Kundapra.com ಕುಂದಾಪ್ರ ಡಾಟ್ ಕಾಂ

ಪೋಲಿಯೋ ಮುಕ್ತ ವಿಶ್ವ, ಅಕ್ಷರಸ್ಥ ರಾಷ್ಟ್ರ ರೋಟರಿ ಗುರಿ: ಗವರ್ನರ್ ಡಾ. ಭರತೇಶ್ ಆದಿರಾಜ್

ಕುಂದಾಪುರ: ವಿಶ್ವವನ್ನು ಪೋಲಿಯೋ ಮುಕ್ತವಾಗಿಸಬೇಕೆಂದು ರೋಟರಿ ಕಳೆದ ಮೂವತ್ತು ವರ್ಷಗಳಿಂದ ಪಣತೊಟ್ಟಿದೆ. ಭಾರತವೂ ಸೇರಿದಂತೆ ಎಲ್ಲಾ ದೇಶಗಳಲ್ಲಿ ಪೋಲಿಯೋ ನಿರ್ಮೂಲನಾ ಕಾರ್ಯಕ್ರಮ ಸಂಪೂರ್ಣವಾಗಿ ಯಶ ಕಂಡಿದ್ದೆ ಆದರೆ ಪಾಕಿಸ್ಥಾನ ಹಾಗೂ ಅಪ್ಘಾನಿಸ್ಥಾನವನ್ನು ಪೋಲಿಯೋ ಮುಕ್ತವಾಗಿಸಲು ಸಾಧ್ಯವಾಗಿಲ್ಲ. ಭಯೋತ್ಪಾದರ ಬೆದರಿಕೆ ಹಾಗೂ ಪೋಲಿಯೋ ಲಸಿಕೆಯ ಕುರಿತ ಅಪಪ್ರಚಾರ ಈ ಕಾರ್ಯಕ್ಕೆ ಅಡ್ಡಿ ಪಡಿಸುತ್ತಿದೆ ಎಂದು ರೋಟರಿ ಜಿಲ್ಲೆ 3180 ಗವರ್ನರ್ ಡಾ.ಭರತೇಶ್ ಆದಿರಾಜ್ ಆತಂಕ ವ್ಯಕ್ತಪಡಿಸಿದರು.

ಕುಂದಾಪುರ ರೋಟರಿ ನರ್ಸರಿ ಸ್ಕೂಲ್ ಹಾಲ್‌ನಲ್ಲಿ ಪತ್ರಕರ್ತರೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿ, ಪೋಲಿಯೋ ನಿರ್ಮೂಲನೆ ರೋಟರಿ ಸಂಸ್ಥೆಯ ಮುಖ್ಯ ಗುರಿ. ಭಯೋತ್ಪಾದಕರ ಅಪಪ್ರಚಾರ ಮತ್ತು ಬೆದರಿಕೆ ನಡುವೆಯೋ ಪೊಲಿಯೋ ನಿರ್ಮೂಲನೆಯತ್ತ ರೋಟರಿ ದಿಟ್ಟ ಹೆಜ್ಜೆಯನ್ನಿಟ್ಟಿದೆ. ವಿಶ್ವ ಪೋಲಿಯೋ ಮುಕ್ತವಾಗುವವರೆಗೂ ಪೋಲಿಯೋ ನಿರ್ಮೂಲನೆ ಕಾರ‍್ಯಕ್ರಮ ಮುಂದುವರಿಯಲಿದೆ ಎಂದು ಹೇಳಿದರು.

