Kundapra.com ಕುಂದಾಪ್ರ ಡಾಟ್ ಕಾಂ

ತಾ.ಪಂ ಸಾಮಾನ್ಯ ಸಭೆ: ಪ್ರಶ್ನೆಯಾಗಿಯೇ ಉಳಿದ ಸಮಸ್ಯೆಗಳು. ಉತ್ತರ ಸಿಕ್ಕರೂ ಪರಿಹಾರವಿಲ್ಲ!

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪರವಾನಿಗೆ ದೊರೆತರೂ ಬಸ್ ಓಡಲಿಲ್ಲ, ವಾರಾಹಿ ಗೊಂದಲವೂ ಬಗೆಹರಿಯಲಿಲ್ಲ. ಅಧಿಕಾರಿಗಳನ್ನೂ ಸಾಮಾನ್ಯ ಸಭೆಗೆ ಕರೆಸಲಾಗಿಲ್ಲ. ಗೂಡಂಗಡಿಗಳಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಮಧ್ಯ ಮಾರಾಟ ನಿಲ್ಲಲಿಲ್ಲ. ಹೊಸ್ಕೋಟೆ ಶಾಲೆ ಹೆಸರಿಗೆ ಜಾಗ ಸಿಕ್ಕರೂ ಇನ್ನೂ ಅಳತೆ ಮಾಡಿಲ್ಲ. ಕಸ್ತೂರಿ ರಂಗನ್ ವರದಿಯಿಂದ ಬೇಸತ್ತ ಸದಸ್ಯರು ನೀಡಿದ ರಾಜಿನಾಮೆಯೂ ಅಂಗೀಕಾರವಾಗಿಲ್ಲ!

ಕುಂದಾಪುರ ತಾಲೂಕ್ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೊನೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರುಗಳು ವಿಷಯ ಪ್ರಸ್ತಾಪಿಸುತ್ತಾ ತಮ್ಮ ವಿಷಾದ ವ್ಯಕ್ತಪಡಿಸಿದ ಪರಿಯಿದು. ತಾಲೂಕು ಪಂಚಾಯತ್ ನಲ್ಲಿ ಐದು ವರ್ಷದ 32 ಸಾಮಾನ್ಯ ಸಭೆಗಳಲ್ಲಿ ಬಹುಪಾಲು ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಉತ್ತರ ದೊರೆತಿದೆಯೇ ಹೊರತು ಈವರೆಗೆ ಪರಿಹಾರ ಕಂಡಿಲ್ಲ. ಪ್ರಶ್ನೋತ್ತರ ಕಲಾಪದಿಂದ ಸಾಧಿಸಿದ್ದೇನು ಇಲ್ಲ ಎಂದು ಕೆಲವರು ಅವಲತ್ತುಕೊಳ್ಳುತ್ತಿದ್ದರು.

