Kundapra.com ಕುಂದಾಪ್ರ ಡಾಟ್ ಕಾಂ

ಸಂಸ್ಕೃತಿಗೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಇದೆ: ಬಿಂದುಶ್ರೀ ಪ್ರಶಸ್ತಿ ಸ್ವೀಕರಿಸಿ ಈಶ್ವರಯ್ಯ

ಬೈಂದೂರು: ಎಲ್ಲೊ ಇರುವವರನ್ನು ನಮ್ಮವರು ಎಂದು ಒಪ್ಪಿಕೊಳ್ಳುವ, ನಾವೆಲ್ಲರೂ ಭಾರತೀಯರು ಎಂಬ ಭಾವನೆಯನ್ನು ಹುಟ್ಟಿಸಬಲ್ಲ ಶಕ್ತಿ ಇರುವುದು ಸಂಸ್ಕೃತಿಗೆ ಮಾತ್ರ. ಭೌಗೋಳಿಕ ಸೀಮಾರೇಖೆ, ರಾಜಕೀಯ ಯಾವುದೂ ಕೂಡ ನಾವೆಲ್ಲರೂ ಒಂದು ಎಂಬ ಭಾವನೆಯನ್ನು ಕಟ್ಟಿಕೊಡಲಾರವು. ಸಂಸ್ಕೃತಿಯಲ್ಲಿ ಮಾತ್ರ ಈ ಭಾಂದವ್ಯ ಕಾಣಲು ಸಾಧ್ಯ. ಈ ಭಾಂದವ್ಯ ಅಳಿದರೇ ಒಂದು ಎಂಬ ಭಾವನೆಗೆ ಧಕ್ಕೆ ಬರಲಿದೆ ಎಂದು ಹಿರಿಯ ವಿಮರ್ಶಕ ಎ. ಈಶ್ವರಯ್ಯ ಹೇಳಿದರು.

ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಇದರ 16ನೇ ವರ್ಷದ ಸಂಭ್ರಮ ’ಸುರಭಿ ಜೈಸಿರಿ’ಯಲ್ಲಿ ಬಿಂದುಶ್ರೀ ಪ್ರಶಸ್ತಿ ಸ್ವೀಕರಿಸಿದ ಅವರು ಮಾತನಾಡಿ ಅನಾದಿ ಕಾದಿಂದಲೂ ಬಂದ ಈ ಸಾಂಸ್ಕೃತಿಕ ಪರಂಪರೆಯನ್ನು, ಸಂಸ್ಕೃತಿಯ ಮೂರ್ತರೂಪವಾದ ಕಲೆ ಸಾಹಿತ್ಯ ಸಂಗೀತ ಮುಂತಾದವುಗಳ ಮೂಲಕ ಉಳಿಸಿಕೊಳ್ಳುವುದು ನಮ್ಮ ಮುಂದಿನ ಸವಾಲು. ಆ ಕೆಲಸವನ್ನು ಮಾಧ್ಯಮಗಳೋ, ಸಾಂಸ್ಕೃತಿಕ ಚಿಂತಕರೋ ಮಾಡುತ್ತಾರೆಂಬ ಭ್ರಮೆ ಬೇಡ.  ಕಲಾ ಸಂಸ್ಥೆಗಳಲ್ಲಿ ಇಂತಹ ಚಿಂತನೆ ಮೊಳೆತು ಸಂಸ್ಕೃತಿಯ ಉಳಿವಿನ ಕೆಲಸ ಸುಗಮವಾಗಲಿ ಎಂದು ಆಶಿಸಿದರು.

