Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರಿನಲ್ಲಿ ಸುರಭಿ ವಾರ್ಷಿಕೋತ್ಸವ ‘ಸುರಭಿ ಜೈಸಿರಿ’ ಉದ್ಘಾಟನೆ

ಮನುಷ್ಯ ಜ್ಯೋತಿಯ ಕುಡಿಯಾಗಬೇಕು. ಕಿಡಿಯಾಗಬಾರದು: ಕೋ. ಶಿವಾನಂದ ಕಾರಂತ

ಬೈಂದೂರು: ಕಲೆ, ನೃತ್ಯ, ಸಾಹಿತ್ಯ ಮನುಷ್ಯ ಮನುಷ್ಯನನ್ನು ಪರಸ್ಪರ ಪ್ರೀತಿಸುವುದಕ್ಕಾಗಿ ಇರುವ ಮಾಧ್ಯಮ. ಅದು ಮನೋರಂಜನೆಯನ್ನು ನೀಡುವುದಷ್ಟೇ ಅಲ್ಲದೇ ಮಾನವರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ, ಸಾಮರಸ್ಯವನ್ನು ಬಿತ್ತುವ ಕೆಲಸ ಮಾಡುತ್ತದೆ ಎಂದು ನಿವೃತ್ತ ಉಪನ್ಯಾಸಕ ಕೋ. ಶಿವಾನಂದ ಕಾರಂತ ಹೇಳಿದರು.

ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಇದರ 16ನೇ ವರ್ಷದ ಸಂಭ್ರಮ ’ಸುರಭಿ ಜೈಸಿರಿ’ ಉದ್ಘಾಟಿಸಿ ಮಾತನಾಡಿ ದೇಶದಲ್ಲಿ ಇಂದು ಎಲ್ಲೆಂದರಲ್ಲಿ ಮುಗ್ದರ ಮಾರಣಹೋಮ, ಕೌರ್ಯಗಳು ಎಗ್ಗಿಲ್ಲದೇ ನಡೆಯುತ್ತಿದೆ. ಇದು ವೈವಿಧ್ಯಮಯ ಸಂಸ್ಕೃತಿಯ ಭಾರತದ ಏಕತೆಗೆ ಅಡ್ಡಿಯಾಗುತ್ತಿದೆ. ಮನುಷ್ಯರು ಪರಸ್ಪರ ಪ್ರಜ್ವಲಿಸುವ ಜ್ಯೋತಿಯ ಕುಡಿಗಳಾಗಬೇಕೇ ಹೊರತು ಕಿಡಿಯಾಗಬಾರದು ಎಂದರು.

ಸಿನಿಯರ್ ಸಿಟಿಜನ್ ಅಸೋಸಿಯೇಶನ್ ಅಧ್ಯಕ್ಷ ವಸಂತ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸೇನೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಚನ್ನಕೇಶವ ಉಪಾಧ್ಯಾಯ, ಸುರಭಿಯ ನಿರ್ದೇಶಕ ಕೃಷ್ಣಮೂರ್ತಿ ಉಡುಪ ಉಪಸ್ಥಿತರಿದ್ದರು. ಯುವ ಚಿತ್ರಕಲಾವಿದ ಗಿರೀಶ್ ಗಾಣಿಗ ತಗ್ಗರ್ಸೆ ಅವರನ್ನು ಸನ್ಮಾನಿಸಲಾಯಿತು. sಸಂಗೀತ ವಿದ್ವಾಂಸ ಮಧೂರು ಬಾಲಸುಬ್ರಹ್ಮಣ್ಯಂ ಹಾಗೂ ಯಕ್ಷಗುರು ಪ್ರಶಾಂತಮಯ್ಯ ದಾರಿಮಕ್ಕಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.

ಸುರಭಿ ಬೈಂದೂರು ನಿರ್ದೇಶಕ ಸುಧಾಕರ ಪಿ. ಪ್ರಾಸ್ತಾವಿಕ ಮಾತಗಳನ್ನಾಡಿದರು. ಅಧ್ಯಕ್ಷ ಶಿವರಾಮ ಕೊಠಾರಿ ಸ್ವಾಗತಿಸಿದರು. ಕಾರ್ಯದರ್ಶಿ ಲಕ್ಷ್ಮಣ ಕೊರಗ ವಂದಿಸಿದರು. ನಿರ್ದೇಶಕ ಗಣಪತಿ ಹೋಬಳಿದಾರ್ ನಿರೂಪಿಸಿದರು. ಯಕ್ಷೋತ್ಸವದಲ್ಲಿ ಪ್ರಶಾಂತ ಮಯ್ಯ ದಾರಿಮಕ್ಕಿ ನಿರ್ದೇಶನದಲ್ಲಿ ಯಕ್ಷ ಸುರಭಿ ಮಕ್ಕಳ ತಂಡದಿಂದ ಭೀಷ್ಮ ವಿಜಯ ಯಕ್ಷಗಾನ ಜರುಗಿತು.

Exit mobile version