ ಗಮನಕ್ಕೆ ತರಬೇಕು ಎಂದು ಡಾ. ನಾಗರಾಜ್ ವಿನಂತಿಸಿದ್ದಾರೆ.

Maravanthe A 27-2 Maravanthe A 27-3

Leave a Reply

Your email address will not be published. Required fields are marked *

twenty − eleven =