ಕಲೆಯ ವಿಕಾಸವಾಗುವುದರೊಂದಿಗೆ ತನ್ನ ಮೂಲರೂಪವನ್ನು ಉಳಿಸಿಕೊಳ್ಳಬೇಕು. ಬದಲಾವಣೆಗಾಗಿ ಬದಲಾವಣೆ ಅನಿವಾರ್ಯವೋ ಅಥವಾ ಆ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡುತ್ತಿದ್ದೆವಾ ಎಂಬ ಪ್ರಶ್ನೆಯನ್ನು ಕಾಡುತ್ತಿದೆ. ಮೂಲಧಾತುವನ್ನಿಟ್ಟುಕೊಳ್ಳದ ಬದಲಾವಣೆ ಎಂದಿಗೂ ಅಪಾಯಕಾರಿ. ಇದು ಮುಂದುವರಿದು ಮುಂದೊಂದು ದಿನ ನಮ್ಮನ್ನು ಭಾವನಾತ್ಮಕವಾಗಿ ಬಂಧಿಸುವ ಯಾವ ಮಾಧ್ಯಮವೂ ಇಲ್ಲದಾದಿತು ಎಂದರು. ಬುದ್ಧಿ ಸಮನಾದ ಭಾವ ಇದ್ದಾಗ ಮಾತ್ರ ಜಗತ್ತನ್ನು ಅರಿಯಲು ಸಾಧ್ಯ. ಬುದ್ಧಿಯಿದ್ದವನು ರಾಷ್ಟ್ರದ್ರೋಹಿಯೂ ಆಗಬಹುದು. ಬುದ್ದಿಯೊಂದಿಗೆ ಏನನ್ನು ಮಾಡಬೇಕು ಎಂಬ ವಿವೇಕ ಹುಟ್ಟಿಕೊಳ್ಳುವುದು ಮೌಲ್ಯದಿಂದ ಮಾತ್ರ. ಆ ಮೌಲ್ಯವನ್ನು ಕಟ್ಟಿಕೊಡುವ ಭಾವನಾತ್ಮಕ ಮಾಧ್ಯಮ ಕಲೆ, ಸಾಹಿತ್ಯ, ಸಂಗೀತ ಎಂದವರು ಬಣ್ಣಿಸಿದರು.

ಬಿಂದುಶ್ರೀ ಪ್ರಶಸ್ತಿ ಪ್ರದಾನಿಸಿ ಡಾ. ಎಚ್. ಶಾಂತರಾಮ ಮಾತನಾಡಿ ಮಕ್ಕಳಲ್ಲಿ ಸಂಸ್ಕೃತಿಯ ಅರಿವು ಮೂಡಿಸಿದಾಗ ಮಾತ್ರ ಹೊಸ ನಾಡಿನ ಉದಯವಾಗಲು ಸಾಧ್ಯ. ಬಹುಪಾಲು ಶಿಕ್ಷಣ ಸಂಸ್ಥೆಗಳು ಜ್ಞಾನಾರ್ಜನೆ, ಕೀರ್ತಿ ಕಾಮನೆಗಳಿಗಷ್ಟೇ ಸೀಮಿತವಾಗಿ ಕಲೆ ಅರಿವು ಮೂಡಿಸುವುದರಲ್ಲಿ ಸೋತಿವೆ. ಆದರೆ ಹೊರಗಿನ ಕಲಾ ಸಂಸ್ಥೆಗಳು ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ. ನಿಜವಾದ ಸಂಸ್ಕೃತಿಯ ಅರಿವು ಆ ಮೂಲಕ ಆಗುತ್ತಿದೆ ಎಂದರು.

ಮಾಜಿ ಜಿ.ಪಂ. ಅಧ್ಯಕ್ಷ ರಾಜು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಕಾರ್ಯದರ್ಶಿ ಲಕ್ಷ್ಮಣ ಕೊರಗ ಉಪಸ್ಥಿತರಿದ್ದರು. ಜಾದೂಗಾರ ಸತೀಶ್ ಹೆಮ್ಮಾಡಿ ಹಾಗೂ ನಾಗೇಂದ್ರ ಬಂಕೇಶ್ವರ, ಚಿತ್ರಕಾರ ಈರಯ್ಯ ಹಿರೇಮಠ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಓಂಗಣೇಶ್ ಉಪ್ಪುಂದ ಆಶಯ ನುಡಿಗಳನ್ನಾಡಿದರು. ಸುರಭಿ ನಿರ್ದೇಶಕ ಗಣಪತಿ ಹೋಬಳಿದಾರ್ ಪ್ರಾಸ್ತಾವಿಕ ಮಾತಗಳನ್ನಾಡಿದರು. ಅಧ್ಯಕ್ಷ ಶಿವರಾಮ ಕೊಠಾರಿ ಸ್ವಾಗತಿಸಿದರು. ವ್ಯವಸ್ಥಾಪಕ ಕೃಷ್ಣಮೂರ್ತಿ ಉಡುಪ ವಂದಿಸಿದರು. ನಿರ್ದೇಶಕ ಸುಧಾಕರ ಪಿ. ನಿರೂಪಿಸಿದರು. ಸುರಭಿ ರಿ. ಬೈಂದೂರು ಇದರ ಸುರಭಿ ಜೈಸಿರಿ ನಾದ-ಮಾಯ-ನೃತ್ಯ ವೈಭವದಲ್ಲಿ ಕೊರಗ ಸಾಂಸ್ಕೃತಿಕ ವೈಭವ ಜರುಗಿತು.

Exit mobile version