ಕುಂದಾಪುರ & ಬೈಂದೂರು ತಾಲೂಕಿನ 306 ಮಂದಿಗೆ ಕ್ವಾರಂಟೈನ್ ವಾಸ

ಸುನಿಲ್ ಬೈಂದೂರು | ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸೇವಾ ಸಿಂಧುವಿನ ಮೂಲಕ ಪಾಸ್ ಪಡೆದು ಹೊರ ರಾಜ್ಯಗಳಿಂದ ಮರುಳುತ್ತಿರುವವರನ್ನು ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧೆಡೆ ಗುರುತಿಸಲಾಗಿರುವ ಸ್ಥಳಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದ್ದು, ಕಳೆದ ಸೋಮವಾರದಿಂದ ಇಲ್ಲಿಯ ತನಕ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಒಟ್ಟು 306 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಕುಂದಾಪುರ ತಾಲೂಕಿಗೆ ಮೇ.4ರಿಂದ ತೆಲಂಗಾಣದಿಂದ 118, ಕೇರಳದಿಂದ 1, ಗುಜರಾತ್‌ನಿಂದ 6, ಗೋವಾದಿಂದ 1, ಮಹಾರಾಷ್ಟ್ರದಿಂದ 39 ಹಾಗೂ ತಮಿಳುನಾಡಿನಿಂದ 7 ಮಂದಿ ಬಂದಿದ್ದಾರೆ. ಬೈಂದೂರು ತಾಲೂಕಿಗೆ ತೆಲಂಗಾಣದಿಂದ 109, ಆಂಧ್ರಪ್ರದೇಶದಿಂದ 6, ಮಹಾರಾಷ್ಟ್ರದಿಂದ 15, ಗೋವಾದಿಂದ 6, ಗುಜರಾತ್‌ನಿಂದ 1 ಮತ್ತು ಕೇರಳದಿಂದ ಒಬ್ಬರು ಬಂದಿದ್ದಾರೆ.  ಇವರೆಲ್ಲರೂ ಬೈಂದೂರು ತಾಲ್ಲೂಕಿನ ಶಿರೂರು, ಕೊಲ್ಲೂರು ಹಾಗೂ ಕುಂದಾಪುರ ತಾಲ್ಲೂಕಿನ ಹೊಸಂಗಡಿ ಮೂಲಕ ಜಿಲ್ಲೆ ಪ್ರವೇಶಿಸಿದ್ದಾರೆ. ಅಲ್ಲಿನ ಚೆಕ್‌ಪೋಸ್ಟ್‌ಗಳಲ್ಲಿ ಪ್ರಾಥಮಿಕ ಆರೋಗ್ಯ ತಪಾಸಣೆಗೆ ಒಳಪಡಿಸಿದ ಅವರಿಗೆ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಕುಂದಾಪುರ ಹಾಗೂ ಬೈಂದೂರಿನ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಹಾಸ್ಟೆಲ್‌ನಲ್ಲಿ, ಆಶ್ರಮ ಶಾಲೆ, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಸದ್ಯ ಕ್ವಾರಂಟೈನ್ ಮಾಡಲಾಗುತ್ತಿದೆ. ಸ್ವಂತ ವೆಚ್ಚ ಭರಿಸುವವರಿಗೆ ನಿಗದಿಪಡಿಸಿದ ಲಾಡ್ಜ್‌ಗಳಲ್ಲಿ ಉಳಿದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಎಲ್ಲೆಡೆಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಆರೋಗ್ಯ ಹಾಗೂ ವೈಯಕ್ತಿಕ ಸ್ವಚ್ಚತೆ ವ್ಯವಸ್ಥೆ ಕಾಪಾಡಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. 14 ದಿನಗಳ ಕ್ವಾರಂಟೈನ್ ಬಳಿಕ ಎಲ್ಲರೂ ಮತ್ತೆ 14 ದಿನ ಹೋಮ್ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ. ನಡುವೆ ಅವರ ಗಂಟಲು ದ್ರವದ ಪರೀಕ್ಷೆ ನಡೆಸಿ ಕೊರೊನಾ ಸೋಂಕಿನ ಕುರಿತು ಖಚಿತಪಡಿಸಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. 

