Kundapra.com ಕುಂದಾಪ್ರ ಡಾಟ್ ಕಾಂ

ರೋಟರಿ ಕುಂದಾಪುರಕ್ಕೆ ರೋಟರಿ ಗವರ್ನರ್ ಅಧಿಕೃತ ಭೇಟಿ

ಕುಂದಾಪುರ: ಹತ್ತು ಹಲವು ಜನಹಿತ ಕಾರ್ಯಕ್ರಮಗಳನ್ನು ಆಯೋಜಿಸಿ, ಸೇವೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ರೋಟರಿ ಕ್ಲಬ್ ಕುಂದಾಪುರದ ಕಾರ್ಯ ವೈಖರಿ ಪ್ರಶಂಸನೀಯ. ಸೇವಾಗುಣ ಮನುಷ್ಯನ ವ್ಯಕ್ತಿತ್ವವನ್ನು ಉತ್ತಮ ಮಾರ್ಗದಲ್ಲಿ ಕೊಂಡೊಯ್ಯುವ ಜೊತೆಗೆ ಜಗತ್ತಿನ ಒಳಿತಿಗೆ ಕೊಡುಗೆಗಳನ್ನು ನೀಡಿದಂತಾಗುತ್ತದೆ. ಆದುದರಿಂದ ರೋಟರಿ ಫೌಂಡೇಶನ್‌ನಿಂದ ಸಿಗುವಂತಹ ಸೌಲಭ್ಯಗಳನ್ನು ಬಳಸಿಕೊಂಡು ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡುವಂತಾಗಲಿ ಎಂದು ರೋಟರಿ 3180 ಇದರ ರೋಟರಿ ಜಿಲ್ಲಾ ಗವರ್ನರ್ ಭರತೇಶ್ ಅಧಿರಾಜ್ ಹೇಳಿದರು.

ಅವರು ರೋಟರಿ ಕ್ಲಬ್ ಕುಂದಾಪುರಕ್ಕೆ ಅಧಿಕೃತ ಭೇಟಿ ನೀಡಿದ ಸಂದರ್ಭ ಕೋಟೇಶ್ವರದ ಸಹನಾ ಕನ್ವೆನ್‌ಶನ್ ಸೆಂಟರ್‌ನಲ್ಲಿ ಆಯೋಜಿಸಿದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು.

ರೋಟರಿ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್ ಕ್ಲಬ್‌ನ ಮುಖವಾಣಿ ಅಕಾರ್ಡ್‌ನ್ನು ಬಿಡುಗಡೆಗೊಳಿಸಿ ಮಾತನಾಡಿ ಮಾಡುವ ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆಯನ್ನಿಟ್ಟುಕೊಂಡು ಸಮಾಜಕ್ಕೆ ಅನನ್ಯ ಸೇವೆ ನೀಡುವ ನಿಟ್ಟಿನಲ್ಲಿ ರೋಟರಿ ಕುಂದಾಪುರ ಮಹತ್ತರ ಪಾತ್ರ ನಿರ್ವಹಿಸಿದೆ ಎಂದು ಅಧ್ಯಕ್ಷರನ್ನು ಅಭಿನಂದಿಸಿದರು.

2018-19ನೇ ಸಾಲಿನ 3182 ಇದರ ರೋಟರಿ ಜಿಲ್ಲಾ ಗವರ್ನರ್ ಆಗಿ ಆಯ್ಕೆಯಾದ ಅಭಿನಂದನ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಹನಾ ಗ್ರೂಫ್‌ನ ನಿರ್ದೇಶಕರಾದ ಸುರೇಂದ್ರ ಶೆಟ್ಟಿ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಭಾರತೀಯ ಜೀವ ವಿಮೆ ನಿಗಮದಲ್ಲಿ ಪ್ರಸಕ್ತ ಸಾಲಿನಲ್ಲಿ ಏಕೈಕ ಎಂಡಿಆರ್‌ಟಿಯಾಗಿ ಸಾಧನೆ ತೋರಿದ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರನ್ನು ರೋಟರಿ ಜಿಲ್ಲಾ ಗವರ್ನರ್ ಭರತೇಶ್ ಅಧಿರಾಜ್ ಅಭಿನಂದಿಸಿದರು.

ಕುಂದಾಪುರದ ಬಾಷಾ ಟ್ರಾನ್ಸ್‌ಪೋರ್ಟ್‌ನ ಮಾಲಕ ಫರೀದ್ ಬಾಷಾ ಸಾಹೇಬ್ ಅವರು ವಿವೇಕ ವಾಣಿ ಪತ್ರಕ ಬಿಡುಗಡೆಗೊಳಿಸಿದರು. ರೋಟರಿ ಜಿಲ್ಲಾ ಪ್ರಥಮ ಮಹಿಳೆ ಜಯಶ್ರೀ ಭರತೇಶ್ ಅಧಿರಾಜ್, ಜೋನಲ್ ಲೆಫ್ಟಿನೆಂಟ್ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು. ರೋಟರಿ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಟಿ. ಬಿ. ಶೆಟ್ಟಿ ರೋಟರಿ ಗವರ್ನರ್ ಪರಿಚಯ ಮಾಡಿದರು. ಕಾರ್ಯದರ್ಶಿ ಸಂತೋಷ ಕೋಣಿ ವರದಿ ವಾಚಿಸಿದರು. ನಿಯೋಜಿತ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ವಂದಿಸಿದರು. ಪಾರ್ವತಿ ಕೊತ್ವಾಲ್, ಶ್ರೀಧರ ಸುವರ್ಣ, ಶಶಿಧರ ಶೆಟ್ಟಿ ಸಾಲಗದ್ದೆ, ಪ್ರದೀಪ್ ವಾಜ್, ಮನೋಜ್ ನಾಯರ್ ಸಹಕರಿಸಿದರು.

Exit mobile version