Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಮೂಡುಗೋಪಾಡಿ ಮುಸ್ಲಿಂಮರಿಂದ ಪರ್ಯಾಯಕ್ಕೆ ಹೊರೆಕಾಣಿಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರ ಐದನೇ ಪರ್ಯಾಯೋತ್ಸವದ ಅಂಗವಾಗಿ ಕುಂದಾಪುರ ತಾಲೂಕಿನ ಭಕ್ತರು ಅಪಾರ ಪ್ರಮಾಣದ ಹೊರೆಕಾಣಿಕೆ ಸಲ್ಲಿಸಿದ್ದಾರೆ. ಇದರ ನಡುವೆ ತಾಲೂಕಿನ ಮೂಡುಗೋಪಾಡಿಯ ಮುಸ್ಲಿಂ ಬಂಧುಗಳೂ ಸಹ ಹೊರೆ ಕಾಣಿಕೆಯನ್ನು ಸಲ್ಲಿಸುವ ಮೂಲಕ ಧರ್ಮ ಸೌಹಾರ್ದತೆಯನ್ನು ಮೆರೆದಿದ್ದಾರೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಉಡುಪಿ ಜಿಲ್ಲೆಯ ಮುಸ್ಲಿಂ ಸಂಘಟನೆಗಳು ಪರ್ಯಾಯ ಮಹೋತ್ಸವದಲ್ಲಿ ಭಾಗಿಯಾಗುವ ಕುರಿತಂತೆ ಇತ್ತಿಚಿಗೆ ತಿಳಿಸಿತ್ತು. ಅದರಂತೆ ಮೂಡುಗೋಪಾಡಿ ಮಸೀದಿಯ ಪರವಾಗಿ ಪರ್ಯಾಯಕ್ಕೆ ಹೊರೆಕಾಣಿಕೆ ಸಲ್ಲಿಸಲಾಯಿತು. ಧರ್ಮವೈಷಮ್ಯಗಳೇ ವಿಜೃಂಭಿಸುವ ಕಾಲಘಟ್ಟದಲ್ಲಿ ಮುಸ್ಲಿಂ ಬಂಧುಗಳ ಈ ಸೌಹಾರ್ದ ನಡೆ ಧರ್ಮ ಸಹಿಷ್ಟುಗಳ ಮೆಚ್ಚುಗೆಗೆ ಪಾತ್ರವಾಯಿತು. ಗೋಪಾಡಿಯ ಮುಸ್ಲಿಂ ಸಮುದಾಯದ ಮುಖಂಡರಾದ ಬಿ. ಎ. ಮೊಹಮ್ಮದ್, ಅದಮ್ ಸಾಹೆಬ್, ಬಿ.ಎಂ. ಹಂಝಾ, ರಫಿಕ್, ಅಬ್ದುಲ್ ಖಾದರ್, ಸಿದ್ದಿಕ್ ಹೊರೆಕಾಣಿಕೆ ಸಲ್ಲಿಕೆಯ ನೇತೃತ್ವ ವಹಿಸಿದ್ದರು.

ಕುಂದಾಪುರ ಡಿಎಸ್ಪಿ ಮಂಜುನಾಥ ಶೆಟ್ಟಿ ಎಸ್ಐ ನಾಸಿರ್ ಹುಸೆನ್, ಗೋಪಾಡಿ ಗ್ರಾ.ಪಂ ಉಪಾಧ್ಯಕ್ಷ ವೈಲೆಟ್ ಬರೆಟ್ಟೊ, ಸದಸ್ಯ ಸುರೇಶ್ ಶೆಟ್ಟಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಅಮರಪ್ರಸಾದ್ ಶೆಟ್ಟಿ, ಸುಬ್ರಹ್ಮಣ್ಯ ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪೇಜಾವರ ಶ್ರೀ ಅಭಿನಂದನಾ ಸಮಿತಿಯ ಅಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ, ಆನೆಗುಡ್ಡೆ ದೇವಳದ ಮೊಕ್ತೇಸರ ಸೂರ್ಯನಾರಾಯಣ ಉಪಾಧ್ಯ ಹಾಗೂ ನೇರಂಬಳ್ಳಿ ರಾಘವೇಂದ್ರ ರಾವ್ ಅವರ ನೇತೃತ್ವದಲ್ಲಿ ತಾಲೂಕಿನ ಬೈಂದೂರು, ಗಂಗೊಳ್ಳಿ, ಶಂಕರನಾರಾಯಣ, ಸಿದ್ಧಾಪುರ ಸೇರಿದಂತೆ ವಿವಿಧೆಡೆಗಳಿಂದ ತೆಂಗಿನಕಾಯಿ, ಬೆಲ್ಲ, ಅಕ್ಕಿ, ಅಡಿಕೆ, ತರಕಾರಿ ಸೇರಿದಂತೆ ವಿವಿಧ ದವಸಧಾನ್ಯಗಳನ್ನು ಕಾಣಿಕೆಯಾಗಿ ಸಮರ್ಪಿಸಲಾಯಿತು. ಕುಂದಾಪುರದ ನೆಹರು ಮೈದಾನದಿಂದ ತಾಲೂಕಿನ ಹೊರೆಯಾಣಿಕೆಯನ್ನು ವಾಹನಗಳಲ್ಲಿ ಉಡುಪಿಯ ಪರ್ಯಾಯ ಮಹೋತ್ಸದ ಉಗ್ರಾಣಕ್ಕೆ ಸಾಗಿಸಲಾಯಿತು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಸದಸ್ಯರು ಹಾಗೂ ಊರ ನಾಗರೀಕರು ಭಾಗವಹಿಸಿದ್ದರು.

Exit mobile version