Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಶ್ರೀ ವಿಶ್ವಕರ್ಮ ಸಮಾಜ: ವಾರ್ಷಿಕೋತ್ಸವ, ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆಗೆ ಸನ್ಮಾನ

ಬೈಂದೂರು: ಪ್ರತಿಯೊಬ್ಬರೂ ತಮ್ಮ ದುಡಿಮೆಯ ಒಂದು ಭಾಗವನ್ನು ಸತ್ಕಾರ್ಯಗಳಿಗೆ ಸದ್ವಿನಿಯೋಗ ಮಾಡಬೇಕು. ಸಮಾಜದಲ್ಲಿ ಮಾಡಿದ ಉತ್ತಮ ಕಾರ್ಯಗಳ ಹೆಜ್ಜೆಯ ಗುರುತುಗಳು ಮಾತ್ರ ಕೊನೆಯಲ್ಲಿ ಉಳಿಯುವುದೆ ಹೊರತು ಗಳಿಸಿದ ಸಂಪತ್ತಲ್ಲ. ಅಸಹಾಯಕರಿಗೆ ಸಹಾಯ ಮಾಡುವುದು ಮಾನವೀಯ ಧರ್ಮ ಎಂದು ಉಪ್ರಳ್ಳಿ ಶ್ರೀಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಬಡಾಕೆರೆ ಮಂಜುನಾಥ ಆಚಾರ್ಯ ಹೇಳಿದರು.

ಬೈಂದೂರು ರೋಟರಿ ಭವನದಲ್ಲಿ ನಡೆದ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಆರನೇ ವರ್ಷದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.  ಈ ಶರೀರವನ್ನು ಪರೋಪಕ್ಕಾರಕ್ಕಾಗಿ ಹಾಗೂ ಸಮಾಜದ ಸೇವೆಗಾಗಿ ಭಗವಂತ ಸೃಷ್ಠಿಸಿದ್ದಾನೆ. ನಮ್ಮ ಪರಂಪರೆಯಿಂದ ಬಂದ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಆ ನೆಲೆಯಲ್ಲಿ ನಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಬದುಕಿನ ಸಾರ್ಥಕತೆ ಕಾಣುವಂತಾಗಬೇಕು ಎಂದರು.

ಬೈಂದೂರು ಶ್ರೀವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ನಾರಾಯಣ ಆಚಾರ್ಯ ಅಧ್ಯಕ್ಷತೆವಹಿಸಿದ್ದರು. ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ಎಂ. ಸುಕುಮಾರ್ ಶೆಟ್ಟಿ ಶುಭಹಾರೈಸಿದರು. ಮುಂಬೈ ಉದ್ಯಮಿ ಕೂರ್ಸಿ ಸುರೇಶ ಆಚಾರ್ಯ ಸಮಾಜದ ವಿಕಲಚೇತನರಿಗೆ ಸಹಾಯಧನ ವಿತರಿಸಿದರು. ಯಕ್ಷಗಾನ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ಇವರಿಗೆ ಸನ್ಮಾನಿಸಲಾಯಿತು. ವಲಯದ ವಿವಿಧ ಗ್ರಾಮಗಳಲ್ಲಿ ಸಮುದಾಯದ ಸದಸ್ಯರಿಗೆ ನಡೆದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಭಟ್ಕಳ ಜಾಮಿಯಾ-ಜಾಲಿ ಸರಕಾರಿ ಉರ್ದು ಪ್ರೌಢಶಾಲಾ ಮುಖ್ಯಶಿಕ್ಷಕಿ ನಯನಾ ಆಚಾರ್ಯ, ತಳಿ ಚಂದ್ರಯ್ಯ ಆಚಾರ್ಯ, ತಾಲೂಕು ಕಾರ್ಪೆಂಟರ್ ಯೂನಿಯನ್ ಅಧ್ಯಕ್ಷ ರುದ್ರಯ್ಯ ಆಚಾರ್ಯ ಬೀಜಾಡಿ ಉಪಸ್ಥಿತರಿದ್ದರು. ಬೈಂದೂರು ವಿಶ್ವನಾಥ ಆಚಾರ್ಯ ಸ್ವಾಗತಿಸಿ, ಉಪ್ಪುಂದ ವಿಶ್ವನಾಥ ಆಚಾರ್ಯ ನಿರೂಪಿಸಿದರು. ನಾಗರಾಜ ಆಚಾರ್ಯ ವಂದಿಸಿದರು.  ನಂತರ ಸಮಾಜದ ವಿದ್ಯಾರ್ಥಿಗಳಿಂದ ನೃತ್ಯ ಹಾಗೂ ಆಯ್ದ ವಿಶ್ವಕರ್ಮ ಯಕ್ಷಗಾನ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.

Exit mobile version