ಬೈಂದೂರು: ಕಾರಿಗೆ ಬೆಂಕಿ ಹಚ್ಚಿ ಮೇಸ್ತ್ರಿಯ ಕೊಲೆ – ಮಹಿಳೆಯೂ ಸೇರಿ ಇಬ್ಬರ ಬಂಧನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಜು.14:
ಇಲ್ಲಿನ ಹೇನುಬೇರು ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಸುಟ್ಟುಹೊದ ಸ್ಥಿತಿಯಲ್ಲಿ ಕಾರು ಹಾಗೂ ಅದರೊಳಕ್ಕೆ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಕೆಯ ಜಾಡು ಹಿಡಿದು ಹೊರಟ ಬೈಂದೂರು ಪೊಲೀಸರು, ಓರ್ವ ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯ 4 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.

Call us

Call us

ಸುಟ್ಟು ಹೋದ ಕಾರಿನ ಚೆಸ್ಸಿಯನ್ನು ಫೊರೆನ್ಸಿಕ್ ತಜ್ಞರ ಸಹಾಯದಿಂದ ಪರಿಶೀಲಿಸಿ, ಮಾಲಕನ ವಿವರಗಳನ್ನು ಪತ್ತೆಹಚ್ಚಲಾಗಿತ್ತು. ಕಾರಿನ ಮಾಲಕ ಕಾರ್ಕಳ ತಾಲೂಕಿನ ಮಾಳ ಗ್ರಾಮದ ನಿವಾಸಿ ಸದಾನಂದ ಶೇರಿಗಾರ್ (52) ಎಂದು ಗುರುತಿಸಲಾಗಿದ್ದು ಆತನೇ ಕಾರಿಗೆ ಬೆಂಕಿ ಹಚ್ಚಿ ಕಾರ್ಕಳ ಮೂಲದ ಗಾರೆ ಮೇಸ್ತ್ರಿ ಆನಂದ ದೇವಾಡಿಗ (55) ಎಂಬಾತನನ್ನು ಕೊಲೆಗೈದಿದ್ದಾನೆ ಎಂಬುದು ದೃಢಪಟ್ಟಿದೆ. ಘಟನೆಯ ಸಂಬಂಧ ಸದಾನಂದ ಶೇರಿಗಾರ್ ಹಾಗೂ ಕೃತ್ಯಕ್ಕೆ ಸಹಕರಿಸಿದ ಹಿರ್ಗಾನ್ ಶೀವನಗರ ನಿವಾಸಿ ಶಿಲ್ಪಾ ಪೂಜಾರಿ (30) ಎಂಬಾಕೆಯನ್ನು ಗುರುವಾರ ಬೆಳಿಗ್ಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Call us

Call us

ಮೃತ ಆನಂದ ದೇವಾಡಿಗ

ಅಮಾಯಕ ವ್ಯಕ್ತಿಯ ಕೊಲೆ:
ಕಾರ್ಕಳದಲ್ಲಿ ಖಾಸಗಿ ಸರ್ವೇಯರ್ ಆಗಿದ್ದ ಸದಾನಂದ ಶೇರೆಗಾರ್, 2019ರಲ್ಲಿ ವ್ಯಕ್ತಿಯೊಬ್ಬರ ಜಮೀನಲ್ಲಿ ಅಕ್ರಮವಾಗಿ ತನ್ನ ಕೈ ಬರಹದಲ್ಲಿ ರಸ್ತೆ ಇರುವುದಾಗಿ ನಕ್ಷೆ ತಯಾರಿಸಿಕೊಟ್ಟಿದ್ದ. ಈ ಪ್ರಕರಣದ ಬಗ್ಗೆ ಜಮೀನಿನ ಮಾಲೀಕರು ಸದಾನಂದ ಶೇರಿಗಾರ್ ವಿರುದ್ಧ ಖಾಸಗಿ ದೂರು ದಾಖಲಿಸಿದ್ದು ಎಫ್.ಐ.ಆರ್. ಆಗಿತ್ತು. ಈ ಬಗ್ಗೆ ನ್ಯಾಯಾಲಯ ಹಲವು ಬಾರಿ ವಾರಂಟ್ ಕಳುಹಿಸಿದ್ದರೂ ಹಾಜರಾಗಿರಲಿಲ್ಲ. ಹೈಕೋರ್ಟಿನಲ್ಲೂ ಜಾಮೀನು ಸಿಕ್ಕಿರಲಿಲ್ಲ. ಇದರಿಂದಾಗಿ ತಾನು ಸತ್ತಿರುವುದಾಗಿ ಬಿಂಬಿಸುವ ಸಲುವಾಗಿ ಬೇರೊಬ್ಬ ವ್ಯಕ್ತಿಯನ್ನು ತನ್ನ ಕಾರಿನಲ್ಲಿ ಕೂರಿಸಿ ಬೆಂಕಿ ಹಚ್ಚಿ ಕೊಲೆಗೈಯುವ ಪ್ಲಾನ್ ಸೃಷ್ಟಿಸಿದ್ದ.

ಮೇ.12ರಂದು ತನ್ನ ಸ್ನೇಹಿತೆ ಶಿಲ್ಪಾ ಪೂಜಾರಿ ಎಂಬ ಮಹಿಳೆಯ ಸಹಕಾರ ಪಡೆದು ತನ್ನ ಯೋಜನೆಯನ್ನು ಕಾರ್ಯತಗೊಳಿಸಲು ಯೋಜಿಸಿದ್ದ ಅದರಂತೆ ಶಿಲ್ಪಾ ಪೂಜಾರಿ ಕೊಲೆ ಮಾಡಲು ಆಯ್ದುಕೊಂಡ ವ್ಯಕ್ತಿ ಗಾರೆ ಮೇಸ್ತ್ರಿ ಆನಂದ ದೇವಾಡಿಗ. ಸದಾನಂದನೊಂದಿಗೆ ಸೇರಿ ಕೊಲೆಗೆ ಸಂಚು ರೂಪಿಸಿದ ಶಿಲ್ಪಾ, ಆನಂದ ದೇವಾಡಿಗನನ್ನು ಮನೆಗೆ ಕರೆಯಿಸಿಕೊಂಡು ಮದ್ಯ ಕುಡಿಸಿದ್ದಾಳೆ. ಆತನ ಕಾಮ ಪ್ರಚೋದನೆಗಾಗಿ ವಯಾಗ್ರ ಮಾತ್ರೆ ಎಂದು ನಂಬಿಸಿ ನಿದ್ದೆ ಮಾತ್ರೆಗಳನ್ನು ತಿನ್ನಿಸಿದ್ದಾಳೆ. ಅಲ್ಲದೇ ಮದ್ಯದ ಬಾಟಲಿಗೂ ಮಾತ್ರೆ ಪುಡಿಮಾಡಿ ಹಾಕಿ ಕುಡಿಸಿದ್ದಾಳೆ. ಆನಂದ ದೇವಾಡಿಗ ಪ್ರಜ್ಞೆ ಕಳೆದುಕೊಂಡ ತಕ್ಷಣ ಸದಾನಂದನಿಗೆ ಮಾಹಿತಿ ನೀಡಿದ್ದಾಳೆ.
ಶಿಲ್ಪಾಳ ಮನೆಗೆ ತನ್ನ ಹಳೆಯ ಪೋರ್ಡ್ ಕಾರಿನಲ್ಲಿ ಬಂದ ಸದಾನಂದ ಶೇರಿಗಾರ, ಪ್ರಜ್ಞೆ ತಪ್ಪಿದ್ದ ಆನಂದ ದೇವಾಡಿಗನನ್ನು ಹಿಂಬದಿಯ ಸೀಟಿನಲ್ಲಿ ಕುಳ್ಳಿರಿಸಿ ಶಿಲ್ಪಾಳೊಂದಿಗೆ ಬೈಂದೂರು ಕಡೆಗೆ ಹೊರಟಿದ್ದರು. ಬೈಲೂರು ಸಮೀಪದ ಪೆಟ್ರೋಲ್ ಬಂಕಿನಲ್ಲಿ 2 ಲೀಟರ್ ಬಾಟಲಿ ಹಾಗೂ 10 ಲೀಟರ್ ಕ್ಯಾನಿನಲ್ಲಿ ಪೆಟ್ರೋಲ್ ಖರೀದಿಸಿದ್ದಾರೆ. ಅಲ್ಲಿಂದ ತಾವಿಬ್ಬರು ಹಿಂದೆಯೇ ಯೋಜಿಸಿದಂತೆ ಒತ್ತಿನೆಣೆ ಸಮೀಪ ಹೇನುಬೇರುವಿನ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ತಾವು ತಂದಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

