Kundapra.com ಕುಂದಾಪ್ರ ಡಾಟ್ ಕಾಂ

ಸೈಂಟ್ ಮೇರೀಸ್ ದ್ವೀಪದತ್ತ ಒಂದು ಪಯಣ

ನಾಗರಾಜ ಪಿ. ಯಡ್ತರೆ.

ಈ ಬಾರಿಯ ಸಾಲು ಸಾಲು ರಜೆಯಲ್ಲಿ ನನ್ನ ಬಹುದಿನದ ಕನಸಿನಂತೆ ಸೈಂಟ್ ಮೇರೀಸ್ ದ್ವೀಪಕ್ಕೆ ಪ್ರವಾಸ ಹೋಗುವ ಬಗ್ಗೆ ಒಂದು ಪ್ಲಾನ್ ಹಾಕಿಕೊಂಡೆವು. ಬಹಳ ವರ್ಷಗಳ ಹಿಂದೆ ಓದಿದ ’ನಿಸರ್ಗದ ಕನ್ಯೆ ಅಂಡಮಾನ್’ ಎಂಬ ಪುಸ್ತಕವು ನನಗೆ ಈ ದ್ವೀಪ ಸಮೂಹಗಳ ಬಗ್ಗೆ, ವಿಸ್ತಾರವಾಗಿ ಹರಡಿದ ಶರಧಿಯ ಮುಕುಟದಂತೆ ಎದ್ದಿರುವ ನಡುಗಡ್ಡೆಯ ಬಗ್ಗೆ ಅಗಾಧ ಕುತೂಹಲವನ್ನೂ, ಅಲ್ಲಿ ನಿಂತು ನಮ್ಮ ತಾಯಿನಾಡನ್ನು ನೋಡಬೇಕೆಂಬ ಬಯಕೆಯನ್ನೂ ಹಾಗೂ ಈ ದ್ವೀಪಗಳ ನಿಗೂಢತೆಯನ್ನು ಆಸ್ವಾದಿಸಬೇಕೆಂಬ ಕಾತರವನ್ನೂ ಹುಟ್ಟು ಹಾಕಿತ್ತು. ಆದರೆ ಅಂಡಮಾನ್‌ಗೆ ಹಡಗಿನಲ್ಲಿ ವಾರಗಟ್ಟಲೆ ಪಯಣ ನಮಗೆ ಕಷ್ಟಸಾಧ್ಯವಾದ್ದರಿಂದ, ನಮ್ಮ ಸಮೀಪದ ಮಲ್ಪೆಯ ಸನಿಹದಲ್ಲಿರುವ ಪ್ರವಾಸಿತಾಣ ಸೈಂಟ್ ಮೇರೀಸ್ ದ್ವೀಪಕ್ಕೆ ನಾನು, ನನ್ನ ಸ್ನೇಹಿತರಾದ ಸುರೇಶ್, ರಾಘವೇಂದ್ರ ಮತ್ತು ಸುನಿಲ್ ಒಟ್ಟು ನಾಲ್ಕು ಜನ ಹೊರೆಟೆವು. ಇದೇನೂ ನಮ್ಮ ಮೊದಲ ಪ್ರವಾಸವಲ್ಲ. ಈವರೆಗೆ ನಮ್ಮ ಜಿಲ್ಲೆಯ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಅನೇಕ ಕೋಟೆಕೊತ್ತಲ, ಗಿರಿ ಶಿಖರ ಹಾಗೂ ಪ್ರಾಚೀನ ದೇವಸ್ಥಾನಗಳಿಗೆ ಆಗಾಗ ಹೋಗಿ ಬರುತ್ತಿರುವ ನಮಗೆ ಇದು ಮಾತ್ರ ಹೊಸ ಅನುಭವ. ಯಾಕೆಂದರೆ ಇದೊಂದು ಸಮುದ್ರ ಪಯಣ ಮತ್ತು ಎಲ್ಲರಿಗೂ ಹೊಸ ಸ್ಥಳ.

ಪ್ರತಿ ಬಾರಿಯಂತೆ ಈ ಬಾರಿಯೂ ಸ್ವಲ್ಪ ಮುಂಜಾಗ್ರತೆಗಾಗಿ ಮಲ್ಪೆ ಅಭಿವೃದ್ಧಿ ಸಮಿತಿಯ ಫೋನ್‌ನಂಬರ್‌ನ್ನು ಇಂಟರ್‌ನೆಟ್‌ನಲ್ಲಿ ಹುಡುಕಿ ಪ್ರವಾಸಿ ಇಲಾಖಾ ಬೋಟ್‌ನ ಸಮಯ ಮತ್ತು ದಿನಾಂಕವನ್ನು ಮೊದಲೇ ದೂರವಾಣಿ ಮುಖಾಂತರ ತಿಳಿದುಕೊಂಡಿದ್ದೆವು. ಅಲ್ಲಿನ ಆಫೀಸ್ ಹುಡುಗಿಯಂತೂ ದೂರವಾಣಿಯಲ್ಲಿ ಬಹಳ ತಾಳ್ಮೆಯಿಂದ ನಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ ಒಬ್ಬರಿಗೆ ಕೇವಲ ರೂಪಾಯಿ 110 ಮಾತ್ರ ಎಷ್ಟು ಹೊತ್ತು ಬೇಕಾದರೂ ದ್ವೀಪದಲ್ಲಿರಬಹುದು. ಯಾವ ಬೋಟ್‌ನಲ್ಲಿ ಬೇಕಾದರೂ ವಾಪಾಸ್ ಬರಬಹುದೆಂದು ಹೇಳಿ ನಮ್ಮ ಕುತೂಹಲವನ್ನು ಇನ್ನಷ್ಟು ಹೆಚ್ಚು ಮಾಡಿದ್ದಳು. ಅಂತು ಹೊರಡುವ ದಿನ ಬೆಳಿಗ್ಗೆ ಎಲ್ಲರೂ ಬೇಗನೆ ಹೊರಡಬೇಕೆಂದು ಹೇಳಿದ್ದೆ. ಯಾಕೆಂದರೆ ಬೆಳಿಗ್ಗೆ 9 ಗಂಟೆಗೆ ಮೊದಲ ಬೋಟ್ ಹೊರಡುತ್ತೆ. ಅಂದರೆ ನಾವು 9 ಗಂಟೆ ಒಳಗೆ ಅಲ್ಲಿರಬೇಕು. ಬೈಂದೂರಿನಿಂದ ಮಲ್ಪೆಗೆ ಹೋಗಬೇಕಾದ್ದರಿಂದ ಬೇಗನೆ ಹೊರಟೆವು.

