ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಹೋಬಳಿಯ ರಂಗೇನಹಳ್ಳಿ ಗ್ರಾಮದ ಹಲಸೂರು ಕೆರೆ ಸಮೀಪ ಶನಿವಾರ ಮಧ್ಯಾಹ್ನ ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ, ದಂಪತಿ ಸಹಿತ ಮೂವರು ಸಾವನ್ನಪ್ಪಿದ್ದಾರೆ.
ಕಾರು ಚಾಲಾಯಿಸುತ್ತಿದ್ದ ಕುಂದಾಪುರ ಕೋಡಿಯ ವೆಂಕಟರಮಣ ಶೇರುಗಾರ್ ಅವರ ಪುತ್ರ ನಾಗೇಂದ್ರ ಶೇರುಗಾರ್ (28), ಕೋಟೇಶ್ವರ ನೇರಂಬಳ್ಳಿಯ ರಾಮಚಂದ್ರ ಶೇರುಗಾರ್ ಅವರ ಪುತ್ರ ಅನಿಲ್ ಕುಮಾರ್ (30), ಪತ್ನಿ ಸುಜಿತಾ (29) ಮೃತ ದುರ್ದೈವಿಗಳು. ಅನಿಲ್ ಕುಮಾರ್ ದಂಪತಿಯ ಮಗು ಪ್ರಾಣಾಪಾಯದಿಂದ ಪಾರಾಗಿದೆ.
ಬೆಂಗಳೂರಿನಲ್ಲಿ ಉದ್ಯೋಗ ದಲ್ಲಿರುವ ಅನಿಲ್ ಕುಮಾರ್ ಕುಟುಂಬವು ಇತ್ತೀಚೆಗೆ ಕುಂದಾಪುರಕ್ಕೆ ಬಂದಿದ್ದರು. ಬೆಂಗಳೂರಿಗೆ ರೈಲಿನ ಮೂಲಕ ವಾಪಸಾಗಲು ಅವರು ಮೊದಲು ನಿರ್ಧರಿಸಿದ್ದರು. ಕೊನೆಯ ಕ್ಷಣದಲ್ಲಿ ನಿರ್ಧಾರವನ್ನು ಬದಲಾಯಿಸಿ ಸಂಬಂಧಿಯಾಗಿದ್ದ ನಾಗೇಂದ್ರನ ಕಾರ್ನಲ್ಲಿ ಶನಿವಾರ ಬೆಳಿಗ್ಗೆ 8 ಗಂಟೆಗೆ ಕುಂದಾಪುರದಿಂದ ಹೊರಟಿದ್ದರು.
ರಂಗೇನಹಳ್ಳಿ ಬಳಿ ತರೀಕೆರೆ ತಾಲ್ಲೂಕಿನ ಕರಕುಚ್ಚಿ ಗ್ರಾಮದಿಂದ ತೀರ್ಥಹಳ್ಳಿಗೆ ಹೊರಟಿದ್ದ ಕಾರಿನ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಎರಡೂ ಕಾರುಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಒಂದು ಕಾರು ಕೆರೆ ಏರಿಯ ತಡೆಗೋಡೆಯನ್ನು ಮುರಿದುಕೊಂಡು ನುಗ್ಗಿದೆ.
ಅನಿಲ್ ಕುಮಾರ್ ಕುಟುಂಬ ಸಾಗುತ್ತಿದ್ದ ಕಾರನ್ನು ಚಲಾಯಿಸುತ್ತಿದ್ದ ನಾಗೇಂದ್ರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡ ಅನಿಲ್ ಕುಮಾರ್ ಹಾಗೂ ಪತ್ನಿ ಅಶ್ವಿನಿ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆಯಲ್ಲಿಯೇ ಮೃತಪಟ್ಟಿದ್ದಾರೆ. ಈ ದಂಪತಿಯ 11 ತಿಂಗಳ ಹೆಣ್ಣು ಮಗು ಮಾತ್ರ ಅಪಾಯದಿಂದ ಪಾರಾಗಿದ್ದು, ಲಕ್ಕವಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನೊಂದು ಕಾರಿನಲ್ಲಿದ್ದ ಕರಕುಚ್ಚಿ ಗ್ರಾಮದ ಕಿರಣ್ ಹಾಗೂ ಅಶ್ವತ್ಥ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅಪಘಾತ ಸಂಭವಿಸಿದ ಸುದ್ದಿ ತಿಳಿದು ಸುತ್ತಲಿನ ಗ್ರಾಮಸ್ಥರು ಸೇರಿ ಗಾಯಾಳುಗಳನ್ನು 108–ಆಂಬುಲೆನ್ಸ್ನಲ್ಲಿ ಸಾಗಿಸಲು ಸಹಕರಿಸಿದ್ದಾರೆ. ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.