ವಿಶ್ವ ಭ್ರಾತತ್ವ ಹಾಗೂ ಶಾಂತಿ ಎಂಬ ಧ್ಯೇಯವಾಕ್ಯದೊಂದಿಗೆ ರೋಟರಿ ಮುನ್ನಡೆಯುತ್ತಿದ್ದು ಶಾಂತಿ ದೂತರ ಮೂಲಕ ಪ್ರಪಂಚದಾದ್ಯಂತ ಶಾಂತಿ ಸೌಹಾರ್ದತೆಯನ್ನು ಕಾಯುವ ಕೆಲಸ ಮಾಡಲಾಗುತ್ತಿದೆ. ರೋಟರಿಯ ಶಾಂತಿದೂತ ರಾಯಭಾರಿಗಳಿಗೆ ವಿಶ್ವದ ಆರು ದೇಶಗಳಲ್ಲಿ ವಿಶ್ವವಿದ್ಯಾನಿಲಯಗಳ ಮೂಲಕ ತರಬೇತಿ ನೀಡಲಾಗುತ್ತಿದ್ದು, ಆಂತರಿಕ ಬಿಟ್ಟಕ್ಕು ಇರುವಲ್ಲಿ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಸಾಕ್ಷರತೆಗಾಗಿ ‘ಟೀಚ್’. ಕುಂದಾಪುರ 30 ಶಾಲೆಗಳಿಗೆ ಇ-ಲರ್ನಿಂಗ್ ಕಿಟ್:
ಸಂಪೂರ್ಣ ಸಾಕ್ಷರತೆ ಸಾಧಿಸುವುದಕ್ಕಾಗಿ ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಕಳೆದ ವರ್ಷದಿಂದ ಟೀಚ್ ಎನ್ನುವ ಕಾರ್ಯಕ್ರಮ ರೋಟರಿ ಕೈಗೆತ್ತಿಕೊಂಡಿದ್ದು ಶಿಕ್ಷಕರ ಕೊರತೆಯನ್ನು ನೀಗಿಸುವುದು, ವಿದ್ಯಾರ್ಥಿಗಳು ಹಾಗೂ ವಯಸ್ಕರ ಶಿಕ್ಷಣ, ಆಧುನಿಕ ಪದ್ಧತಿಯ ಶಿಕ್ಷಣವನ್ನು ಇದು ಒಳಗೊಂಡಿದೆ. ಸಹಾಯಕ ಗವರ್ನರ್ ಸತೀಶ್ ಎನ್. ಶೇರುಗಾರ್ ಅವರ ಮುಂದಾಳತ್ವದಲ್ಲಿ ಕುಂದಾಪುರ ಗ್ರಾಮೀಣ ಭಾಗದ 30 ಶಾಲೆಗಳನ್ನು ಆಯ್ಕೆಮಾಡಿಕೊಂಡು ಇ ಕಿಟ್ ನೀಡಲಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯುತ್ ಕಾಣದ ಮನೆಯ ಮಕ್ಕಳಿಗೆ ಸೋಲಾರ್ ಲೈಟ್ ನೀಡಲಾಗುತ್ತಿದೆ. ರಾಜ್ಯದ 450 ಮನೆಗಳಿಲ್ಲಿ ಕುಂದಾಪುರದ 20 ಮನೆಗಳಿಗೆ ಸೋಲಾರ್ ದೀಪ ನೀಡಲಾಗುತ್ತಿದೆ. ಇದೆಲ್ಲವೂ ಶಿಕ್ಷಣವನ್ನು ಉತ್ತೇಜಿಸುವ ಮತ್ತು ಮಕ್ಕಳು ಸಂತೋಷದಿಂದ ಕಲಿಯುವ ಸಲುವಾಗಿ ಮಾಡಲಾಗಿದೆ. ಇದರೊಂದಿಗೆ ದೇಶಾದ್ಯಂತ ಆಶಾಕಿರಣ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಶಿಕ್ಷಣಕ್ಕಾಗಿ ಮಕ್ಕಳ ದತ್ತು ಸ್ವೀಕಾರ ಮಾಡಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ರೋಟರಿ ಫೌಂಡೇಶನ್:
ರೋಟರಿ ಫೌಂಡೇಶನ್ ಮೂಲಕ ಪ್ರಪಂಚದ ಬಡ ಜನರ ಸಹಾಯಕ್ಕಾಗಿ, ಮಾನವೀಯ ಕಾರ್ಯಕ್ಕಾಗಿ ಪಣ ತೊಟ್ಟಿದ್ದು ಪ್ರತಿ ಗವರ್ನರ್‌ಗೆ ಐದು ಲಕ್ಷ ಡಾಲರ್ ಹಣ ಸಂಗ್ರಹಿಸಿ ದೇಣಿಗೆ ನೀಡಲು ನೆರವಾಗುವಂತೆ ಸೂಚನೆ ನೀಡಲಾಗಿದೆ. ಅದರಂತೆ ಜಿಲ್ಲೆಯ 140 ರೋಟರಿ ಕ್ಲಬ್ ಹಾಗೂ ಸಾರ್ವಜನಿಕರು ಫೌಂಡೇಶನ್‌ನ ಈ ಮಹತ್ತರವಾದ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.

ರೋಟರಿ ಸಹಾಯಕ ಗವರ್ನರ್ ಸತೀಶ್ ಎನ್. ಶೇರುಗಾರ್, ರೋಟರಿ ಕುಂದಾಪುರ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಕೊಡ್ಲಾಡಿ ಸುಭಾಸ್‌ಚಂದ್ರ ಶೆಟ್ಟಿ, ಕಾರ್ಯದರ್ಶಿ ಸಂತೋಷ್ ಕೋಣಿ, 2016-17ನೇ ಸಾಲಿನ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಇದ್ದರು.

 

Exit mobile version