ಅಲ್ಲಿಂದ ಆರೋಪಿ ಸದಾನಂದನ ಪತ್ನಿಯ ಸಹೋದರರಾದ ನಿತಿನ್ ದೇವಾಡಿಗ ಹಾಗೂ ಸತೀಶ್ ದೇವಾಡಿಗ ಎಂಬುವವರನ್ನು ಇನ್ನೊಂದು ಕಾರಿನಲ್ಲಿ ಬಂದು ಕರೆಯಿಸಿಕೊಂಡು ಪರಾರಿಯಾಗಿದ್ದಾರೆ. ಬಳಿಕ ಶಿಲ್ಪಾ ಮನೆಯಲ್ಲಿ ಉಳಿದುಕೊಂಡ ಸದಾನಂದ ಹಾಗೂ ಶಿಲ್ಪಾ ಬುಧವಾರ ಸಂಜೆ ಬೆಂಗಳೂರಿಗೆ ಹೊರಟಿದ್ದಾರೆ. ಬಸ್ ಹಾಳಾಗಿದ್ದರಿಂದ ಮತ್ತೆ ಮೂಡುಬಿದಿರೆಗೆ ವಾಪಾಸಾಗಿದ್ದಾರೆ. ಅಲ್ಲಿಂದ ಕಾರ್ಕಳಕ್ಕೆ ಬೆಳಿಗ್ಗೆ ಬಸ್ಸಿನಲ್ಲಿ ಬರುತ್ತಿದ್ದ ಸಂದರ್ಭ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಸಹಕರಿಸಿದ ಸದಾನಂದನ ಸಂಬಂಧಿಗಳಾದ ಇಬ್ಬರು ವ್ಯಕ್ತಿಗಳನ್ನೂ ಇದಕ್ಕೂ ಮೊದಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದ ತಕ್ಷಣ ಸದಾನಂದ ಶೇರಿಗಾರ್ ತನ್ನ ಸಹೋದರ ರವಿಶಂಕರ್ ಎಂಬಾತನಿಗೆ ಫೋನ್ ಮಾಡಿ ತಾನು ನಾಪತ್ತೆಯಾಗಿರುವುದಾಗಿ ಪೊಲೀಸ್ ಠಾಣೆಗೆ ದೂರು ನೀಡುವಂತೆ ಸೂಚಿಸಿದ್ದ. ಆದರೆ ಸಹೋದರ ಪೊಲೀಸರಿಗೆ ದೂರು ನೀಡಿರಲಿಲ್ಲ. ಬಳಿಕ ಸದಾನಂದ ತನ್ನ ಸ್ನೇಹಿತ ನಿಗೂ ಮಿಸ್ಸಿಂಗ್ ಕಂಪ್ಲೇಂಟ್ ಕೊಡುವಂತೆ ಹೇಳಿದ್ದ. ಆದರೆ ಇಬ್ಬರೂ ಇವನ ಖತರ್ನಾಕ್ ಬುದ್ಧಿ ತಳಿದಿದ್ದರಿಂದ ಆತ ಹೇಳಿದ್ದನ್ನು ನಿರ್ಲಕ್ಷಿಸಿದ್ದರು ಎನ್ನಲಾಗಿದೆ.

ಪೊಲೀಸರ ಕ್ಷಿಪ್ರ ಕಾರ್ಯಾಚರಣೆ:
ತನಿಕೆಯ ಜಾಡು ಹಿಡಿದು ಹೊರಟ ಬೈಂದೂರು ಪೊಲೀಸರು ಫಾರೆನ್ಸಿಕ್ ತಜ್ಞರ ಸಹಾಯದಿಂದ ಪತ್ತೆಹಚ್ಚಲಾದ ಚಸ್ಸಿ ನಂಬರ್ ಮೂಲಕ ಕಾರಿನ ಮಾಲಕನ್ನು ಪತ್ತೆ ಹಚ್ಚಿದ್ದಾರೆ. ಮಂಗಳವಾರ ರಾತ್ರಿ 12.30ರ ಸುಮಾರಿಗೆ ಅದೇ ಕಾರು ಸಾಸ್ತಾನ ಟೋಲ್ ಗೇಟಿನಲ್ಲಿ ಬೈಂದೂರು ಕಡೆಗೆ ತೆರಳಿರುವುದು ದೃಡಪಟ್ಟಿದ್ದಲ್ಲದೇ, ಟೋಲ್ ಗೇಟಿನಲ್ಲಿ ಮಹಿಳೆಯೋರ್ವಳು ಕಾರಿನಿಂದ ಇಳಿದು ಟೋಲ್ ನೀಡಿರುವ ದೃಶ್ಯ ಸೆರೆಯಾಗಿತ್ತು. ಅದರ ಆಧಾರದಲ್ಲಿ ಕಾರ್ಕಳ ಹಾಗೂ ಮೂಡುಬಿದಿರೆಗೆ ತೆರಳಿದ ಬೈಂದೂರು ಪೊಲೀಸ್ ತಂಡ ಮೊದಲು ಸದಾನಂದನಿಗೆ ಸಹಾಯ ಮಾಡಿದ್ದ ಆತನ ಇಬ್ಬರು ಸಂಬಂಧಿಗಳನ್ನು ವಶಕ್ಕೆ ಪಡೆದಿದ್ದಾರೆ. ಗುರುವಾರ ಬೆಳಿಗ್ಗೆ ಸದಾನಂದ ಹಾಗೂ ಶಿಲ್ಪಾಳನ್ನು ಬಂಧಿಸಿದ್ದಾರೆ. ಒಂದೇ ದಿನದಲ್ಲಿ ಪ್ರಕರಣ ಭೇದಿಸಿದ ಪೊಲೀಸರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉಡುಪಿ ಎಸ್‌ಪಿ ವಿಷ್ಣುವರ್ದನ್ ಅವ ಮಾರ್ಗದರ್ಶನದಲ್ಲಿ, ಎಎಸ್‌ಪಿ ಸಿದ್ಧಲಿಂಗಪ್ಪ ಹಾಗೂ ಡಿವೈಎಸ್‌ಪಿ ಶ್ರೀಕಾಂತ್ ಕೆ. ಅವರ ನಿರ್ದೇಶನದಲ್ಲಿ, ಬೈಂದೂರು ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ ಅವರ ನೇತೃತ್ವದಲ್ಲಿ ಬೈಂದೂರು ಪಿಎಸ್‌ಐ ಪವನ್ ನಾಯಕ್ ಗಂಗೊಳ್ಳಿ ಪಿಎಸ್‌ಐ ವಿನಯ ಕೊರ್ಲಹಳ್ಳಿ, ಪೊಲೀಸ್ ಕಾನ್ಸ್‌ಟೇಬಲ್‌ಗಳಾದ ನಾಗೇಂದ್ರ, ಮೋಹನ, ಕೃಷ್ಣ, ಶ್ರೀಧರ, ಪ್ರಿನ್ಸ್, ಚಂದ್ರ ಗಂಗೊಳ್ಳಿ, ಚಾಲಕ ಚಂದ್ರಶೇಖರ್, ಸುಜಿತ್, ಶ್ರೀನಿವಾಸ್, ಶಾಂತರಾಮ ಶೆಟ್ಟಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ:
► ಬೈಂದೂರು: ಸುಟ್ಟು ಕರಕಲಾದ ಸ್ಥಿತಿಯಲ್ಲಿ ವ್ಯಕ್ತಿ – ಕಾರು ಪತ್ತೆ – https://kundapraa.com/?p=60500 .
► ನಿದ್ರೆ ಮಾತ್ರೆ ತಿನ್ನಿಸಿ ಕಾರು ಸಹಿತ ಬೆಂಕಿ ಹಚ್ಚಿ ಕೊಲೆ. ನಾಲ್ವರು ವಶಕ್ಕೆ – https://kundapraa.com/?p=60568 .

Leave a Reply

Your email address will not be published. Required fields are marked *

18 − 8 =