Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಪರಿಷತ್ ಚುನಾವಣೆಯಲ್ಲಿ ಜಯಗಳಿಸಿದ ಪ್ರತಾಪಶ್ಚಂದ್ರ ಶೆಟ್ಟಿಗೆ ಅಭಿನಂದನೆ

ಬೈಂದೂರು: ಕಾಂಗ್ರೆಸ್ ಪಕ್ಷದ ನಾಯಕರ ಹಾಗೂ ಕಾರ್ಯಕರ್ತರ ಸಂಘಟಿತ ಹೋರಾಟದಿಂದಾಗಿ ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತ್ಯಧಿಕ ಸ್ಥಾನಗಳನ್ನು ಪಡೆಯುವ ಮೂಲಕ ಹೊಸ ಗಾಳಿ ಸೃಷ್ಟಿಸಿದೆ. ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿಯೂ ಇನ್ನೂ ಹೆಚ್ಚಿನ ಸ್ಥಾನ ಪಡೆಯುವ ಮೂಲಕ ಕಾಂಗ್ರೆಸ್ ಪಕ್ಷದ ಗತಕಾಲದ ವೈಭವವನ್ನು ಮರುಕಳಿಸುವಂತೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಆಸ್ಕರ್ ಫೆರ್ನಾಂಡಿಸ್ ಹೇಳಿದರು.

ಇಲ್ಲಿನ ರೋಟರಿ ಸಭಾ ಭವನದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಯ ಗಳಿಸಿದ ಪಕ್ಷದ ಅಭ್ಯರ್ಥಿ ಪ್ರತಾಪಶ್ಚಂದ್ರ ಶೆಟ್ಟಿ ಅವರ ಅಭಿನಂದನಾ ಸಭೆಯಲ್ಲಿ, ಅವರನ್ನು ಸನ್ಮಾನಿಸಿ ಮಾತನಾಡಿ ಬಡವರ ನಿರ್ಗತಿಕರ, ಕೃಷಿಕರ ಏಳಿಗೆಗಾಗಿ ನಿರಂತರವಾಗಿ ಹೋರಾಟ ಮಾಡುವ ತುಡಿತ ಹೊಂದಿರುವ ಪ್ರತಾಪಶ್ಚಂದ್ರ ಶೆಟ್ಟಿ ಅವರು ನಿರೀಕ್ಷಿತ ಮಟ್ಟಕ್ಕಿಂತ ಅಧಿಕ ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯಗಳಿಸಿದ್ದಾರೆ ಎಂದ ಅವರು ಸ್ವಾತಂತ್ರ್ಯ ಬಳಿಕ ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷ ೫೦ ವರ್ಷದಲ್ಲಿ ಏನು ಅಭಿವೃದ್ಧಿ ಮಾಡಿಲ್ಲ ಎಂದು ಟೀಕಿಸುತ್ತಿರುವ ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಜನರಿಗೆ ಆಶ್ವಾಸನೆಯ ಮಹಾಪೂರವನ್ನೇ ಹರಿಸಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ಆದರೆ ಬಿಜೆಪಿ ಸರ್ಕಾರ ತನ್ನ ಅಧಿಕಾರವಧಿಯಲ್ಲಿ ಏನೂ ಅಭಿವೃದ್ಧಿ ಮಾಡಿದೆ ಎನ್ನುವುದರ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ಲೇವಡಿ ಮಾಡಿದರು.

ಗೌರಿ ದೇವಾಡಿಗ ಸೇರ್ಪಡೆ: ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿಯ ಅಧ್ಯಕ್ಷೆ ಗೌರಿ ದೇವಾಡಿಗ ಹಾಗೂ ನಾವುಂದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಹಕ್ಕಾಡಿ ಜಗದೀಶ ಪೂಜಾರಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ನೂತನ ವಿಧಾನ ಪರಿಷತ್ ಸದಸ್ಯ ಪ್ರತಾಪಶ್ಚಂದ್ರ ಶೆಟ್ಟಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ಮಂಜುನಾಥ ಭಂಡಾರಿ, ಎಂ.ಎ. ಗಫೂರ್, ಶ್ರೀಮತಿ ಆಸ್ಕರ್ ಫೆರ್ನಾಂಡಿಸ್, ರಮೇಶ ಗಾಣಿಗ, ಪ್ರಕಾಶ್ಚಂದ್ರ ಶೆಟ್ಟಿ, ರಘುರಾಮ ಶೆಟ್ಟಿ, ರಿಯಾಜ್ ಅಹಮದ್, ವಾಸುದೇವ ಯಡಿಯಾಳ್, ಮಂಜುನಾಥ ಖಾರ್ವಿ, ಮಾರ್ಟಿನ್ ಎವರೆಸ್ಟ್ ಉಪಸ್ಥಿತರಿದ್ದರು. ಸಂಪಿಗೇಡಿ ಸಂಜೀವ ಶೆಟ್ಟಿ ಸ್ವಾಗತಿಸಿ, ರಾಜು ಪೂಜಾರಿ ನಿರೂಪಿಸಿದರು.

Exit mobile version