ನಾವು ಉಡುಪಿಯಿಂದ ಮಲ್ಪೆಗೆ ಇನ್ನೊಂದು ಬಸ್ ಹತ್ತಿ ಹೊರಟೆವು. ಸೈಂಟ್ ಮೇರೀಸ್ ದ್ವೀಪಕ್ಕೆ ಹೋಗುತ್ತಿರುವುದು ಇದೇ ಮೊದಲ ಬಾರಿಯಾದ್ದರಿಂದ ನಮಗೆ ಹಾರ್ಬರ್ (ಬಂದರು) ಗೆ ಹೋಗಬೇಕಾ ಅಥವಾ ಬೀಚ್‌ಗೆ ಹೋಗಬೇಕಾ ಅಂತ ಗೊತ್ತಾಗದೆ, ಬಸ್ ಕಂಡಕ್ಟರ್‌ನಲ್ಲಿ ವಿಚಾರಿಸಿದೆ. ಅವನು ಬೀಚ್‌ಗೆ ಹೋಗಬೇಕು ಎಂದು, ಬಸ್ ಬೀಚ್‌ನ ಮುಖಾಂತರ ತೊಟ್ಟಂಗೆ ಹೋಗುವುದರಿಂದ ಅಲ್ಲೇ ಇಳಿಬಹುದು ಎಂಬ ಸಲಹೆ ಕೊಟ್ಟ. ಅಂತೂ ನಾವು ಬೀಚ್‌ನ ಬಳಿ ಇಳಿದು ನಡೆದುಕೊಂಡು ಬೀಚ್‌ನಲ್ಲಿ ಎಲ್ಲಿ ಬೋಟ್ ಹತ್ತುವುದು ಎಂದು ನೋಡುತ್ತಿರುವಾಗ ಅಲ್ಲೇ ಬೋರ್ಡ್ ಇತ್ತು. ಒಬ್ಬಾತ ಒಂದು ಕುರ್ಚಿ ಇಟ್ಟುಕೊಂಡು ಟಿಕೆಟ್ ಕೊಡುತ್ತಾ ಇದ್ದ. ಸಣ್ಣ ಸಣ್ಣ ಬೋಟ್‌ಗಳು ಸಮುದ್ರದಲ್ಲಿ ಹೋಗಿ, ಬರುತ್ತಾ ಇದ್ದವು. ನಾನು ಹೋಗಿ ಟಿಕೆಟ್ ಒಬ್ಬರಿಗೆ ಎಷ್ಟು ಎಂದು ವಿಚಾರಿಸಿದೆ. 150 ರೂಪಾಯಿ ಎಂದ! ಅರೆ ! ನಿನ್ನೆ ಕೇಳಿದಾಗ ಆಫೀಸ್ ಹುಡುಗಿ 110 ರೂಪಾಯಿ ಹೇಳಿದ್ದಳು! ನಾನು ಅಷ್ಟರಲ್ಲಿ ಬೀಚ್ ಪಕ್ಕದ ಕ್ಯಾಂಟೀನ್‌ನಲ್ಲಿ ಟೀ ಕುಡಿಯುತ್ತಾ ನಿಂತ ಸ್ನೇಹಿತ ಸುರೇಶ್‌ನಿಗೆ ಹೇಳಿದೆ. ಸುರೇಶ್ ಪಕ್ಕಾ ಲೆಕ್ಕದ ಮನುಷ್ಯ. ನಿನ್ನೆ ಫೋನ್ ಮಾಡಿದ ನಂಬರ್‌ಗೆ ಫೋನ್ ಮಾಡು ಎಂದ. ಫೋನ್ ಮಾಡಿದೆ, ಆಗ ನಮ್ಮ ಲೆಕ್ಕಾಚಾರ ತಲೆಕೆಳಗಾದದ್ದು ಗೊತ್ತಾಯಿತು. ಹುಡುಗಿ ಹೇಳಿದಳು, ’ಇಲಾಖೆ ಬೋಟ್ ಹೊರಡೋದು ಹಾರ್ಬರ್‌ನಿಂದ ಅದು ದೊಡ್ಡ ಬೋಟ್. ನೀವು ಈಗ ಇದ್ದದ್ದು ಬೀಚ್‌ನಲ್ಲಿ ಅಲ್ಲಿ ಸಣ್ಣ ಪ್ರೈವೆಟ್ ಬೋಟ್ ಹೊರಡುತ್ತೆ, ಪುನಃ ಹಾರ್ಬರ್‌ಗೆ ಬನ್ನಿ’ ಎಂದಳು. ನಾವು ಈಗಾಗಲೇ ಹಾರ್ಬರ್‌ನಿಂದ ಒಂದು ಕಿ.ಮೀ. ದೂರದ ಬೀಚ್‌ಗೆ ಬಂದು ’ಅಬ್ಬೆಪ್ಯಾರಿ’ ಆಗಿದ್ದೆವು.

