ಕೋಟೇಶ್ವರ: ಡಿ. 28, 29ರಂದು10ನೇ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನ

ಕುಂದಾಪ್ರ ಡಾಟ್ ಕಾಂ’ ಸುದ್ದಿ
ಕುಂದಾಪುರ: ‘ಬ್ರಾಹ್ಮಣ ಸಮಾಜದ ಅಭಿವೃದ್ಧಿಗಾಗಿ ತೆಲಂಗಾಣ ರಾಜ್ಯ ರೂಪಿಸಿರುವ ಮಾದರಿಯಲ್ಲಿಯೇ ಕರ್ನಾಟಕದಲ್ಲಿಯೂ ಬ್ರಾಹ್ಮಣ ಸಮಾಜ ಅಭಿವೃದ್ಧಿಗೆ ಮಂಡಳಿ ಸ್ಥಾಪಿಸಿ, ಅದಕ್ಕೆ ಅಗತ್ಯ ಅನುದಾನವನ್ನು ನೀಡುವಂತೆ ಸರ್ಕಾರದ ಗಮನ ಸೆಳೆಯುವುದು ಹಾಗೂ ಲೋಕ ಕಲ್ಯಾಣಾರ್ಥವಾಗಿ ಇದೇ 28 ಹಾಗೂ 29ರಂದು ಕೋಟೇಶ್ವರದಲ್ಲಿ 10ನೇ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನ ಆಯೋಜಿಸಲಾಗಿದೆ’ ಎಂದು ಸಮ್ಮೇಳನ ಅಧ್ಯಕ್ಷ ನೇರಂಬಳ್ಳಿ ರಾಘವೇಂದ್ರ ರಾವ್ ಹೇಳಿದರು.

ಸಮ್ಮೇಳನ ನಡೆಯುವ ಕೋಟೇಶ್ವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಮಂಗಳವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ ಮಾತನಾಡಿ, ‘ರಾಜ್ಯದಲ್ಲಿರುವ ಅಂದಾಜು 50 ಲಕ್ಷ ಬ್ರಾಹ್ಮಣರ ಅಭಿವೃದ್ಧಿಗೆ ಸರ್ಕಾರ ಸಹಕಾರ ನೀಡಬೇಕು. ಸಮ್ಮೇಳನದಲ್ಲಿ ಬ್ರಾಹ್ಮಣ ಸಮಾಜ ಎದುರಿಸುತ್ತಿರುವ ಸಮಸ್ಯೆ, ಸ್ಥಿತಿ–ಗತಿಯ ಬಗ್ಗೆ ವಿಚಾರ ವಿಮರ್ಶೆ ನಡೆಸಿ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಾಣುವ ಪ್ರಯತ್ನ ಮಾಡಲಾಗುವುದು. ಬ್ರಾಹ್ಮಣ ಯುವಕರ ಮದುವೆ ಹಾಗೂ ಪೌರೋಹಿತ್ಯಕ್ಕೆ ಪ್ರೋತ್ಸಾಹ ನೀಡಲು ಸರ್ಕಾರವನ್ನು ಕೋರಲಾಗುವುದು. ಬ್ರಾಹ್ಮಣ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮಹಾಸಭಾದ ನೇತೃತ್ವದಲ್ಲಿ ನಡೆಯುತ್ತಿರುವ ಮಹಾ ಸಮ್ಮೇಳನದ ಮೂಲಕ ಸಂಘಟನೆಗೆ ಇನ್ನಷ್ಟು ಬಲ ತುಂಬಲಾಗುವುದು’ ಎಂದು ಹೇಳಿದರು.

ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಮಾವೇಶಕ್ಕೆ ಬರುವವರ ವಸತಿಗಾಗಿ 41 ಕಲ್ಯಾಣ ಮಂಟಪ ಹಾಗೂ ವಸತಿ ಗೃಹಗಳನ್ನು ಕಾಯ್ದಿರಿಸಲಾಗಿದೆ. 60 ಸಾವಿರಕ್ಕೂ ಮಿಕ್ಕ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಸಭಾಂಗಣ, ಊಟದ ಹಾಲ್, ವಿವಿಧ ಮಳಿಗೆಗಳಿಗೆ ಚಪ್ಪರ ವ್ಯವಸ್ಥೆ ಮಾಡಲಾಗಿದೆ. ಕುಂದಾಪುರ ಬಸ್ ನಿಲ್ದಾಣದಿಂದ ಸಮ್ಮೇಳನ ನಡೆಯುವ ಸ್ಥಳಕ್ಕೆ ಪ್ರತಿ 5 ನಿಮಿಷಕ್ಕೊಂದರಂತೆ ವಾಹನ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನದಲ್ಲಿ 30 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

‘29ರಂದು ಬೆಳಿಗ್ಗೆ ನಡೆಯುವ ಶೋಭಾಯಾತ್ರೆಯಲ್ಲಿ ಅಷ್ಟಮಠದ ಸ್ವಾಮೀಜಿಗಳು, ಶ್ರೀ ರಾಮಚಂದ್ರಾಪುರ ಮಠ ಸ್ವಾಮೀಜಿ ಹಾಗೂ ಮಂತ್ರಾಲಯ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ಶೋಭಾಯಾತ್ರೆಯಲ್ಲಿ ಬ್ರಾಹ್ಮಣ ಸಂಸ್ಕೃತಿ ಸಂಸ್ಕಾರ ಬಿಂಬಿಸುವ 20ಕ್ಕೂ ಮಿಕ್ಕಿ ಟ್ಯಾಬ್ಲೋಗಳು ಇರಲಿವೆ’ ಎಂದು ಸಮ್ಮೇಳನದ ಕಾರ್ಯಾಧ್ಯಕ್ಷ ಎಸ್‌.ಕೃಷ್ಣಾನಂದ ಚಾತ್ರ ತಿಳಿಸಿದರು.

