ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಹೊಸ ವರ್ಷಾಚರಣೆಗಾಗಿ ಕಾಲ್ತೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರೂರು ಕೊರಗರ ಕೇರಿಯ ಮರ್ಲಿ ಹೆಂಗ್ಸು ಮನೆಯಲ್ಲಿ ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್. ಆಂಜನೇಯ ಡಿ. 31ರಂದು ವಾಸ್ತವ್ಯ ಹೂಡಲಿರುವ ಹಿನ್ನೆಲೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಮುರೂರಿಗೆ ಭೇಟಿ ನೀಡಿ ಸಚಿವರ ವಾಸ್ತವ್ಯವಿರಲಿರುವ ಮನೆಗೆ ಭೇಟಿ ನೀಡಿ ಅಲ್ಲಿನ ಪೂರ್ವತಯಾರಿಗಳನ್ನು ಅವಲೋಕಿಸಿದರು.
ಮುರೂರಿಗೆ ಆಗಮಿಸಲಿರುವ ಸಚಿವರು ಜಿಲ್ಲೆಯ ನಾನಾ ಭಾಗದಿಂದ ಆಗಮಿಸುವ ಕೊರಗ ಜನಾಂಗದವರು ಹಾಗೂ ಸ್ಥಳೀಯರ ಸಮಾವೇಶ ನಡೆಸಿ, ಬಳಿಕ ಅವರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಸಂಜೆ ಗಂಟೆಯ ಬಳಿಕ ಕೊರಗ ಸಂಘಟನೆಯ ಮುಖಂಡರು ಹಾಗೂ ಇತರ ಜನರೊಂದಿಗೆ, ಕೊರಗ ಕೇರಿಯ ಮರ್ಲಿ ಹೆಂಗ್ಸು ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಆ ದಿನ ಮಧ್ಯರಾತ್ರಿಯವರೆಗೂ ಕೊರಗ ಸಂಘಟನೆಯಿಂದ ಜಾನಪದ ನೃತ್ಯ, ಡೊಳ್ಳು ಕುಣಿತ ಮೂಲಕ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ. ಈ ಸಂದರ್ಭದಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ತಾಪಂ ಸದಸ್ಯ ಎಚ್. ವಿಜಯ ಶೆಟ್ಟಿ, ಕಾಲ್ತೋಡು ಗ್ರಾಪಂ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ ಭಟ್ನಾಡಿ, ಉಪಾಧ್ಯಕ್ಷ ರಾಜು ಪೂಜಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
► ಹೊಸವರ್ಷ ಆಚರಣೆಗೆ ಮುರೂರು ಕೊರಗರ ಕೇರಿಗೆ ಬರುತ್ತಾರೆ ಸಚಿವ ಆಂಜನೇಯ – http://kundapraa.com/?p=20084