ಅಲ್ಲಿಂದ ರಿಕ್ಷಾ ಹಿಡಿದು ಪುನಃ ಹಾರ್ಬರ್‌ಗೆ ಬರುವಷ್ಟರಲ್ಲಿ ಮೊದಲ ಬೋಟ್ ಹೊರಟಾಗಿತ್ತು. ಕೌಂಟರ್‌ನಲ್ಲಿ ವಿಚಾರಿಸಿದಾಗ ಸ್ವಲ್ಪ ಹೊತ್ತು ಕಾಯಿರಿ 30 ಜನ ಆದ ಕೂಡಲೇ ಇನ್ನೊಂದು ಬೋಟ್ ಹೊರಡುತ್ತೆ ಎಂದರು. ನಮಗೀಗ 30 ಜನ ಲೆಕ್ಕ ಹಾಕುವ ಕೆಲಸ ಪ್ರಾರಂಭವಾಯಿತು. ಆಗಲೇ 8-10 ಜನ ಬೆಂಗಳೂರು ಬೆಡಗಿಯರು ತಮ್ಮ ವಿಚಿತ್ರ ಉಡುಪಿನೊಂದಿಗೆ ಕಾಯುತ್ತಾ ಇದ್ದರು. ಸುನೀಲ್ ಅಲ್ಲೇ ಹಾರ್ಬರ್‌ನಲ್ಲಿ ರೀಪೇರಿಗೆ ಬಂದ ದೊಡ್ಡ ಬೋಟೊಂದರ ಫೋಟೋ ತೆಗೆಯುತ್ತಾ ನಿಂತಿದ್ದ. ನಾಲ್ಕೈದು ದಿನ ಸರ್ಕಾರಿ ರಜೆ ಇದ್ದುದರಿಂದ ತುಂಬಾ ಪ್ರವಾಸಿಗರು ಬರುತ್ತಾ ಇದ್ದರು. ನಾನು ದ್ವೀಪಕ್ಕೆ ಹೋಗಲು ಟಿಕೆಟ್ ಕೌಂಟರ್ ಹತ್ತಿರ ನಿಂತಿದ್ದ ಜನರನ್ನು ಪರಿಚಯಕ್ಕಾಗಿ ಮಾತಾಡಿಸುತ್ತಾ ಇದ್ದೆ. ಬಹುತೇಕರು ಬೆಂಗಳೂರಿನಿಂದ ಬಂದವರು, ಅವರಿಗೆ ಸಮುದ್ರವೇ ಒಂದು ಅಚ್ಚರಿ, ಅದರಲ್ಲೂ ಬೋಟಿನಲ್ಲಿ ಸಮುದ್ರ ಮಧ್ಯದ ದ್ವೀಪಕ್ಕೆ ಹೋಗುವುದೆಂದರೆ ಇನ್ನಷ್ಟು ರೋಮಾಂಚನ. ಪ್ರವಾಸಿಗರಲ್ಲಿ ಹೆಚ್ಚಿನವರು ದೂರದೂರದ ಪಟ್ಟಣದಿಂದ ಬಂದ ಕನ್ಯೆಯರೇ ಹೆಚ್ಚು. ಇನ್ನುಳಿದವರು ಆನೆಗಾತ್ರದ ಆಂಟಿಯರು ಅವರೊಂದಿಗೆ ಅವರ ಗಂಡಂದಿರು, ಎಲ್ಲಾ ಗಂಭೀರ ಮುಖಭಾವದಲ್ಲಿ ನಿಂತಿದ್ದರು. ಆಗಲೇ ಜನ 30 ರ ಹತ್ತಿರ ಆಯಿತು. ಟಿಕೆಟ್ ಕೊಟ್ಟರು ನಾವೆಲ್ಲಾ ಬೋಟಿನಲ್ಲಿ ಕುಳಿತೆವು. 30 ಜನ ಅಂದದ್ದು ಹತ್ತು ನಿಮಿಷದಲ್ಲಿ ೫೦ ಜನರ ಹತ್ತಿರ ಆಯಿತು. ಎಲ್ಲರೂ ಹೊರಡೋಣ ಎಂದು ಹೇಳಿತ್ತಿದ್ದರು. ಇಷ್ಟು ಹೊತ್ತು ಮಾತಾಡದ ಪ್ರವಾಸಿಗರು ಬೋಟ್‌ನಲ್ಲಿ ಕುಳಿತ ಕೂಡಲೇ ಎಲ್ಲರೂ ಪರಿಚಯವಾಗಿ ಮಾತನಾಡಲು ಪ್ರಾರಂಭಿಸಿದರು. ಚಿಕ್ಕ ಮಕ್ಕಳಿಗೆ ಎಲ್ಲರೂ ಸುರಕ್ಷಿತ ಜಾಗದಲ್ಲಿ ಕುಳಿತುಕೊಳ್ಳುವಂತೆ ಹೇಳುತ್ತಿದ್ದರು. ಬೋಟ್‌ನಲ್ಲೆ ಕೆಲವರು ಐಸ್‌ಕ್ರೀಮ್, ಪೆಪ್ಸಿ ಕೊಂಡರು. ಬೋಟ್ ಸ್ಟಾರ್ಟ್ ಆಗಿ ಇನ್ನೇನು ಹೊರಡಬೇಕು ಎನ್ನುವುದರಲ್ಲಿ 3-4 ಜನ ಬೆಂಗಳೂರಿನ ಕಿಲಾಡಿ ಅಂಕಲ್‌ಗಳು ಓಡೋಡಿ ಬಂದು ಬೋಟ್ ಹತ್ತಿಕೊಂಡರು. ಯಾಕೆ ಅವರನ್ನು ಕಿಲಾಡಿ ಎಂದೆ ಅಂದರೆ ಅವರು ಜೀವನವನ್ನು ಎಂಜಾಯ್ ಮಾಡಲೆಂದೇ ಬದುಕಿದವರು ಅನ್ನಿಸುತ್ತದೆ. ಅಷ್ಟು ಚಟುವಟಿಕೆಯಿಂದ ಎಲ್ಲರನ್ನೂ ಮಾತಾಡಿಸಿ ಪರಿಚಯ ಮಾಡಿಕೊಂಡು , ಜೋಕ್ ಹೇಳಿ ಎಲ್ಲರನ್ನು ನಗಿಸುತ್ತಿದ್ದರು.