28ಕ್ಕೆ ಶೃಂಗೇರಿ ಪೀಠ ಪ್ರಾಂತೀಯ ಧರ್ಮಾಧಿಕಾರಿ ಬಿ.ಲೋಕೇಶ್ ಅಡಿಗ ನೇತೃತ್ವದಲ್ಲಿ ಲಕ್ಷ್ಮೀನಾರಾಯಣ ಭಟ್ ಅವರ ಪ್ರಧಾನ ಅರ್ಚಕತ್ವದಲ್ಲಿ ಲೋಕಕಲ್ಯಾಣಾರ್ಥ 24 ಯಜ್ಞ ಕುಂಡಗಳಲ್ಲಿ 700 ಪುರೋಹಿತರು ಗಾಯತ್ರಿ ಮಹಾಯಜ್ಞ ನಡೆಸಲಿದ್ದಾರೆ. ಶೃಂಗೇರಿ ಮಠದ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಪೂರ್ಣಾಹುತಿ ನಡೆದು, ಮಹಾ
ಸಮ್ಮೇಳನ ಕಾರ್ಯಕ್ರಮಕ್ಕೆ ಚಾಲನೆ ದೊರಕಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 11 ಗಂಟೆಗೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. 29ರಂದು ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸ್ವಾಗತ ಸಮಿತಿ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್, ಮಹಿಳಾ ಸಂಘಟನೆ ತಾಲ್ಲೂಕು ಅಧ್ಯಕ್ಷೆ ಪವಿತ್ರಾ ಅಡಿಗ, ಕಾರ್ಯದರ್ಶಿ ಪ್ರಫುಲ್ಲಾ ಜಿ.ಭಟ್, ಪ್ರಧಾನ ಕಾರ್ಯದರ್ಶಿ ಕೆ.ರಾಮ ಪ್ರಸಾದ್, ಪ್ರಕಾಶ್ ಭಟ್, ಸತೀಶ್ ಎಂ.ಎಸ್‌, ಎಚ್.ಎನ್.ಛಾಯಾಪತಿ, ಶ್ರೀಕಾಂತ ಕನ್ನಂತ, ಟಿ.ಕೆ.ಎಂ.ಭಟ್, ಗಣೇಶ್ ರಾವ್, ಶ್ಯಾಮ್‌ಪ್ರಸಾದ್ ಇದ್ದರು.

ನಿರ್ಣಯ:
‘ಸಮ್ಮೇಳನದಲ್ಲಿ ವಿವಿಧ ವಿಷಯಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುವುದು. ಬ್ರಾಹ್ಮಣ ಅಭಿವೃದ್ಧಿಮಂಡಳಿಗೆ ₹100 ಕೋಟಿ ಅನುದಾನ ನೀಡಲು ಒತ್ತಾಯಿಸಲಾಗುತ್ತದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆರ್ಥಿಕ ಹಿಂದುಳಿದವರ ಮೀಸಲಾತಿಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆಒತ್ತಾಯ ಮಾಡಲಾಗುವುದು’ಎಂದು ಸಮ್ಮೇಳನ ಸಂಯೋಜಕ ಆರ್.ಲಕ್ಷ್ಮೀಕಾಂತ್ ತಿಳಿಸಿದರು.

‘ವಿಪ್ರಶ್ರೀ ಪ್ರಶಸ್ತಿ’ ಪ್ರದಾನ:
ಹಿರಿಯ ಕೃಷಿಕ ಎ.ಜಿ.ಕೊಡ್ಗಿ, ಇಸ್ರೊ ವಿಜ್ಞಾನಿ ಸುರೇಶ್, ಉದ್ಯಮಿ ಎನ್.ಆರ್.ನಾರಾಯಣ ರಾವ್, ಆರ್.ಕೆ.ಪದ್ಮನಾಭ, ಡಾ.ಅರಳುಮಲ್ಲಿಗೆ ಪಾರ್ಥಸಾರಥಿ, ಚಿಂತಕ ಪಾವಗಡ ಪ್ರಕಾಶ್ ರಾವ್, ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್, ಮಾಜಿ ಶಾಸಕ ಎಲ್.ಟಿ.ಹೆಗಡೆ ಸಾಗರ, ನಟ ಶ್ರೀನಾಥ್, ಕಮಲಶಿಲೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಸ್‌.ಸಚ್ಚಿದಾನಂದ ಚಾತ್ರ, ಉದ್ಯಮಿ ಯಜ್ಞನಾರಾಯಣ ಹೇರ್ಳೆ, ಜಯರಾಮ್‌ ಭಟ್, ರೇವಾ ವಿವಿ ಕುಲಪತಿ ಸಿ.ಎಸ್.ವೈ.ಕುಲಕರ್ಣಿ, ವಿದುಷಿ ಡಾ.ಸತ್ಯವತಿ, ಡಾ.ಎಚ್.ಎನ್.ಸುಬ್ರಹ್ಮಣ್ಯಂ, ಪವನಾ ಆಚಾರ್ಯ ಅವರಿಗೆ ‘ವಿಪ್ರಶ್ರೀ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.

 

Leave a Reply

Your email address will not be published. Required fields are marked *

thirteen − 6 =