ಗ್ರಾಮೀಣ ಭಾಗದಲ್ಲಿ ಸಾರಿಗೆ ವಾಹನ ಸಂಚಾರಕ್ಕೆ ಪರವಾನಿಗೆ ಸಿಕ್ಕಿದ್ದು, ಟೈಮಿಂಗ್ ಸಿಗದೆ ಬಸ್ ಸಂಚಾರ ಇಲ್ಲ. ಕೊನೆ ಸಾಮಾನ್ಯ ಸಭೆಯಲ್ಲಿ ಬಸ್ ಸಂಚಾರಕ್ಕೆ ಒತ್ತು ಕೊಡುವಂತೆ ನಿರ್ಣಯ ಮಾಡಿ ಅದರ ಕಾಫಿ ನಮಗೆ ನೀಡಿ. ಬಸ್ ಸಂಚಾರದ ಬಗ್ಗೆ ಮುಂದೆ ಹೋರಾಟ ಮಾಡಲು ಅನುಕೂಲವಾಗುತ್ತದೆ ಎಂದು ಸದಸ್ಯ ರಾಜು ಪೂಜಾರಿ, ಹೇಮಾವತಿ ಪೂಜಾರಿ ಮತ್ತು ರಾಮ ಕೆ. ಒತ್ತಾಯಿಸಿದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಗೂಡಂಗಡಿಯಲ್ಲಿ ಮಧ್ಯ ಮಾರಾಟದ ಬಗ್ಗೆ ತಾಪಂ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದ್ದಕ್ಕೆ ಮದ್ಯಮಾರಾಟ ಕ್ವಾಟರ್ ಬಾಟಲಿ ಬಿಕಿರಿ ಆಗುವುದು ಹೆಚ್ಚಿದ್ದು ಬಿಟ್ಟರೆ ಮತ್ತೇನು ಆಗಿಲ್ಲ. ಬೇರೆ ಬೇರೆ ಕಡೆ ರೈಡ್ ಮಾಡಿ, ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಿದ್ದರೂ ಕುಂದಾಪುರದ ಕೆಲವು ಕಡೆ ಮದ್ಯ ಮಾರಾಟ ನಿರಂತರ ಎಂದು ಸದಸ್ಯರ ಅವತ್ತುಕೊಂಡಿದ್ದು, ಮದ್ಯ ಮಾರಾಟ ವಿರುದ್ಧ ಸಂಘ-ಸಂಸ್ಥೆ ಜೊತೆ ಸೇರಿ ಜನ ಜಾಗೃತಿ ಮೂಡಿಸುವಂತೆ ಸಲಹೆ ಮಾಡಿದರು. ಹೊಸ್ಕೋಟೆ ಶಾಲೆಗೆ ಸ್ಥಳ ಮಂಜೂರಾಗಿದ್ದರೂ, ಅಳತೆ ಆಗಿಲ್ಲ. ಅಳತೆ ಮಾಡಲು ಸರ್ವೆಯರು ಬಂದರೆ ಸ್ಥಳಿಯ ಮಹಿಳೆಯೊಬ್ಬರು ಕತ್ತುಹಿಡಿದು ಆವಾಜ್ ಹಾಕುತ್ತಾರೆ. ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಿಗೂ ಮತ್ತು ಶಿಕ್ಷಕರಿಗೂ ಬೆದರಿಕೆ ಹಾಕಲಾಗುತ್ತಿದೆ. ಪೊಲೀಸ್ ರಕ್ಷಣೆ ಪಡೆದು ಸರ್ವೆಕಾರ‍್ಯ ನಡೆಯಬೇಕು ಎಂದು ಸದಸ್ಯೆ ಗೌರಿ ದೇವಾಡಿಗ ಒತ್ತಾಯಿಸಿದರು.

ಬೈಂದೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಮಸ್ಯೆ ಪರಿಹಾರವಾಗಿದ್ದರೂ ವಿದ್ಯುತ್ ಸಮಸ್ಯೆ ದುತ್ತೆಂದು ತಲೆದೋರಿದೆ. ವಿದ್ಯುತ್ ಶಾರ್ಟ್ ಸಕ್ಯೂಟ್‌ನಿಂದ ವಿದ್ಯುತ್ ಸಮಸ್ಯೆ ಕಳೆದ ಎರಡು ತಿಂಗಳಿಂದ ಆಗುತ್ತಿದ್ದರೂ, ಪರಿಹಾರ ಸಿಕ್ಕಿಲ್ಲ. ವಿದ್ಯುತ್ ಇಲ್ಲದೆ ವೈದ್ಯರು ಕೆಲಸ ಮಾಡುವುದಾದರೂ ಹೇಗೆ. ತಕ್ಷಣ ಶಾರ್ಟ್ ಸರ್ಕ್ಯೂಟ್ ಸಮಸ್ಯೆ ಪರಿಹರಿಸುವಂತೆ ರಾಜು ಪೂಜಾರಿ ಒತ್ತಾಯಿಸಿದರು. ಕೊನೆ ಸಭೆಯಲ್ಲಾದರೂ ಕಸ್ತೂರಿ ರಂಗನ್ ವರದಿ ಬಗ್ಗೆ ಸಂಸದರ ಮನವಲಿಸುವ ಪ್ರಯತ್ನ ನಡೆದು, ಭಾದಿತ ಜನರಿಗೆ ನ್ಯಾಯ ಒದಗಿಸಬೇಕು ಎಂದು ಸದಸ್ಯ ಹರ್ಕೂರು ಮಂಜಯ್ಯ ಶೆಟ್ಟಿ ಮತ್ತು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ನವೀಚಂದ್ರ ಶೆಟ್ಟಿ ಒತ್ತಾಯಿಸಿದರು.

ಕುಂದಾಪುರ ತಾಪಂ ಅಧ್ಯಕ್ಷ ಭಾಸ್ಕರ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಾಗೇಶ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ ಮತ್ತು ಕಾರ್ಯನಿರ್ವಹಣಾಧಿಕಾರಿ ನಾರಾಯಣ ಸ್ವಾಮಿ ಇದ್ದರು.

Exit mobile version