ಕೊಲ್ಲೂರು, ಕುಂಭಾಶಿ ದೇವಸ್ಥಾನದ ಊಟ:
ಕುಂದಾಪುರದಲ್ಲಿ ಕ್ವಾರಂಟೈನ್‌ನಲ್ಲಿ ಇರುವವರಿಗೆ ಕುಂಭಾಶಿ ಶ್ರೀ ವಿನಾಯಕ ದೇವಸ್ಥಾನದಿಂದ ಮಧ್ಯಾಹ್ನ ಹಾಗೂ ರಾತ್ರಿಯ ಊಟವನ್ನು ಪೂರೈಸಲಾಗುತ್ತಿದೆ. ಬೆಳಗಿನ ಉಪಹಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ. ಬೈಂದೂರಿನಲ್ಲಿ ಕ್ವಾರಂಟೈನ್‌ನಲ್ಲಿ ಇರುವವರಿಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಮಧ್ಯಾಹ್ನ-ರಾತ್ರಿಯ ಊಟ, ಬೆಳಗಿನ ಉಪಾಹಾರ ಪೂರೈಕೆಯಾಗುತ್ತಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. 

ಕಣ್ಗಾವಲು:
ಸರ್ಕಾರಿ ಕ್ವಾರಂಟೈನ್ ಕೇಂದ್ರಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ, ಪಂಚಾಯಿತಿ ಕರ ಸಂಗ್ರಾಹಕರು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಹಾಸ್ಟೆಲ್‌ಗಳ ವಾರ್ಡನ್ ಸಹಕರಿಸುತ್ತಿದ್ದಾರೆ. ಅಲ್ಲಿ ಪೊಲೀಸ್ ಕಾವಲು ಹಾಕಲಾಗಿದೆ. ಆರೋಗ್ಯ ಸಿಬ್ಬಂದಿ ದಿನವೂ ಭೇಟಿ ನೀಡಿ ಅವರ ಆರೋಗ್ಯದ ನಿಗಾ ವಹಿಸುತ್ತಿದ್ದಾರೆ. ಸ್ವಯಂ ಕ್ವಾರಂಟೈನ್‌ಗೆ ಒಳಗಾದವರ ಆರೋಗ್ಯದ ಬಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿ ಕಣ್ಗಾವಲು ಇರಿಸುತ್ತಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

ಇದನ್ನೂ ಓದಿ:
► ಉಡುಪಿ ಜಿಲ್ಲೆಯಲ್ಲಿ ಫೇಸ್ ಮಾಸ್ಕ್ ಧರಿಸದಿದ್ದರೆ ಬೀಳುತ್ತೆ ರೂ.100 ದಂಡ – https://kundapraa.com/?p=37467 .
► ಹೊರ ದೇಶ ಮತ್ತು ರಾಜ್ಯದಿಂದ ಬರುವವರ ಕ್ವಾರಂಟೈನ್‌ಗೆ ಸಕಲ ವ್ಯವಸ್ಥೆ: ಜಿಲ್ಲಾಧಿಕಾರಿ ಜಿ. ಜಗದೀಶ್ – https://kundapraa.com/?p=37398 .
► ಮುಂಬೈಯಿಗರು ಉಡುಪಿ ಜಿಲ್ಲೆಗೆ ಆಗಮಿಸಲು ಅನುಮತಿ. ಸೇವಾಸಿಂಧು ಪಾಸ್, ಕ್ವಾರಂಟೈನ್ ಕಡ್ಡಾಯ – https://kundapraa.com/?p=37387 .
► ಅಂತರಾಜ್ಯ ಸಂಚಾರಕ್ಕೆ ಸೇವಾಸಿಂಧುವಿನಲ್ಲಿ ನೊಂದಣಿ ಅಗತ್ಯ – https://kundapraa.com/?p=37276 .

Leave a Reply

Your email address will not be published. Required fields are marked *

one × 2 =