ಬೋಟ್ ಹೊರಟಿತು ಮಲ್ಪೆಯಿಂದ ಸೈಂಟ್ ಮೇರೀಸ್ ದ್ವೀಪಕ್ಕೆ 30 ನಿಮಿಷ ಸಮುದ್ರ ಪಯಣ. ನಮ್ಮ ಬೋಟ್ ನಿಧಾನವಾಗಿ ಮೈನ್‌ಲ್ಯಾಂಡ್ ಬಿಟ್ಟು ಸಮುದ್ರ ಪಯಣ ಹೊರಟಿತು. ನಮ್ಮ ಬೋಟ್ ತನ್ನೊಂದಿಗೆ ಅಷ್ಟು ಜನರನ್ನಲ್ಲದೆ ದ್ವೀಪದ ಸನಿಹದವರೆಗೆ ನಮ್ಮನ್ನು ತಲುಪಿಸಲು ಚಿಕ್ಕ ಸಪೋರ್ಟಿಂಗ್ ಬೋಟ್‌ನ್ನೂ ಜೊತೆಯಲ್ಲಿ ಕರೆದುಕೊಂಡು ಹೊರಟಿತು. ಸುತ್ತ ನಿಶ್ಚಲವಾದ ಅಗಾಧ ಸಮುದ್ರ , ನೀರಿನ ಆಳ ಮತ್ತು ಆಗಾಧತೆ ಎಷ್ಟಿತೆಂದರೆ ನೀಲಿಬಣ್ಣದ ದ್ರವರೂಪದ ನೀರು ಪ್ಲಾಸ್ಮಾ ಸ್ಥಿತಿಯಲ್ಲಿ ಇದೆಯೇನೋ ಎಂಬಂತ್ತಿತ್ತು. ಎಲ್ಲಾ ಪ್ರವಾಸಿಗಳು ತಮ್ಮ ಮೊಬೈಲ್‌ನಲ್ಲಿ ಸುಂದರ ರಮಣೀಯ ದೃಶ್ಯವನ್ನು ಸೆರೆಹಿಡಿಯುತ್ತಿದ್ದರು. ನಮ್ಮ ಬೋಟ್‌ನಲ್ಲಿ ಪ್ರವಾಸಿಗಳು ಮಾತ್ರ ಅಲ್ಲದೇ, ದ್ವೀಪದಲ್ಲಿ ಚುರುಮುರಿ ಅಂಗಡಿ ಇಡುವವರು, ಪೆಪ್ಸಿ, ಕೋಲಾದಂತಹ ತಂಪು ಪಾನೀಯ ಅಂಗಡಿಯವರು ತಮ್ಮ ಸರಂಜಾಮುವಿನೊಂದಿಗೆ ನಮ್ಮೊಂದಿಗಿದ್ದರು. ನಮ್ಮ ಬೋಟ್‌ನ ಪಕ್ಕದಲ್ಲೇ 2-3 ಮೀನುಗಾರಿಕಾ ಬೋಟ್‌ಗಳು ಹಾದು ಹೋದವು. ಬೀಚ್‌ನಿಂದ ಹೊರಟ ಒಂದೆರಡು ಪ್ರೈವೆಟ್ ಬೋಟ್‌ಗಳು ಸಹ ಪಾಸಾದವು. ನಮ್ಮ ಬೋಟ್‌ನಲ್ಲಂತೂ ಚಿಕ್ಕ ಮಕ್ಕಳಂತೆ ಸ್ಕರ್ಟ್ ತೊಟ್ಟ ಆನೆಗಾತ್ರದ ಆಂಟಿಯರು ಬೋಟ್‌ನಲ್ಲಿ ಅತ್ತಿತ್ತ ತಿರುಗಾಡುತ್ತಾ ನಮಗೆ ಭಯ ಹುಟ್ಟಿಸಿದರು. ಯಾಕೆಂದರೆ ಅವರೆಲ್ಲಾ ಮಾತಾಡುತ್ತಾ ಬೋಟ್‌ನ ಒಂದೇ ಬದಿಯಲ್ಲಿ ಹೋಗಿ ನಿಂತರೆ ಬೋಟ್‌ನ ಮತ್ತು ಅದರಲ್ಲಿರುವ ನಮ್ಮ ಗತಿಯೇನು ? ನಾನು ಆಗ ಹೇಳಿದ ಕಿಲಾಡಿ ಅಂಕಲ್‌ಗಳಲ್ಲಿ ಒಬ್ಬರು ಕೈಚೀಲದಂತಹ ಒಂದು ಚೀಲವನ್ನು ಚಿಕ್ಕ ಮಕ್ಕಳಿಗಿಂತ ಹೆಚ್ಚು ಜಾಗ್ರತೆ ವಹಿಸಿ ಅಪ್ಪಿಕೊಂಡಿದ್ದರು. ಯಾಕೆಂದು ಗೊತ್ತಾಗಿಲ್ಲ, ನಂತರ ದ್ವೀಪದಲ್ಲಿ ಗೊತ್ತಾಯಿತು ಅದರ ಕಾರಣ!. ಇಷ್ಟರಲ್ಲೇ ಮೈನ್‌ಲ್ಯಾಂಡ್ ದೂರವಾಗಿ ದ್ವೀಪಕ್ಕೆ ಸನಿಹವಾಗುತ್ತಿತ್ತು. ಅಗಾಧ ಸಮುದ್ರದ ಮುಕುಟ ದಂತೆ ಹಸಿರಾಗಿ ಕಾಣಿಸುವ ದ್ವೀಪ ನಮಗೆ ಮತ್ತಷ್ಟು ಹತ್ತಿರವಾಯಿತು. ಆದರೆ ದ್ವೀಪಕ್ಕೆ ಸುಮಾರು 150 ಮೀಟರ್ ದೂರದಲ್ಲೇ ಬೋಟ್ ನಿಂತಿತು. ಯಾಕೆಂದು ನಾವು ಯೋಚಿಸುವಾಗ ಬೋಟ್‌ನ ಡ್ರೈವರ್ ನಮಗೆ ಎಲ್ಲರೂ ನಿಧಾನವಗಿ ಚಿಕ್ಕ ಬೋಟ್‌ಗೆ ಹೋಗಬೇಕೆಂದು ಹೇಳಿದರು. ಯಾಕೆಂದರೆ ದೊಡ್ಡ ಬೋಟ್ ಇನ್ನು ದ್ವೀಪದತ್ತ ಹೋಗುವುದಿಲ್ಲ. ಅಲ್ಲಿ ನೀರಿನ ಆಳ ಕಡಿಮೆ. ನಾವೆಲ್ಲಾ ನಿಧಾನವಾಗಿ ಚಿಕ್ಕ ಬೋಟ್‌ಗೆ ವರ್ಗಾವಣೆಗೊಂಡೆವು. ಚಿಕ್ಕ ಬೋಟ್ ಏದುಸಿರು ಬಿಡುತ್ತಾ ದ್ವೀಪದತ್ತ ಸಾಗಿ ಇನ್ನೂ ಮೊಣಕಾಲು ನೀರು ಇರುವಾಗಲೇ ಮುಂದೆ ಸಾಗದೇ ಅಲ್ಲೆ ನಿಂತಿತು. ಎಲ್ಲರೂ ಮೊಣಕಾಲಿಗೆ ಬರುವಷ್ಟು ನೀರಿನಲ್ಲೇ ನಡೆದು ದಡ ಸೇರಿದೆವು. ಚಿಕ್ಕ ಬೋಟ್ ಎರಡು ದೋಣೀಗಳನ್ನು ಕೂಡಿಸಿ ಮಾಡಿದ ಹಾಗೆ ಇರುವುದರಿಂದ ಎರಡು ದೋಣಿಗಳ ಮಧ್ಯೆ ನಾವು ಇಳಿಯಬೇಕಾದ್ದರಿಂದ ಅದರ ಅಗಲ ಕಿರಿದಾಗಿ ದಡೂತಿ ಗಾತ್ರದ ಹೆಂಗಸರ ಪಜೀತಿ ಹೇಳತೀರದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪ್ರವಾಸಿ ಇಲಾಖೆಯು ಜನರ ಜೀವದ ಬಗ್ಗೆ ತೀವ್ರ ನಿರ್ಲಕ್ಷ್ಯವಹಿಸಿರುವುದು. ಯಾಕೆಂದರೆ ದೊಡ್ಡ ಬೋಟ್‌ನಲ್ಲಿ ಆಗಲೀ, ಚಿಕ್ಕ ಬೋಟ್‌ನಲ್ಲೇ ಆಗಲಿ ಒಂದೂ ಲೈಫ್ ಜಾಕೆಟ್ ಇರಲಿಲ್ಲ. ಯಾವುದೇ ಜೀವರಕ್ಷಕ ಸಾಧನಗಳೂ ಇರಲಿಲ್ಲ. ಎಲ್ಲರನ್ನೂ ದೇವರೇ ಕಾಪಾಡಬೇಕು.

ದ್ವೀಪಕ್ಕೆ ಪ್ರವೇಶಿಸುತ್ತಲೇ ದೊಡ್ಡ ಗಾತ್ರದ ನೂರಾರು ತೆಂಗಿನಮರಗಳು ಸ್ವಾಗತಿಸುವಂತೆ ಕಾಣಿಸಿದವು. ಈಗಾಗಲೇ ಅನೇಕ ಪ್ರವಾಸಿಗಳು ಅಲ್ಲಿನ ಬೀಚ್‌ನಲ್ಲಿ ನೆರೆದಿದ್ದರು. ನಮಗಿಂತ ಮುಂಚೆ ಬಂದ ಚುರುಮುರಿ ಅಂಗಡಿಯವ, ಜೋಳ ಬೇಯಿಸಿ ಕೊಡುವವರು, ತಂಪು ಪಾನೀಯದವರು ವ್ಯಾಪಾರ ಪ್ರಾರಂಭಿಸಿದ್ದರು. ಆದರೆ ಅದರ ರೇಟು ಮಾತ್ರ ಗಗನಮುಖಿಯಾಗಿದ್ದವು. ಹೇಗಿದೆ ನೋಡಿ! ನಮ್ಮೊಂದಿಗೆ ಬೋಟಿನಲ್ಲಿ ಹೊರಟು ಇಲ್ಲಿ ಬಂದು ಮಾರುವಾಗ ಒಂದಕ್ಕೆರಡು ರೇಟು! ಟೋಪಿ ಚೆನ್ನಾಗಿದೆ. ಒಬ್ಬ ಆಸಾಮಿಯಂತೂ ದೊಡ್ಡ ದೊಡ್ಡ ಬಂಗಡೆ ಮೀನುಗಳನ್ನು ಪ್ರೈಮಾಡಿ ಮಾರುತ್ತಿದ್ದ. ಬೆಳಿಗ್ಗೆ ಬೆಳಿಗ್ಗೆ ಯಾರು ಬರಿ ಬಾಯಲ್ಲಿ ಮೀನು ತಿಂತಾರೋ ಗೊತ್ತಾಗಿಲ್ಲ. ನಾವೆಲ್ಲಾ ದ್ವೀಪದ ಒಳಭಾಗವನ್ನು ದಾಟಿ ದ್ವೀಪದ ಇನ್ನೊಂದು ಬೀಚ್ ಬದಿಗೆ ಬಂದೆವು. ಅಲ್ಲಿ ಅನೇಕ ಹುಡುಗಿಯರು, ಮಕ್ಕಳು ನೀರಾಟ ಆಡುತ್ತಿದ್ದರು. ಅಲ್ಲಿನ ಬಂಡೆಗಳು ನಮಗೆ ವಿಚಿತ್ರವಾಗಿ ಕಾಣಿಸಿದವು ಯಾಕೆಂದರೆ, ಅಷ್ಟು ದೊಡ್ಡ ಬಂಡೆಗಳು ನಾವು ಅಂಗಳಕ್ಕೆ ಹಾಕುವ ಇಂಟರ್‌ಲಾಕ್‌ನಂತೆ ಷಡ್ಭುಜಾಕೃತಿಯಲ್ಲಿ ಬಿರುಕು ಬಿಟ್ಟು ನಿಂತಿದ್ದವು. ಅದು