Kundapra.com ಕುಂದಾಪ್ರ ಡಾಟ್ ಕಾಂ

ಪ್ರಗತಿ ಪರಿಶೀಲನಾ ಸಭೆ: ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಜನಪ್ರತಿನಿಧಿಗಳು

ಕುಂದಾಪ್ರ ಡಾಟ್ ಕಾಂ ಸುದ್ದಿ

ಕುಂದಾಪುರ: ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಪ್ರಗತಿ ಪರಿಶೀಲನಾ ಸಭೆ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ಮನೆ ನಿವೇಶನ, ಕೃಷಿ, ತೋಟಗಾರಿಕೆ, ಆರೋಗ್ಯ, ಸಮಾಜ ಕಲ್ಯಾಣ, ಲೋಕೋಪಯೋಗಿ ಹಾಗೂ ಇತರ ಇಲಾಖೆಗಳ ಪ್ರಗತಿಯ ಬಗ್ಗೆ ಅವಲೋಕಿಸಿದ ಬಳಿಕ ಮಾತನಾಡಿ ಲಭ್ಯವಿರುವ ಸಂಪನ್ಮೂಲಗಳನ್ನು ಸದ್ಭಳಕೆ ಮಾಡಿಕೊಂಡು ಜನರಿಗೆ ಹೆಚ್ಚಿನ ಸೌಲಭ್ಯ ನೀಡುವತ್ತ ಗಮನ ಹರಿಸಬೇಕಿದೆ. ಅಧಿಕಾರಿಗಳು ಈ ಬಗ್ಗೆ ಮತ್ತಷ್ಟು ನಿಗಾವಹಿಸಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.

ತೋಟಗಾರಿಕಾ ಇಲಾಖೆಯನ್ನು ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು, ರೈತರಿಗೆ ಅನುಕೂಲ ಮಾಡುವಂತೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರೇ, ಕೃಷಿ ಇಲಾಖೆ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ನೀಡಲಾದ ಪರಿಹಾರ, ಭೂ ಸಮೃದ್ಧಿ ಯೋಜನೆ, ಸೇವಾ ಕೇಂದ್ರ ಮುಂತಾದವುಗಳ ಬಗ್ಗೆ ವಿವರಿಸಿದರು. ಅಕ್ಷರ ದಾಸೋಹದಲ್ಲಿ ಅಕ್ಕಿ ಹಾಗೂ ಗೋಧಿಯಲ್ಲಿ ಹುಳುಗಳಿರುವ ಬಗ್ಗೆ ಅಳಲು ತೋಡಿಕೊಂಡು ಅಧಿಕಾರಿ ಪ್ರತಿ ಮೂರು ತಿಂಗಳ ಆಹಾರ ವಸ್ತುಗಳು ಗೋದಾಮಿನಲ್ಲಿ ದಾಸ್ತಾನುಗೊಳ್ಳುವುದರಿಂದ ಸಹಜವಾಗಿ ಹುಳುಗಳು ಬರುತ್ತಿದೆ. ಪ್ರತಿ ತಿಂಗಳು ಮಕ್ಕಳಿಗೆ ಬೇಕಾಗುವಷ್ಟು ಆಹಾರ ದಾಸ್ತಾನು ಮಾಡಿದರೇ ಹುಳುಗಳಾಗುವುದನ್ನು ತಪ್ಪಿಸಬಹುದು. ಅಂಗನವಾಡಿಗಳಲ್ಲಿ ಮಕ್ಕಳಿಗೆ ನೀಡುವ ಆಹಾರವನ್ನು ಸ್ವಚ್ಚಗೊಳಿಸಿದ ಬಳಿಕವೇ ಮಕ್ಕಳಿಗೆ ನೀಡುವಂತೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದರು. ಕುಂದಾಪುರ ಪುರಸಭೆಗೆ ಆನಗಳ್ಳಿ, ಬಸ್ರೂರು ಪಂಚಾಯತಿಗಳಿಂದ ನೀರಿನ ಬಿಲ್ ಬಾಕಿ ಇರುವ ಬಗ್ಗೆ, ವಿದ್ಯಾರ್ಥಿನಿ ನಿಲಯ, ಆರೋಗ್ಯ ಕೇಂದ್ರಗಳ ದುರಸ್ತಿ, ಲೋಕೋಪಯೋಗಿ ಇಲಾಖೆ ಹಾಗೂ ನೀರು ಸರಬರಾಜು ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆದವು. (ಕುಂದಾಪ್ರ ಡಾಟ್ ಕಾಂ)

ಸಭೆಯಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಮಾತನಾಡಿ ಕೊಲ್ಲೂರಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಟ್ಟಡ ಪಾಳು ಬಿದ್ದಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬಂದಿದೆ. ಈ ಬಗ್ಗೆ ಇಲಾಖೆ ಕ್ರಮ ಕೈಗೊಂಡಿಲ್ಲ. ರಾಷ್ಟ್ರೀಯ ಸಂಪತ್ತು ನಾಶವಾಗುತ್ತಿದೆ. ಅದನ್ನು ತೆರವುಗೊಳಿಸುವುದೋ, ದುರಸ್ತಿಗೊಳಿಸುವುದೋ ಏನಾದರೂ ಮಾಡಬೇಕಲ್ಲವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಮುಂದುವರಿದು ಮಾತನಾಡಿ ಕುಂದಾಪುರ ವಿದ್ಯಾರ್ಥಿನಿ ನಿಲಯಕ್ಕೆ ಜಾಗವಿಲ್ಲ ಎಂದು ದೂರುತ್ತಿರಿ. ಆದರೆ ವಿದ್ಯಾರ್ಥಿನಿ ನಿಲಯ ಕಟ್ಟುವುದಕ್ಕೆ ಬೇಕಾದಷ್ಟು ಸ್ಥಳ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿಯೇ ಇದೆ. ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕಾಗಿದೆ. ಕುಂದಾಪುರದ ನೆಹರು ಮೈದಾನದಲ್ಲಿ ವಿದ್ಯಾರ್ಥಿ ನಿಲಯದ ಪಕ್ಕದಲ್ಲಿಯೇ ಯಕ್ಷಗಾನ ನಡೆಸಲಾಗುತ್ತಿದೆ. ಇದರಿಂದ ಮಕ್ಕಳಿಗೆ ಆಗುವ ತೊಂದರೆಯ ಬಗ್ಗೆ ಯಾರಾದರೂ ಗಮನ ಹರಿಸಿದ್ದೀರಾ ಎಂದು ಪ್ರಶ್ನಿಸಿದರು. (ಕುಂದಾಪ್ರ ಡಾಟ್ ಕಾಂ)

ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಡಾ| ವಿಶಾಲ್ ಮಾತನಾಡಿ ತಾಲೂಕಿನಲ್ಲಿರುವ ನೀರಿನ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಂಬಂಧಿತ ಇಲಾಖೆಗಳೊಂದಿಗೆ ಸಂವಹನ ನಡೆಸಬೇಕು. ಇಲಾಖೆಗಳಲ್ಲಿ ಮಾನವ ಸಂಪನ್ಮೂಲಗಳ ಕೊರತೆಯ ಹೊರತಾಗಿಯೂ ಜನಪರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮೊದಲ ಆದ್ಯತೆ ನೀಡಬೇಕು. ವಿದ್ಯಾರ್ಥಿ ನಿಲಯ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಮುನ್ನಡೆಸುವುದರ ಬಗ್ಗೆ ಗಮನ ಹರಿಸಬೇಕು ಎಂದು ನಿರ್ದೇಶನ ಮಾಡಿದರು.

ವಿವಿಧ ಇಲಾಖೆಗಳಲ್ಲಿ ಮಂದಗತಿಯ ಕೆಲಸ, ಕರ್ತವ್ಯ ಲೋಪವೆಸಗುತ್ತಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಭಾಸ್ಕರ ಬಿಲ್ಲವ , ಪುರಸಭಾ ಅಧ್ಯಕ್ಷೆ ಕಲಾವತಿ, ಜಿ.ಪಂ.ಕಾರ್ಯನಿರ್ವಹಣಾಧಿಕಾರಿ ಕನಗವಲ್ಲಿ, ಕುಂದಾಪುರ ಉಪವಿಭಾಗಾಧೀಕಾರಿ ಚಾರುಲತಾ ಸೋಮಲ್, ತಾ.ಪಂ. ಕಾರ್ಯನಿರ್ವಹಣಾಽಕಾರಿ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.

Exit mobile version