ಸಹ ಒಂದೇ ಅಳತೆಯಲ್ಲಿ ಬಿರುಕುಬಿಟ್ಟು ಥೇಟು ಇಂಟರ್‌ಲಾಕ್‌ನಂತೆ ಕಾಣುತ್ತಿತ್ತು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇಷ್ಟು ಸುಂದರವಾದ ಈ ದ್ವೀಪ ಸಮೂಹದಲ್ಲಿ ಪ್ರವಾಸಿ ಇಲಾಖೆಯು ಪ್ರವಾಸಿಗಳಿಗೆ ಬಿಸಿಲಿನ ರಕ್ಷಣೆ ಪಡೆಯಲು ರಚಿಸಿದ ಚಿಕ್ಕ , ಚಿಕ್ಕ ಕುಟೀರದಂತ ವೀಕ್ಷಣಾ ಕಟ್ಟಡಗಳು ಸಂಪೂರ್ಣ ನಾಶವಾಗಿದ್ದವು. ಅದರ ಹೆಂಚುಗಳು ಒಡೆದು ಹೋಗಿ ಅಸ್ಥಿಪಂಜರದಂತೆ ಆಗಿದ್ದವು. ಇಡೀ ದ್ವೀಪದಲ್ಲಿ ಒಂದೇ ಒಂದು ಟಾಯ್ಲೆಟ್ ಆಗಲಿ, ಮಕ್ಕಳಿಗೆ ಮತ್ತು ಮಹಿಳೆಯರಿಗೆ ಬಟ್ಟೆ ಬದಲಾಯಿಸುವ ಕೊಠಡಿಯಾಗಲಿ ಕಾಣಲಿಲ್ಲ. ನೀರಿನಲ್ಲಿ ಈಜಾಡುತ್ತಿದ್ದ ಮಕ್ಕಳು, ಹುಡುಗಿಯರು ಅದೇ ಒದ್ದೆ ಬಟ್ಟೆಯಲ್ಲಿ ವಾಪಾಸು ಮೈನ್‌ಲ್ಯಾಂಡ್‌ಗೆ ಬರಬೇಕಾಗಿತ್ತು. ಇಂಥ ರಮಣೀಯ ದ್ವೀಪದಲ್ಲಿ ಮೂಲಭೂತ ಸೌಕರ್ಯ ಮಾತ್ರ ಸೊನ್ನೆ ಆಗಿತ್ತು. ಸರ್ಕಾರ ಯಾಕೆ ಈ ರೀತಿಯ ನಿರ್ಲಕ್ಷ್ಯ ಮಾಡಿದೆ ಎಂದು ಗೊತ್ತಾಗಿಲ್ಲ. ಇನ್ನುಳಿದಂತೆ ದ್ವೀಪದಲ್ಲಿ ತುಂಬಾ ಚೇತೋಹಾರಿ ಘಟನೆಗಳು ಆಗುತ್ತಿದ್ದವು. ತಮ್ಮ ವಿಚಿತ್ರ ಡ್ರೆಸ್‌ನ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದ ಸುಂದರ ಕನ್ನೆಯರು ನೀರಿನಲ್ಲಿ ನಿಂತು, ಬಂಡೆಗಳ ಮೇಲೆ ಹತ್ತಿ ಫೋಟೋ ತೆಗೆಸಿಕೊಳ್ಳುತ್ತಿದ್ದರು. ದ್ವೀಪದ ಪಶ್ಚಿಮ ದಿಕ್ಕಿನ ಬೀಚ್‌ನಲ್ಲಂತೂ ಜಾತ್ರೆಯಂತೆ ಜನ ನೀರಾಟ ಆಡುತ್ತಿದ್ದರು. ಇನ್ನೊಂದು ಕಡೆ ಪ್ರವಾಸಿಗಳಿಗೆ ಸಿಂಗಲ್ ರೈಡ್ ಬೈಕ್‌ನಂತಹ ವಾಹನ ಬಾಡಿಗೆಗೆ ಕೊಡುತ್ತಿದ್ದರು. ಸಮುದ್ರದಲ್ಲಿ ವೇಗವಾಗಿ ಹೋಗಿ ಹಿಂತಿರುಗಿ ಬರುವ ಹಾಗೆ. ನಾವು ನಾಲ್ಕು ಜನ ದ್ವೀಪದ ದಕ್ಷಿಣ ತುದಿಯಿಂದ ಉತ್ತರದ ತುದಿಯವರೆಗೆ ನಡೆದು ಹೋಗಲು ತೀರ್ಮಾನಿಸಿ ದಕ್ಷಿಣದಿಂದ ನಮ್ಮ ನಡಿಗೆ ಪ್ರಾರಂಭಿಸಿದೆವು. ಸುಂದರವಾದ ಪರಿಸರ, ವಿಚಿತ್ರ ಬಂಡೆಗಳು, ಸುನಿಲ್ ಫೋಟೋ ಕ್ಲಿಕ್ಕಿಸುತ್ತಿದ್ದ. ಅದೇ ನಾಲ್ಕು ಜನ ಅಂಕಲ್‌ಗಳು ನೀರಿನಲ್ಲಿ ಮುಳುಗಿ ಆಟ ಆಡುತ್ತಿದ್ದವರು ಮಾತನಾಡಿಸಿದರು. ನಮಗೂ ನೀರಿನಲ್ಲಿ ಈಜಾಡಲು ಬರುವಂತೆ ಕರೆದರು. ನಾವು ಆ ಉಪ್ಪು ನೀರಿನಲ್ಲಿ ಮುಳುಗಲು ತಯಾರಿರಲಿಲ್ಲ. ನಾವು ದಿನಾ ಸಮುದ್ರ ನೋಡುತ್ತೇವೆ ಎಂದು ಹೇಳಿದೆವು. ಅವರಿಗೆ ಸಮುದ್ರ ಹೊಸತು. ನಮಗೆ ಹಾಗಾ?. ದ್ವೀಪದ ಉತ್ತರದ ತುದಿ ತುಂಬಾ ಸುಂದರ ಮತ್ತು ಅಪಾಯಕಾರಿಯಾದದ್ದು. ಬೆಳೆದು ನಿಂತ ಅಗಾಧ ಗಿಡಗಂಟಿಗಳ ನಡುವೆ ಪ್ರೇಮಿಗಳು ಕುಳಿತು ಮಾತನಾಡುತ್ತಿದ್ದರು. ಉತ್ತರ ತುದಿಯನ್ನು ಬಂಡೆ ಹತ್ತಿ ತಲುಪಿದೆವು. ಅಲ್ಲಿಂದ ನಮಗೆ ಮೈನ್‌ಲ್ಯಾಂಡ್ ತುಂಬಾ ಸುಂದರವಾಗಿ ಕಾಣುತ್ತಿತ್ತು. ಕೆಳಗಡೆ ನೀಲಿಬಣ್ಣದ ಅಗಾಧ ಸಮುದ್ರವೂ ಭಯ ಹುಟ್ಟಿಸುತ್ತಿತ್ತು.

ಆಗಲೇ ಮಧ್ಯಾಹ್ನ 1 ಗಂಟೆ ಮೀರಿತ್ತು. ಬಿಸಿಲದಗೆ ಪ್ರಾರಂಭವಾಗಿ ನಾವು ವಾಪಾಸು ಬೋಟ್ ಬರುವ ಕಡೆ ಹೊರಟೆವು. ಈಗಲೂ ಬಣ್ಣ, ಬಣ್ಣದ ಡ್ರೆಸ್ ಹಾಗೂ ದೊಡ್ಡ ದೊಡ್ಡ ಟೋಪಿ ತೊಟ್ಟ ಪ್ರವಾಸಿಗಳ ಗುಂಪು ದ್ವೀಪಕ್ಕೆ ಆಗಮಿಸುತ್ತಿತ್ತು. ಇಲ್ಲೇ ಠಿಕಾಣೆ ಹೂಡುವಂತೆ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಊಟವನ್ನು ತಂದಿದ್ದರು. ನಾವು ಬರುತ್ತಿರ ಬೇಕಾದರೆ ಅದೇ ಕಿಲಾಡಿ ಅಂಕಲ್‌ಗಳು ನೀರಿನಿಂದ ಮೇಲೆ ದಡದಲ್ಲಿ ಕುಳಿತಿದ್ದರು. ಅವರಲ್ಲಿ ಒಬ್ಬರು ದೊಡ್ಡ ತೆಂಗಿನಕಾಯಿ ಹಾಗಿನ ಚೆಂಡಿನಂತ ವಸ್ತು ಹಿಡಿದು ಎಳನೀರು ಕುಡಿದಂತೆ ಕುಡಿಯುತ್ತಿದ್ದರು. ನನಗೆ ಅಚ್ಚರಿಯಾಗಿ ಅದೇನೆಂದು ನೋಡಲು ಹತ್ತಿರ ಹೋದೆ. ಅಬ್ಬಾ ! ಮಹಾನ್ ಪ್ರಚಂಡರು, ಇಡೀ ವಿಸ್ಕಿ ಬಾಟಲಿಗೆ ದೊಡ್ಡ ಬಾತ್ ಟವೆಲ್ ಸುತ್ತಿ ಚೆಂಡಿನಂತೆ ಮಾಡಿಕೊಂಡು ಯಾರಿಗೂ ಗೊತ್ತಾಗದ ಹಾಗೆ ಕುಡಿಯುತ್ತಿದ್ದರು! ನನಗೀಗ ಗೊತ್ತಾಯಿತು ಬೋಟಿನಲ್ಲಿ ಬರುವಾಗ ಚೀಲವನ್ನು ಮಗುವಿನಂತೆ ತಬ್ಬಿಕೊಂಡಿದ್ದು ಯಾಕೆ ಅಂತ!

ಈಗ ನಾವು ವಾಪಾಸು ಹೊರಡಲು ಬೋಟ್ ಬರುವ ಕಡೆ ಹೊರಟೆವು. ಆಗಲೇ ಸಮುದ್ರದಲ್ಲಿ ಬೋಟ್ ಬಂದು ನಿಂತಿತ್ತು. ದಡದ ಹತ್ತಿರದಿಂದ ಸಪೋರ್ಟಿಂಗ್ ಬೋಟ್ ಬಳಿ ಜನ ಕಿಕ್ಕಿರಿದು ನಿಂತಿದ್ದರು. ನಾವು ನಾಲ್ಕೂ ಜನ ಓಡೋಡುತ್ತಾ ಬಂದೆವು. ಸಪೋರ್ಟಿಂಗ್ ಬೋಟಿನಲ್ಲಿ ಜನ ತುಂಬಿ ತುಳುಕಾಡುತ್ತಿದ್ದರು. ಗಜಗಮನೆಯರು, ವಯಸ್ಸಾದವರು, ಮಕ್ಕಳನ್ನು ತಂದವರು ಕಷ್ಟಪಟ್ಟು ಬೋಟ್ ಹತ್ತುತ್ತಿದ್ದರು. ನನಗಂತೂ ಆಶ್ಚರ್ಯ! ಇಷ್ಟು ಜನ ಹೇಗೆ ಈ ಬೋಟ್‌ಗೆ ಬರುತ್ತಿದ್ದಾರೆ ಎಂದು! ಅಷ್ಟರಲ್ಲಿ ನಮ್ಮ ಸಪೋರ್ಟಿಂಗ್ ಬೋಟ್‌ನ ಡ್ರೈವರ್‌ಗೆ ಜ್ಞಾನೋದಯವಾಯಿತೆಂದು ಕಾಣುತ್ತದೆ.
’ಬಿಳಿ ಚೀಟಿ ಇದ್ದವರು ಬೋಟ್‌ನಿಂದ ಇಳಿರಿ, ಪಿಂಕ್ ಚೀಟಿ ಇದ್ದವರು ಮಾತ್ರ ಬೋಟ್ ಹತ್ತಿ’ ಎಂದು ಕೂಗಿದ. ಅನೇಕ ಜನರು ಕುಳಿತಲ್ಲಿಂದಲೇ ಗಲಾಟೆ ಪ್ರಾರಂಭಿಸಿದರು. ವಿಷಯ ಏನೆಂದರೆ ಇಲಾಖೆಯ ಬೋಟ್‌ನಲ್ಲಿ ಬಂದವರಿಗೆ ಪಿಂಕ್ ಕಲರಿನ ಚೀಟಿ ಕೊಡುತ್ತಾರೆ, ಪ್ರೈವೆಟ್ ಬೋಟಿನಲ್ಲಿ ಬಂದವರಿಗೆ ಬಿಳಿ ಕಲರಿನ ಚೀಟಿ ಕೊಡುತ್ತಾರೆ. ವಾಪಾಸು ಬರುವಾಗ ಪ್ರವಾಸಿಗರು ಯಾವ ಬೋಟ್‌ನಲ್ಲಿ ಬರಬೇಕೆಂದು ಗೊತ್ತಾಗದೇ ಈ ಇಲಾಖೆ ಬೋಟ್‌ಗೆ ಬರಲು ಸಪೋರ್ಟಿಂಗ್ ಬೋಟ್ ಹತ್ತಿದ್ದರು. ಅವರು ಇಕ್ಕಟ್ಟಿನಲ್ಲಿ ಇಳಿಯಲು ಸಾಧ್ಯವಾಗದೇ , ಮೊದಲೇ ಹೇಳಬೇಕಾಗಿತ್ತು ನಾವು ಬೇಕಾದರೆ ಹಣ ಕೊಡುತ್ತೇವೆ ಎಂಬಿತ್ಯಾದಿ ಮಾತನಾಡುತ್ತಾ ಬೈಯುತ್ತಿದ್ದರೆ, ಈ ಬಿಳಿಚೀಟಿ ಮತ್ತು ಪಿಂಕ್ ಚೀಟಿ ಗದ್ದಲದಲ್ಲಿ ಏನೊಂದೂ ಅರ್ಥವಾಗದೆ ಒಬ್ಬ ಅಂಕಲ್ ಎದ್ದು ನಿಂತು ’ನಂದು ಪಿಂಕ್ ಚೆಡ್ಡಿ’ ಎಂದು ಘೋಷಿಸಿ ಇಡೀ ಗಲಾಟೆಗೆ ‘A’ ಸರ್ಟಿಫಿಕೆಟ್‌ನ ಟಚ್ ಕೊಟ್ಟ! ಎಲ್ಲರೂ ಗಾಬರಿಯಾಗಿ ಅವನನ್ನು ನೋಡುತ್ತಿದ್ದರೆ, ಒಬ್ಬ ಯುವತಿ ,ಅಯ್ಯೋ ! ಅಂಕಲ್ ಅದು ’ಪಿಂಕ್ ಚೆಡ್ಡಿ’ ಅಲ್ಲ, ’ಪಿಂಕ್ ಚೀಟಿ’ ಎಂದು ಸರಿಪಡಿಸಿದಳು. ಅಂತು ’ಪಿಂಕ್ ಚೀಟಿ’ಯವರನ್ನು ಮಾತ್ರ ಕರೆದುಕೊಂಡು ಹೊರಟು, ಮತ್ತೆ ದೊಡ್ಡ ಬೋಟ್‌ಗೆ ವರ್ಗಾವಣೆಗೊಂಡು ಹೊರಟೆವು. ಆ ಹೊತ್ತಿಗೆ ಸಮುದ್ರದಲ್ಲಿ ಅಲ್ಲಲ್ಲಿ ಡಾಲ್ಫಿನ್‌ನಂತ ಮೀನುಗಳು ನೀರಿನಿಂದ ಮೇಲಕ್ಕೆ ಹಾರಿ ಹಾರಿ ಆಟ ಆಡುತ್ತಿದ್ದವು. ಮಕ್ಕಳೆಲ್ಲಾ ಖುಷಿಯಿಂದ ಅವುಗಳನ್ನು ನೋಡುತ್ತಿದ್ದವು. ಎಲ್ಲರೂ ಸಂತೋಷದಿಂದ ಫೋಟೋ ತೆಗೆಯುತ್ತಾ ಮಾತನಾಡುತ್ತಿರಬೇಕಾದರೆ ಪುನಃ ಹಾರ್ಬರ್ ಬಂತು. ಈ ಸುಂದರ , ಸಂತೋಷದಾಯಕ ಪಿಕ್‌ನಿಕ್‌ಗೆ ಒಂದು ಪ್ರೀತಿಯ ವಿದಾಯ ಹೇಳುತ್ತಾ ನಾವು ನಾಲ್ಕೂ ಜನ ಊರಿನತ್ತ ಹೊರಟೆವು.

Exit mobile version